ಎಂ.ಪಿ.ರೇಣುಕಾಚಾರ್ಯ. ಅವರು ಇಂದು ನ್ಯಾಯ ಕೇಳುತ್ತಿರುವವರನ್ನೇ ಭಿನ್ನಮತೀಯರೆನ್ನುತ್ತಾ, ಪಕ್ಷಕ್ಕೆ ಮತ್ತಷ್ಟು ಮುಜುಗರ ತರುತ್ತಿದ್ದು, ಅವರನ್ನು ಉಚ್ಚಾಟಿಸಬೇಕು ಎಂದು ಹೊನ್ನಾಳಿ ತಾಲೂಕು ಬಿಜೆಪಿ ಮುಖಂಡ ಶಾಂತರಾಜ ಪಾಟೀಲ್ ಆಗ್ರಹಿಸಿದ್ದಾರೆ.
ದಾವಣಗೆರೆ : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕುಟುಂಬದ ಬಗ್ಗೆ ಮೊದಲ ಬಾರಿಗೆ ಮಾತನಾಡಿ, ಬಂಡವಾಳ ಬಯಲಿಗೆ ತರುತ್ತೇನೆಂದ ಮೊದಲ ವ್ಯಕ್ತಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ. ಅವರು ಇಂದು ನ್ಯಾಯ ಕೇಳುತ್ತಿರುವವರನ್ನೇ ಭಿನ್ನಮತೀಯರೆನ್ನುತ್ತಾ, ಪಕ್ಷಕ್ಕೆ ಮತ್ತಷ್ಟು ಮುಜುಗರ ತರುತ್ತಿದ್ದು, ಅವರನ್ನು ಉಚ್ಚಾಟಿಸಬೇಕು ಎಂದು ಹೊನ್ನಾಳಿ ತಾಲೂಕು ಬಿಜೆಪಿ ಮುಖಂಡ ಶಾಂತರಾಜ ಪಾಟೀಲ್ ಆಗ್ರಹಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ರೇಣುಕಾಚಾರ್ಯ ನಮ್ಮೆಲ್ಲರ ಪರಿಶ್ರಮದಿಂದ ಮೊದಲ ಬಾರಿಗೆ ಶಾಸಕರಾಗಿದ್ದರು. ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಬೀದಿಗೆ ಬಂದು ಮಾತನಾಡುವ ಅಸಂಸ್ಕೃತಿಯನ್ನು ಶಿಸ್ತಿನ ಬಿಜೆಪಿಯಲ್ಲಿ ಮೊದಲು ಮಾಡಿದ್ದು, ಇಡೀ ದೇಶದಲ್ಲಿ ನಾಂದಿ ಹಾಡಿದ್ದೇ ಎಂ.ಪಿ.ರೇಣುಕಾಚಾರ್ಯ ಎಂದು ಟೀಕಿಸಿದರು.
ರಾಷ್ಟ್ರೀಯ ಶಿಸ್ತು ಪಾಲನಾ ಸಮಿತಿ ಪ್ರಮುಖರು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್‌ರಿಗೆ ಕೊಟ್ಟ ನೋಟಿಸ್ ವಿಚಾರವಾಗಿ ಬೀದಿಯಲ್ಲಿ ನಿಂತು, ನಾಯಕರ ಬಗ್ಗೆ ಮಾತನಾಡುತ್ತಾ ಪಕ್ಷಕ್ಕೆ ಅಗೌರವ ತರುತ್ತಿರುವುದು ಸರಿಯಲ್ಲ. ನಮ್ಮೆಲ್ಲರಿಗೂ ಪಕ್ಷ ಮುಖ್ಯ, ನಾವೆಲ್ಲರೂ ಪಕ್ಷದ ನಿಷ್ಟಾವಂತ ಕಾರ್ಯಕರ್ತರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ರೇಣುಕಾಚಾರ್ಯರನ್ನು ಹದ್ದುಬಸ್ತಿನಲ್ಲಿಟ್ಟು, ಬೀದಿರಂಪ ಮಾಡುವುದನ್ನು ನಿಲ್ಲಿಸುವಂತೆ ತಿಳಿಹೇಳಲಿ ಎಂದು ಆಗ್ರಹಿಸಿದರು.
ನಿಷ್ಟನಂತೆ ಮುಖವಾಡ ಧರಿಸಿದ ರೇಣುಕಾಚಾರ್ಯ ದಾವಣಗೆರೆ ಜಿಲ್ಲೆಗೆ, ಬಿಜೆಪಿಗೆ ಅಗೌರವ ತರುವಂತಹ ಪ್ರವೃತ್ತಿ ತೋರುತ್ತಿದ್ದಾರೆ. ಯಡಿಯೂರಪ್ಪ ನಮ್ಮೆಲ್ಲರಿಗೂ ಪ್ರಶ್ನಾತೀತ ನಾಯಕರು. ಅಂತಹವರ ಕುಟುಂಬವನ್ನು ಟೀಕಿಸುವುದೇ ಭಿನ್ನರ ಗುರಿ ಎಂಬ ಹೇಳಿಕೆ ನೀಡಿದ್ದಾರೆ, ಇದು ಖಂಡನೀಯ ಎಂದರು.
ನಿಕಟ ಪೂರ್ವ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲು ರಾಜ್ಯವ್ಯಾಪಿ ಸುತ್ತಾಡಿ, ಪಕ್ಷ ಕಟ್ಟಿದ್ದವರು. ಅಂತಹ ಕಟೀಲರನ್ನು ಬೃಹನ್ನಳೆ ಅಂತಾ ಟೀಕಿಸಿದ್ದರು. ಕುಮಾರ ಬಂಗಾರಪ್ಪಗೆ ಅನಾಥ ಶಿಶು ಎಂದಿದ್ದು ಖಂಡನೀಯ. ಅದೇ ಕುಮಾರ ಬಂಗಾರಪ್ಪ ತಂದೆ ಬಂಗಾರಪ್ಪರಿಂದಲೇ 2004ರಲ್ಲಿ ಮೊದಲ ಸಲ ರೇಣುಕಾಚಾರ್ಯ ಶಾಸಕನಾಗಿದ್ದನ್ನು ಮರೆಯಬಾರದು ಎಂದು ಸಲಹೆ ನೀಡಿದರು.
ಪಕ್ಷದ ಹೊನ್ನಾಳಿ ಮುಖಂಡರಾದ ಎ.ಬಿ.ಹನುಮಂತಪ್ಪ ಅರಕೆರೆ, ಮಾಸಡಿ ಸಿದ್ದೇಶ, ಪ್ರಭು, ಅಜಯ್ ರೆಡ್ಡಿ ಇತರರು ಇದ್ದರು.
ಕೋಟ್ ರಾಜ್ಯ ಬಿಜೆಪಿಯ ಭಿನ್ನಮತದ ಪಿತಾಮಹ ರೇಣುಕಾಚಾರ್ಯ. ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು. ಇಂತಹ ವ್ಯಕ್ತಿಗೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹದ್ದುಬಸ್ತಿನಲ್ಲಿಡಬೇಕು. ಅವರ ವರ್ತನೆಯಿಂದ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ಸಿನ ಕಡೆಗೆ ಹೋಗಲು ಮಾನಸಿಕವಾಗಿ ಸಿದ್ದರಿದ್ದಾರೆ. ಈಗಾಗಲೇ ಪಕ್ಷದ ಸಾಕಷ್ಟು ಕಾರ್ಯಕರ್ತರು ಜಿಲ್ಲೆಯಲ್ಲಿ ಕಾಂಗ್ರೆಸ್ಸಿಗೆ ಸೇರಿದ್ದಾರೆ
- ಶಾಂತರಾಜ ಪಾಟೀಲ, ಬಿಜೆಪಿ ಮುಖಂಡ, ಹೊನ್ನಾಳಿ