ಸರ್ಕಾರದ ವಿರುದ್ಧ ಬಿಜೆಪಿ ಎಸ್ಸಿ,ಎಸ್ಟಿ ಮೋರ್ಚಾ ಪ್ರತಿಭಟನೆ

KannadaprabhaNewsNetwork |  
Published : Mar 01, 2025, 01:03 AM IST
ಗ್ಯಾರಂಟಿ ಯೋಜನೆಗಳಿಗೆ ಎಸ್ಸಿ, ಎಸ್ಟಿ ಅನುದಾನ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿ ಬಿಜೆಪಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಎಸ್ಸಿ, ಎಸ್ಟಿ ಜನಾಂಗದ ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನವನ್ನು ರಾಜ್ಯದ ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆಗೆ ಬಳಸಿ ಅನುದಾನ ದುರುಪಯೋಗ ಪಡಿಸಿಕೊಂಡು ದಲಿತರಿಗೆ ವಂಚನೆ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಎಸ್ಸಿ ಹಾಗೂ ಎಸ್ಟಿ ಮೋರ್ಚಾದಿಂದ ಜಿಲ್ಲಾಡಳಿತ ಭವನ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಎಸ್ಸಿ, ಎಸ್ಟಿ ಜನಾಂಗದ ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನವನ್ನು ರಾಜ್ಯದ ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆಗೆ ಬಳಸಿ ಅನುದಾನ ದುರುಪಯೋಗ ಪಡಿಸಿಕೊಂಡು ದಲಿತರಿಗೆ ವಂಚನೆ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಎಸ್ಸಿ ಹಾಗೂ ಎಸ್ಟಿ ಮೋರ್ಚಾದಿಂದ ಜಿಲ್ಲಾಡಳಿತ ಭವನ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ನವನಗರದ ಜಿಲ್ಲಾಡಳಿತ ಭವನಕ್ಕೆ ಪ್ರತಿಭಟನಾ ರ್‍ಯಾಲಿ ಮೂಲಕ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಮಾತನಾಡಿ, ಎರಡು ವರ್ಷದಿಂದ ಎಸ್ಸಿ,ಎಸ್ಟಿ ಸಮುದಾಯದವರ ಅಭಿವೃದ್ಧಿಗೆ ಯಾವುದೇ ಹಣ ನೀಡುತ್ತಿಲ್ಲ. ದಲಿತರ ಹಣ ದುರುಪಯೋಗ ಮಾಡಿಕೊಳ್ಳಲು ಸರ್ಕಾರ ಮುಂದಾದರೆ ಮುಂಬರುವ ದಿನಗಳಲ್ಲಿ ಶಾಸಕರ ಮನೆ ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.

ಶಾಸಕ ಸಿದ್ದು ಸವದಿ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್‌ ಅವರು ಬರೆದಿರುವ ಸಂವಿಧಾನ ಪುಸ್ತಕ ತಲೆಯ ಮೇಲೆ ಹೊತ್ತು ನಾಟಕ ಮಾಡುವ ಕಾಂಗ್ರೆಸ್ ಪಕ್ಷದವರು ಸಂವಿಧಾನದ ಆಶಯ ಈಡೇರಿಸದೇ ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನ ದುರುಪಯೋಗ ಪಡಿಸಿಕೊಳ್ಳುತ್ತಿದೆ. ರಾಜ್ಯದಲ್ಲಿ ಹಲವಾರು ನಿಮಗ ಸ್ಥಾಪನೆ ಮಾಡಲಾಗಿದೆ. ಹಿಂದಿನ ಎಲ್ಲಾ ಸರ್ಕಾರಗಳು ಫಲಾನುಭವಿಗಳಿಗೆ ಯೋಜನೆಗಳ ಲಾಭ ತಲುಪಿಸಲು ಹಣ ನೀಡುತ್ತಿದ್ದವು. ಆದರೆ ಎರಡು ವರ್ಷಗಳಿಂದ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ನಿಮಗಳಿಗೆ ಒಂದು ಪೈಸೆ ದುಡ್ಡು ನೀಡುತ್ತಿಲ್ಲ. ಗಂಗಾ ಕಲ್ಯಾಣ ಯೋಜನೆಯಡಿ ರೈತರಿಗೆ ಬೋರವೆಲ್ ಕೊರೆಸಲು ಆಗುತ್ತಿಲ್ಲ ಎಂದು ಆಪಾದಿಸಿದರು.

ವಿಧಾನ ಪರಿಷತ್ ಶಾಸಕ ಹಣಮಂತ ನಿರಾಣಿ ಮಾತನಾಡಿ, ಪಂಚ ಗ್ಯಾರಂಟಿಗಾಗಿ ಎಸ್ಸಿ, ಎಸ್ಟಿ ಹಣ ಬಳಸಿಕೊಂಡು ದಲಿತ ವರ್ಗದವರಿಗೆ ಸರ್ಕಾರ ಘೋರ ಅನ್ಯಾಯ ಮಾಡಿದೆ. ತೆಲಂಗಾಣ ರಾಜ್ಯದ ಚುನಾವಣೆಯಲ್ಲೂ ರಾಜ್ಯದ ಹಣ ಬಳಸಲಾಗಿದೆ. ರಾಜ್ಯದ ಜನರ ಅಭಿವೃದ್ಧಿಗೆ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಯಾವುದೇ ಯೋಜನೆಗೆ ಹಣವನ್ನು ಸರ್ಕಾರ ನೀಡುತ್ತಿಲ್ಲ ಎಂದು ದೂರಿದರು.

ಬಿಜೆಪಿ ರಾಜ್ಯ ಕಮಿಟಿ ಸದಸ್ಯ ಬಳ್ಳಾರಿ ಹಣಮಂತಪ್ಪ ಮಾತನಾಡಿದರು. ತುಮಕೂರಿನ ಓಂಕಾರ, ಮುಖಂಡರಾದ ಬಸವರಾಜ ಯಂಕಂಚಿ, ಹೂವಪ್ಪ ರಾಠೋಡ, ರಾಜು ನಾಯ್ಕರ, ಯಲ್ಲಪ್ಪ ಬೆಂಡಿಗೇರಿ, ಮುತ್ತಷ್ಣ ಬೆಣ್ಣೂರ, ಅಶೋಕ ಲಿಂಬಾವಳಿ, ಸಂಗಪ್ಪ ಗಾಣಿಗೇರ, ಉಮೇಶ ಹಂಚಿನಾಳ, ಬಸವರಾಜ ಹುನಗುಂದ, ಶಿವಾನಂದ ಟವಳಿ ಇತರರು ಇದ್ದರು.

ವಿಧಾನಸೌಧಕ್ಕೆ ಮುತ್ತಿಗೆ ಎಚ್ಚರಿಕೆ: ದಲಿತರ ಅಭಿವೃದ್ಧಿಗೆ ಸರ್ಕಾರ ಬದ್ಧವಿದೆ ಎಂದು ಹೇಳುತ್ತ ಇನ್ನೊಂದು ಕಡೆ ಬೆನ್ನಿಗೆ ಚೂರು ಹಾಕುವ ಕೆಲಸವನ್ನು ಸಿದ್ದರಾಮಯ್ಯದ ನೇತೃತ್ವದ ಸರ್ಕಾರ ಮಾಡುತ್ತಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಇಟ್ಟ ಹಣದಲ್ಲಿ ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳಿ. ದಲಿತರ ದುಡ್ಡು ಯಾಕೆ ಮುಟ್ಟುತ್ತೀರಿ ಎಂದು ಪ್ರಶ್ನಿಸಿದರು. ಎಸ್ಟಿ, ಎಸ್ಸಿ ವರ್ಗದ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳಲು ಸರ್ಕಾರ ಮುಂದಾದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಶಾಸಕ ಸಿದ್ದು ಸವದಿ ಎಚ್ಚರಿಕೆ ನೀಡಿದರು.

ರಾಜ್ಯ ಸರ್ಕಾರ ಆಯಾ ವರ್ಗದ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಯಾವುದೇ ಕಾರಣಕ್ಕೂ ಅನ್ಯ ಕಾರ್ಯಕ್ರಮಕ್ಕೆ ಬಳಸಿಕೊಳ್ಳಬಾರದು. ಗ್ಯಾರಂಟಿ ಯೋಜನೆಗೆ ಸರ್ಕಾರ ತನ್ನ ಖಜಾನೆಯಿಂದ ನೀಡಲಿ. ಒಂದು ಸಮುದಾಯದ ಅಭಿವೃದ್ಧಿಗೆ ಇಟ್ಟ ಹಣವನ್ನು ಬಳಸಿಕೊಂಡು ಗ್ಯಾರಂಟಿಗೆ ನೀಡುವುದು ಖಂಡನೀಯ.

-ಪಿ.ಸಿ.ಗದ್ದಿಗೌಡರ, ಸಂಸದ ಬಾಗಲಕೋಟೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ