ಅಂಕೋಲಾ ಪುರಸಭೆಗೆ ಬಿಜೆಪಿಯ ಸೂರಜ್ ನಾಯ್ಕ ಅಧ್ಯಕ್ಷ

KannadaprabhaNewsNetwork |  
Published : Aug 20, 2024, 12:48 AM IST
ಅಂಕೋಲಾ ಪುರಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸೂರಜ ನಾಯ್ಕ ಹಾಗೂ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಶೀಲಾ ಶೆಟ್ಟಿಯವರಿಗೆ ಸಂಸದ ಕಾಗೇರಿಯವರು ಶುಭ ಹಾರೈಸಿದರು.  | Kannada Prabha

ಸಾರಾಂಶ

ಪುರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಶೀಲಾ ಶೆಟ್ಟಿ 12 ಮತ ಆಯ್ಕೆಯಾದರೆ, ಕಾಂಗ್ರೆಸ್‌ನ ಸವಿತಾ ನಾಯಕ 11 ಮತ ಪಡೆದು ಪರಾಭವಗೊಂಡರು.

ಅಂಕೋಲಾ: ಪುರಸಭೆಯ ನೂತನ ಅಧ್ಯಕ್ಷರಾಗಿ ಬಿಜೆಪಿಯ ಸೂರಜ್ ಎಂ. ನಾಯ್ಕ, ಉಪಾಧ್ಯಕ್ಷೆಯಾಗಿ ಅದೇ ಪಕ್ಷದ ಶೀಲಾ ಶೆಟ್ಟಿ ಎಂ. ಶೆಟ್ಟಿ ಅವರು ಸೋಮವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

೨೩ ಸದಸ್ಯ ಬಲದ ಪುರಸಭೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನ ತಲಾ 9 ಸದಸ್ಯರಿದ್ದಾರೆ. ಅಲ್ಲದೇ ಐವರು ಪಕ್ಷೇತರು ಸದಸ್ಯರಿದ್ದು, ಇದರಲ್ಲಿ ಓರ್ವ ಪಕ್ಷೇತರ ಸದಸ್ಯ ಜಗದೀಶ ಮಾಸ್ತರ ಕಳೆದ ವರ್ಷ ಅನಾರೋಗ್ಯದಿಂದ ನಿಧನರಾಗಿದ್ದರು.

ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಸೂರಜ್ ಎಂ. ನಾಯ್ಕ, ಉಪಾಧ್ಯಕ್ಷ ಸ್ಥಾನಕ್ಕೆ ಶೀಲಾ ಶೆಟ್ಟಿ ಸ್ಪರ್ಧಿಸಿದ್ದರು. ಕಾಂಗ್ರೆಸ್‌ದಿಂದ ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ ಗೌಡ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸವಿತಾ ನಾಯಕ ಸ್ಪರ್ಧಿಸಿದ್ದರು.

ಪುರಸಭೆಯ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯರ ೯ ಮತ, ಪಕ್ಷೇತರ ಅಭ್ಯರ್ಥಿ ರೇಖಾ ಗಾಂವಕರ ಅವರ ೧ ಮತ ಹಾಗೂ ಕಾಂಗ್ರೆಸ್ ಶಾಸಕ ಸತೀಶ ಸೈಲ್ ಅವರ ೧ ಮತ ಸೇರಿ ೧೧ ಮತಗಳು ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಪ್ರಕಾಶ ಗೌಡ ಅವರಿಗೆ ಲಭ್ಯವಾದವು.

ಬಿಜೆಪಿಗೆ ತಮ್ಮ ಪಕ್ಷದ ಸದಸ್ಯರ ೮ ಮತ ಲಭ್ಯವಾದವು. ಅಲ್ಲದೇ ಬಿಜೆಪಿ ಸದಸ್ಯ ನಾಗರಾಜ್ ಐಗಳ ಅವರು ಮತದಾನಕ್ಕೆ ಬರದೆ ದೂರ ಉಳಿದರು. ಪಕ್ಷೇತರ ಮೂವರು ಅಭ್ಯರ್ಥಿಗಳು ಹಾಗೂ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ೧ ಮತ ಸೇರಿ ೧೨ ಮತಗಳು ಬಿಜೆಪಿಗೆ ಬಿದ್ದವು. ಹೀಗಾಗಿ ಬಿಜೆಪಿಯ ಅಭ್ಯರ್ಥಿ ಸೂರಜ್ ನಾಯ್ಕ ಜಯಶಾಲಿಯಾಗಿ ಪುರಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.

ಅದೇ ರೀತಿ ಪುರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಶೀಲಾ ಶೆಟ್ಟಿ 12 ಮತ ಆಯ್ಕೆಯಾದರೆ, ಕಾಂಗ್ರೆಸ್‌ನ ಸವಿತಾ ನಾಯಕ 11 ಮತ ಪಡೆದು ಪರಾಭವಗೊಂಡರು.

ತಾಲೂಕು ದಂಡಾಧಿಕಾರಿ ಅನಂತ ಶಂಕರ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಪುರಸಭೆ ಮುಖ್ಯಾಧಿಕಾರಿ ಅಕ್ಷತಾ ಉಪಸ್ಥಿತರಿದ್ದರು. ಬಿಜೆಪಿ ಹಾಗೂ ಕಾಂಗ್ರೆಸ್‌ನ ಪ್ರಮುಖರು ಸೇರಿದಂತೆ ಕಾರ್ಯಕರ್ತರು ಪುರಸಭೆ ಎದುರು ಜಮಾಯಿಸಿದ್ದರು. ಪಿಎಸ್‌ಐ ಉದ್ದಪ್ಪ ಧರೆಪ್ಪನವರ್ ನೇತೃತ್ವದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್‌ ಕೈಗೊಂಡಿದ್ದರು.ರಾಜಕೀಯದ ತವರು: ಅಂಕೋಲಾ ತಾಲೂಕು ರಾಜಕೀಯದ ತವರು ಮನೆಯಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ಆಯ್ಕೆಯಾಗಿರುವ ನೂತನ ಅಧ್ಯಕ್ಷ ಸೂರಜ್ ನಾಯ್ಕ ಹಾಗೂ ಉಪಾಧ್ಯಕ್ಷೆ ಶೀಲಾ ಶೆಟ್ಟಿ ತಮ್ಮ ಅಧಿಕಾರಾವಧಿಯಲ್ಲಿ ಹಿರಿಯರ ಸಲಹೆ, ಸೂಚನೆಗಳನ್ನು ಪಡೆದುಕೊಳ್ಳುವುದರೊಂದಿಗೆ ಮಾದರಿ ಪುರಸಭೆಯನ್ನಾಗಿಸುವಂತಾಗಲಿ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೆಹಲಿ ಭೇಟಿ ವೇಳೆ ಉಪಮುಖ್ಯಮಂತ್ರಿ ನಿಗೂಢ ಹೇಳಿಕೆ
ಹುಣಸೂರಿನಲ್ಲಿ ₹10 ಕೋಟಿ ಚಿನ್ನ ದೋಚಿದ್ದವರು ಬಿಹಾರದಲ್ಲಿ ಬಲೆಗೆ