ರಾಜ್ಯ ಸರ್ಕಾರದಿಂದ ಬಿಜೆಪಿ ಅವಧಿ ಯೋಜನೆ ಸ್ಥಗಿತ: ಮಾಜಿ ಸಚಿವ ರಾಜೂಗೌಡ

KannadaprabhaNewsNetwork |  
Published : Jul 28, 2025, 12:30 AM IST
ಸುರಪುರದ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ರಾಜುಗೌಡ ಮಾತನಾಡಿದರು. | Kannada Prabha

ಸಾರಾಂಶ

ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಜಾರಿಗೆ ತಂದಂತಹ ರೈತಪರ ಹಲವಾರು ಯೋಜನೆಗಳನ್ನು ಇಂದಿನ ರಾಜ್ಯ ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸಿ, ಅನ್ನದಾತರಿಗೆ ಮಹಾಮೋಸ ಮಾಡಿದೆ ಎಂದು ಮಾಜಿ ಸಚಿವ ನರಸಿಂಹ ನಾಯಕ (ರಾಜೂಗೌಡ) ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಸುರಪುರ

ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಜಾರಿಗೆ ತಂದಂತಹ ರೈತಪರ ಹಲವಾರು ಯೋಜನೆಗಳನ್ನು ಇಂದಿನ ರಾಜ್ಯ ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸಿ, ಅನ್ನದಾತರಿಗೆ ಮಹಾಮೋಸ ಮಾಡಿದೆ ಎಂದು ಮಾಜಿ ಸಚಿವ ನರಸಿಂಹ ನಾಯಕ (ರಾಜೂಗೌಡ) ಆರೋಪಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದಾಗಿನಿಂದಲೂ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ರೈತರ ಮಕ್ಕಳಿಗಾಗಿ ತಂದತಂಹ ವಿದ್ಯಾನಿಧಿ ಹಾಗೂ ಕಿಸಾನ್ ಸಮ್ಮಾನ್ ಸೇರಿದಂತೆ ವಿವಿಧ ಯೋಜನೆಗಳನ್ನು ಸ್ಥಗಿತಗೊಳಿಸಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಒಬ್ಬ ಸಾಮಾನ್ಯ ರೈತ ಒಂದು ಪಂಪ್‌ಸೆಟ್‌ಗೆ ವಿದ್ಯುತ್ ಪರಿವರ್ತಕ ಪಡೆಯಲು 3 ಲಕ್ಷ ರು.ಗಳ ಪಾವಿತಸಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಬಿತ್ತನೆ ಬೀಜದ ಮೇಲೆ ಪ್ರತಿ ಕ್ವಿಂಟಾಲ್‌ಗೆ ಶೇ. 20ರಷ್ಟು ಬೆಲೆ ಹೆಚ್ಚಿಸಿದೆ. ಬರ ಪರಿಹಾರದ 3454 ಕೋಟಿ ರು.ಗಳನ್ನು ಕಾಂಗ್ರೆಸ್ ಸರಕಾರ ಲೂಟಿ ಮಾಡಿದೆ ಎಂದು ಆರೋಪಿಸಿದರು.

ಯೂರಿಯಾ ಗೊಬ್ಬರದ ಕೊರತೆ:

ರಾಜ್ಯಕ್ಕೆ ಯೂರಿಯಾ ರಸಗೊಬ್ಬರ 6.30 ಲಕ್ಷ ಮೆಟ್ರಿಕ್ ಟನ್ ಅವಶ್ಯಕತೆಯಿದ್ದು, ಕೇಂದ್ರ ಸರಕಾರ 8.73 ಮೆಟ್ರಿಕ್‌ ಟನ್‌ ಗೊಬ್ಬರ ನೀಡಿದೆ. ಹೆಚ್ಚುವರಿಯಾಗಿ 2.43 ಮೆಟ್ರಿಕ್‌ ಟನ್ ಗೊಬ್ಬರವನ್ನು ಕಾಂಗ್ರೆಸ್‌ ಸರ್ಕಾರ ಕಾಳಸಂತೆಯಲ್ಲಿ ಮಾರಾಟಕ್ಕೆ ಮುಂದಾಯಿತೇ? ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ 3400ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ಯಾರ ಪರವಾಗಿ ನಿಂತಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಹಾಲಿನ ಪ್ರೋತ್ಸಾಹ ಧನ ನಿಲ್ಲಿಸಿದೆ. ಗೊಬ್ಬರದ ಮೇಲಿನ ತೆರಿಗೆಯನ್ನು ಹೆಚ್ಚಿಸಲಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಗೊಬ್ಬರದ ಅವಶ್ಯಕತೆ ನೀರಾವರಿ ಒಳಪಟ್ಟಂತಹ ಸುರಪುರ ಮತಕ್ಷೇತ್ರಕ್ಕೆ ಅವಶ್ಯಕತೆ ಇದೆ. ಗೊಬ್ಬರಕ್ಕಾಗಿ ಹಾವೇರಿಯಲ್ಲಿ ನಡೆದಂತಹ ಲಾಠಿಚಾರ್ಜ್ ಸುರಪುರದಲ್ಲಿ ನಡೆಯುವ ಕಾಲ ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಯೂರಿಯಾ ಗೊಬ್ಬರದ ಕೊರತೆ ಇಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದರೆ, ರಸಗೊಬ್ಬರದ ಕೊರತೆಯಿದೆ ಎಂದು ಕೃಷಿ ಸಚಿವರು ಹೇಳುತ್ತಾರೆ. ಸಿಎಂ ಮತ್ತು ಸಚಿವರ ಹೇಳಿಕೆಯಲ್ಲಿ ಸಾಮ್ಯತೆಯಿಲ್ಲ. ಯಾದಗಿರಿ ಜಿಲ್ಲೆಯಲ್ಲಿ ಹಲವಾರು ಪ್ರಭಾವಿ ರಾಜಕಾರಣಿಗಳ ಮನೆಗೆ ಯೂರಿಯಾ ಪೂರೈಕೆಯಾಗುತ್ತಿದೆ. ಇದರ ಬಗ್ಗೆ ಜಿಲ್ಲಾ ಕೃಷಿ ನಿರ್ದೇಶಕರು ಸ್ಪಷ್ಟೀಕರಣ ಕೊಡಬೇಕು ಎಂದು ಆಗ್ರಹಿಸಿದ ಅವರು, ಯೂರಿಯಾ ಪೂರೈಸಿದರೂ ಕೇಂದ್ರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದರು.

ಯಾದಗಿರಿ ಜಿಲ್ಲೆಯಲ್ಲಿ ಈಗಾಗಲೇ ಭತ್ತ (ಕವಳಿ) ನಾಟಿ ಆರಂಭವಾಗಿದ್ದು, ನಾಲ್ಕೈದು ದಿನಗಳಲ್ಲಿ ರಸಗೊಬ್ಬರ ಕೊಡಬೇಕು. ರಸಗೊಬ್ಬರ ದೊರೆಯದಿದ್ದರೆ ರೈತರು ರೊಚ್ಚಿಗೇಳಲಿದ್ದಾರೆ. ರೈತರಿಗೆ ಬೇಕಾದ ರಸಗೊಬ್ಬರ ಕೊಡಿ ಇಲ್ಲದಿದ್ದರೆ ರೈತರ ಸಿಟ್ಟು ಎದುರಿಸಿ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ, ವೇಣುಮಾಧವ ನಾಯಕ, ದುರ್ಗಪ್ಪ ಎಳಿಮೇಲ್, ಎಚ್.ಸಿ.ಪಾಟೀಲ್, ಬಲಭೀಮ ನಾಯಕ, ಬಸವರಾಜ ಅನ್ಸೂರ ಇತರರು ಇದ್ದರು.

PREV

Recommended Stories

ಮಾಲೇಗಾಂವ ಸ್ಫೋಟ ತೀರ್ಪು; ಸಂಭ್ರಮಾಚರಣೆ
ಧರ್ಮಸ್ಥಳ ಕ್ಷೇತ್ರದ ಹೆಸರು ಕೆಡಿಸಲು ಷಡ್ಯಂತ್ರ: ಪ್ರಮೋದ ಮುತಾಲಿಕ