ಕನ್ನಡಪ್ರಭ ವಾರ್ತೆ ಬೆಂಗಳೂರು
ದೇಶದ ಇಂಧನ, ರಸಗೊಬ್ಬರ, ಪೆಟ್ರೋಲ್ ಸೇರಿ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಗೆ ಕೇಂದ್ರ ಬಿಜೆಪಿ ಸರ್ಕಾರವೇ ಕಾರಣ. ಜನಾಕ್ರೋಶ ಏನಿದ್ದರೂ ಬಿಜೆಪಿ ಸರ್ಕಾರದ ವಿರುದ್ಧ ವ್ಯಕ್ತವಾಗಬೇಕೇ ಹೊರತು ಬೆಲೆ ಏರಿಕೆ ತಗ್ಗಿಸಲು ಗ್ಯಾರಂಟಿ ಯೋಜನೆ ಕೊಟ್ಟ ನಮ್ಮ ವಿರುದ್ಧವಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.ಗುರುವಾರ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ಬಿಜೆಪಿಯ ರಾಜ್ಯ ನಾಯಕರಿಗೆ ನಾಚಿಕೆಯಾಗಬೇಕು. ಮೋದಿ ಅವರು ಡೀಸೆಲ್ ಬೆಲೆ ಏರಿಕೆ ಮಾಡಿದ್ದರಿಂದ ಸಾರಿಗೆ ವೆಚ್ಚ, ವಿದ್ಯುತ್ ದರ, ಕೃಷಿ ವೆಚ್ಚ, ತರಕಾರಿ ದಿನಸಿ ಬೆಲೆ, ಸಿಮೆಂಟ್, ಕಬ್ಬಿಣ ದರವಿಪರೀತ ಏರಿಕೆಯಾಗಿದೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ನ್ಯಾಯವಾಗಿ ಮೋದಿ ಅವರ ಸರ್ಕಾರದ ವಿರುದ್ಧ ಹೋರಾಡಬೇಕು. ಆದರೆ, ಬಡವರ ಪರವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧವಲ್ಲ ಎಂದರು.
ಬಿಜೆಪಿಯಲ್ಲಿ ಹಾಗೂ ಜನತಾದಳದಲ್ಲಿನ ಆಂತರಿಕ ಜಗಳ, ನಾಯಕತ್ವದ ಕೊರತೆ ಮುಚ್ಚಿಡಲು ಇಂದು ರಾಜ್ಯಾದ್ಯಂತ ಹೋರಾಟ ಮಾಡಲು ಮುಂದಾಗಿದ್ದಾರೆ. ನಮ್ಮದು ರೈತಪರ ಸರ್ಕಾರ, ಎಲ್ಲಾ ವರ್ಗದ ಜನರ ಪರವಾದ ಸರ್ಕಾರ. ನಾವು ರೈತರಿಗೆ ನೆರವಾಗಲು ಹಾಲಿನ ಬೆಲೆ 4 ರು. ಹೆಚ್ಚಳ ಮಾಡಿದ್ದೇವೆ. ದನಕರುಗಳ ಮೇವುಗಳಾದ ಇಂಡಿ, ಬೂಸಾ ಬೆಲೆ ಹೆಚ್ಚಾಗಿದೆ. ಹೀಗಾಗಿ ನಾವು ರೈತರಿಗೆ ನೆರವಾಗಲು 4 ರು. ಹೆಚ್ಚಿಗೆ ಸಿಗುವಂತೆ ಮಾಡಿದರೆ ಪ್ರತಿಭಟನೆ ಮಾಡುತ್ತೀರಿ. ಆಮೂಲಕ ನೀವು ರೈತ ವಿರೋಧಿ ಎಂಬುದನ್ನು ಸಾಬೀತುಪಡಿಸಿದ್ದೀರಿ ಎಂದು ವಾಗ್ದಾಳಿ ನಡೆಸಿದರು.ರಾಜ್ಯಾದ್ಯಂತ ಹೋರಾಟ:
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿದಿದ್ದರೂ ಬಿಜೆಪಿಯವರು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದಾರೆ. ಆದರೂ ಬಿಜೆಪಿಯವರು ಯಾಕೆ ಮಾತನಾಡುತ್ತಿಲ್ಲ? ಇದು ರಾಜ್ಯಮಟ್ಟದ ಹೋರಾಟ. ಇದೇ ಮಾದರಿಯಲ್ಲಿ ಜಿಲ್ಲಾ ಸಚಿವರ ನೇತೃತ್ವದಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಬೇಕು ಎಂದು ಶಾಸಕರು ಹಾಗೂ ಜಿಲ್ಲಾಧ್ಯಕ್ಷರಿಗೆ ಸೂಚನೆ ನೀಡುತ್ತೇನೆ. ಬೆಲೆ ಏರಿಕೆ ವಿಚಾರವಾಗಿ ರಾಜ್ಯದ ಜನರಿಗೆ ತಿಳಿಸಬೇಕು ಎಂದು ಹೇಳಿದರು.ಎಚ್ಡಿಕೆ ಅಣ್ಣ, ತಮ್ಮಂದಿರ ಆಸ್ತಿ ಎಲ್ಲಿಂದ ಬಂತು?
ಕೇಂದ್ರ ಸಚಿವ ಕುಮಾರಸ್ವಾಮಿ ನನ್ನ ವಿರುದ್ಧ ಟನ್ ಗಟ್ಟಲೆ ಸಾಕ್ಷಾಧಾರಗಳನ್ನು ಇಟ್ಟುಕೊಂಡಿದ್ದಾರೆ. ಅದನ್ನು ಲಾರಿಗಳಲ್ಲಿ ರಾಜ್ಯಪಾಲರ ಬಳಿ ಕಳುಹಿಸುತ್ತಿಲ್ಲ ಏಕೆ? ಮಿಸ್ಟರ್ ಕುಮಾರಸ್ವಾಮಿ, ಈ ಡಿ.ಕೆ.ಶಿವಕುಮಾರ್ ನಿನ್ನ ಹಾಗೂ ಬಿಜೆಪಿಯ ಗೊಡ್ಡು ಬೆದರಿಕೆಗೆ ಹೆದರುವ ಮಗ ಅಲ್ಲ. ನಮ್ಮ ಕಷ್ಟ, ನಮ್ಮ ಶ್ರಮ, ನಮ್ಮ ಬದುಕು. ನಾವು ಆಸ್ತಿ ಮಾಡಿಕೊಳ್ಳುತ್ತೇವೆ. ಅದರ ಸತ್ಯಾಸತ್ಯತೆ ಸರ್ಕಾರ ಪರಿಶೀಲನೆ ಮಾಡಲಿ. ನಾನು ನಿನ್ನ ಚರಿತ್ರೆಯನ್ನು ಇನ್ನು ಬಿಚ್ಚಿಲ್ಲ. ನಿಮ್ಮ ಅಣ್ಣ ತಮ್ಮಂದಿರ ಆಸ್ತಿ ಎಲ್ಲಿಂದ ಬಂತು ಎಂಬುದನ್ನು ನಾನಿನ್ನು ಬಿಚ್ಚಿಟ್ಟಿಲ್ಲ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.