ಕನ್ನಡಪ್ರಭ ವಾರ್ತೆ ಮೈಸೂರುಬಿಜೆಪಿಯವರ ಯಾತ್ರೆಗಳಿಂದ ಹಿಂದುತ್ವ ಗಟ್ಟಿಯಾಗಲ್ಲ. ಬಿಜೆಪಿಯವರು ರಾಜಕೀಯ ಕಾರಣಕ್ಕಾಗಿ ಧರ್ಮಸ್ಥಳ ಯಾತ್ರೆ ಮಾಡುತ್ತಿದ್ದಾರೆ. ಮಾಡಲಿ ಬಿಡಿ, ಅವರಿಗೆ ಇದರಿಂದ ರಾಜಕೀಯ ಲಾಭ ಸಿಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಮೈಸೂರು ತಾಲೂಕಿನ ಸಿದ್ದರಾಮನಹುಂಡಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ಬಗ್ಗೆ ನಮಗೆ ಅಪಾರವಾದ ಗೌರವವಿದೆ. ಎಸ್ಐಟಿ ರಚಿಸಿದಾಗ ವಿರೋಧ ಮಾಡದೆ ಇದ್ದವರು, ನಂತರದಲ್ಲಿ ಏನೂ ಸಿಗುವುದಿಲ್ಲ ಎಂದು ತಿಳಿದು ವಿರೋಧಿಸುತ್ತಿದ್ದಾರೆ. ಇದು ಡೋಂಗಿತನ ಅಲ್ವಾ ಎಂದು ಕಿಡಿಕಾರಿದರು.
ಬಿಜೆಪಿಯಿಂದ ಚಾಮುಂಡಿ ಚಲೋ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಂದುತ್ವ ಗಟ್ಟಿ ಆಗುತ್ತೆ ಎಂದು ಬಿಜೆಪಿ ಈ ಯಾತ್ರೆಗಳ ಪ್ಲ್ಯಾನ್ ಮಾಡುತ್ತಿದೆ. ಇವರಿಂದ ಹಿಂದುತ್ವ ಗಟ್ಟಿಯಾಗಲ್ಲ. ನಾನು ಕೂಡ ಹಿಂದೂ. ನಾವೆಲ್ಲರೂ ಕೂಡ ಹಿಂದೂ. ನಾನು ನಮ್ಮ ಊರಲ್ಲಿ ರಾಮಮಂದಿರ ಕಟ್ಟಿಸಿದ್ದೇನೆ. ಹಿಂದೂಗಳು ಎಂದರೆ ಸುಳ್ಳು ಹೇಳುವುದು, ಅಪಪ್ರಚಾರ ಮಾಡುವುದಲ್ಲ. ಮನುಷ್ಯತ್ವ ಇರುವವರು ಹಿಂದೂಗಳು. ಅಮಾನವೀಯ ನಡವಳಿಕೆ ತೋರುವವರು ಹಿಂದೂಗಳಲ್ಲ ಎಂದು ಹೇಳಿದರು.ಬಿಜೆಪಿಯವರು ದಸರಾದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಸುಳ್ಳು ಹೇಳುವುದನ್ನು ಬಿಟ್ಟು ಬಿಜೆಪಿಗೆ ಮತ್ತೇನು ಗೊತ್ತು?. ಬಿಜೆಪಿಯವರ ಹೋರಾಟದಿಂದ ದಸರಾ ಮೇಲೆ ಕೆಟ್ಟ ಪರಿಣಾಮ ಬೀರಲ್ಲ. ಹಿಂದೂಗಳೆಲ್ಲಾ ಬಿಜೆಪಿ ಜೊತೆ ಇಲ್ಲ ಎಂದರು.ಚಾಮುಂಡಿ ಬೆಟ್ಟ ಹಿಂದೂಗಳದ್ದಲ್ಲ ಎಂಬ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಡಿಕೆಶಿಯವರು ಹೇಳಿದ್ದು ಏನು ಎಂಬುದು ನನಗೆ ಗೊತ್ತಿಲ್ಲ. ಈಗ ದಸರಾ ವಿಚಾರದ ಬಗ್ಗೆ ಮಾತ್ರ ಚರ್ಚೆ ನಡಿಯುತ್ತಿದೆ. ಚಾಮುಂಡಿ ಬೆಟ್ಟದ ಬಗ್ಗೆ ಚರ್ಚೆಯಿಲ್ಲ. ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿನೇ ಇರಬಹುದು. ಆದರೆ, ದಸರಾ ನಾಡಹಬ್ಬ, ನಾಡಹಬ್ಬ ಎಲ್ಲರಿಗೂ ಸೇರಿದ್ದು ಎಂದು ಹೇಳಿದರು.
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ ಬಗ್ಗೆ ಪ್ರತಿಕ್ರಿಯಿಸಿ, ಕನ್ನಡದಲ್ಲಿ ಬುಕರ್ ಪ್ರಶಸ್ತಿ ಎಷ್ಟು ಜನರಿಗೆ ದೊರಕಿದೆ?. ಬಾನು ಮುಷ್ತಾಕ್‌ಗೆ ಪ್ರಶಸ್ತಿ ಬಂದಿದೆ, ಅವರನ್ನು ಗೌರವಿಸಲು ದಸರಾ ಉದ್ಘಾಟನೆಗೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.