ಬಿ.ನಾಗೇಂದ್ರ ವಜಾಗೆ ಒತ್ತಾಯಿಸಿ ಬಿಜೆಪಿ ಸತ್ಯಾಗ್ರಹ

KannadaprabhaNewsNetwork |  
Published : Aug 18, 2026, 01:30 AM IST
17ಕೆಡಿವಿಜಿ1, 2-ದಾವಣಗೆರೆ ಎಸಿ ಕಚೇರಿ ಬಳಿ ಸೋಮವಾರ ವಾಲ್ಮೀಕಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ಸಚಿವ ಬಿ.ನಾಗೇಂದ್ರ ವಜಾಗೆ ಒತ್ತಾಯಿಸಿ ಬಿಜೆಪಿ ಧರಣಿ ಸತ್ಯಾಗ್ರಹ ನಡೆಸಿತು. | Kannada Prabha

ಸಾರಾಂಶ

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಆರೋಪ ಹೊತ್ತ ಬಿ.ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕ ಹಾಗೂ ಎಸ್‌ಟಿ ಮೋರ್ಚಾದಿಂದ ನಗರದಲ್ಲಿ ಸೋಮವಾರ ಧರಣಿ ನಡೆಸಲಾಯಿತು.

- ವಾಲ್ಮೀಕಿ ನಿಗಮ ಹಗರಣದಲ್ಲಿ ಕಳಂಕಿತ ಸಚಿವ: ಪ್ರತಿಭಟನೆಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಆರೋಪ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಆರೋಪ ಹೊತ್ತ ಬಿ.ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕ ಹಾಗೂ ಎಸ್‌ಟಿ ಮೋರ್ಚಾದಿಂದ ನಗರದಲ್ಲಿ ಸೋಮವಾರ ಧರಣಿ ನಡೆಸಲಾಯಿತು.

ನಗರದ ಪಾಲಿಕೆ ಮುಂಭಾಗದ ಉಪ ವಿಭಾಗಾಧಿಕಾರಿ ಕಚೇರಿ ಎದುರು ಪಕ್ಷದ ಮುಖಂಡರು, ಪದಾಧಿಕಾರಿಗಳ ನೇತೃತ್ವದಲ್ಲಿ ಧರಣಿನಿರತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ನಾವು ಜನಪರ ಹೋರಾಟ ನಡೆಸುತ್ತಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರೂವರೆ ವರ್ಷವಾಗುತ್ತಿದೆ. ಅಂದಿನಿಂದ ಈವರೆಗೆ ರಾಜ್ಯವನ್ನು ಲೂಟಿ ಮಾಡಿದ್ದೇ ಕಾಂಗ್ರೆಸ್ ಸರ್ಕಾರದ ಸಾಧನೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮೈಸೂರಿನ ಮುಡಾ ನಿವೇಶನ ಹಗರಣ ಹೀಗೆ ಬರೀ ಭ್ರಷ್ಟಾಚಾರ, ಹಗರಣದಲ್ಲೇ ಕಾಂಗ್ರೆಸ್ ಸರ್ಕಾರ ಮಿಂದೇಳುತ್ತಿದೆ ಎಂದು ಆರೋಪಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮವನ್ನು ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಸ್ಥಾಪಿಸಿದ್ದರು. ಪರಿಶಿಷ್ಟ ಪಂಗಡದ ಜನರ ಅನುಕೂಲ, ಅಭ್ಯುದಯಕ್ಕಾಗಿ ಸ್ಥಾಪಿಸಿದ ನಿಗಮದ ಹಣವನ್ನು ಕಾಂಗ್ರೆಸ್ ಸರ್ಕಾರ ಹೇಗೆಲ್ಲಾ ದುರ್ಬಳಕೆ ಮಾಡಿಕೊಂಡು, ನೆರೆ ರಾಜ್ಯದ ಚುನಾವಣೆಗೆ ಖರ್ಚು ಮಾಡಿದ್ದು, ಎಲ್ಲಿ ಎಲ್ಲಿಗೆ ಹಣವನ್ನು ಕಳಿಸಿ, ಡ್ರಾ ಮಾಡಿದ್ದಾರೆಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇಂತಹ ಸರ್ಕಾರ ಬಿ.ನಾಗೇಂದ್ರ ಅವರನ್ನು ಸಂಪುಟದಿಂದ ತಕ್ಷಣ ಕೈಬಿಡಲಿ ಎಂದು ಒತ್ತಾಯಿಸಿದರು.

ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ಚನ್ನಗಿರಿ ಲೋಹಿತಕುಮಾರ ಮಾತನಾಡಿ, ವಾಲ್ಮೀಕಿ ನಿಗಮದ ಹಗರಣದ ವಿರುದ್ಧ ಸದನದ ಒಳಗೆ ಹಾಗೂ ಹೊರಗೆ ಬಿಜೆಪಿ ಹೋರಾಟ ನಡೆಸಿದೆ. ಬಿ.ನಾಗೇಂದ್ರ ರಾಜೀನಾಮೆ ಅಥವಾ ಸಂಪುಟದಿಂದ ವಜಾಗೊಳ್ಳುವವರೆಗೂ ನಮ್ಮ ಹೋರಾಟ ನಡೆಯಲಿದೆ. ನಿಗಮದಲ್ಲಿ ₹187 ಕೋಟಿಯನ್ನು ಬಳ್ಳಾರಿ ಲೋಕಸಭೆ ಕ್ಷೇತ್ರ ಚುನಾವಣೆ ಹಾಗೂ ತೆಲಂಗಾಣ ವಿಧಾನಸಭೆ ಚುನಾವಣೆ ನಡೆಸಲು ಆಗಿನ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ದುರುಪಯೋಗ ಆಗಿದೆ. ಪರಿಶಿಷ್ಟರ ಹಣವನ್ನು ಕಾಂಗ್ರೆಸ್‌ ಏಜೆಂಟರ ಖಾತೆ, ಚಿನ್ನಾಭರಣ ಅಂಗಡಿ, ವೈನ್ ಶಾಪ್‌, ಕಾರು ಶೋರೂಂ ಇತರೆ ಖಾತೆಗಳಿಗೆ ನಿಗಮದ ಹಣ ಜಮಾ ಮಾಡಿದ್ದರು ಎಂದು ಟೀಕಿಸಿದರು.

ನಿಗಮದ ಹಗರಣದಲ್ಲಿ ಬಿ.ನಾಗೇಂದ್ರ ನೇರ ಕೈವಾಡವಿದೆ. ಈ ಬಗ್ಗೆ ಸಿಬಿಐ ಮತ್ತು ಇಡಿ ತನಿಖೆಯಲ್ಲೂ ಸಾಬೀತಾಗಿ, ಚಾರ್ಜ್ ಶೀಟ್ ಆಗಿದೆ. ಆಗ ಬಿಜೆಪಿ ರಾಜ್ಯಾದ್ಯಂತ ಹೋರಾಟ ನಡೆಸಿದ್ದರಿಂದ ನಮ್ಮ ಹೋರಾಟಕ್ಕೆ ಮಣಿದು, ನಾಗೇಂದ್ರ ರಾಜೀನಾಮೆ ಪಡೆದಿದ್ದರು. ಪ್ರಕರಣ ಇನ್ನೂ ತನಿಖೆ ಹಂತದಲ್ಲಿ ಇರುವಾಗಲೇ ಸಿಎಂ ಡಿ.ಕೆ.ಶಿವಕುಮಾರ ಸಂಪುಟದಲ್ಲಿ ಕಳಂಕಿತ ಬಿ.ನಾಗೇಂದ್ರ ಅವರನ್ನು ಸಂಪುಟದಲ್ಲಿ ಸೇರಿಸಿ, ಘೋರ ಅನ್ಯಾಯ ಮಾಡಿದ್ದಾರೆ ಎಂದು ಹೇಳಿದರು.

ಪಕ್ಷದ ಜಿಲ್ಲಾಧ್ಯಕ್ಷ ಮೆಳ್ಳೆಕಟ್ಟೆ ಎ.ಇ.ನಾಗರಾಜ ಮಾತನಾಡಿ, ವಾಲ್ಮೀಕಿ ನಿಗಮದ ಲೂಟಿಯ ರೂವಾರಿ ಸಚಿವ ಬಿ.ನಾಗೇಂದ್ರ ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಬಿ.ನಾಗೇಂದ್ರ ಅವರನ್ನು ತಕ್ಷಣ ಬಂಧಿಸದಿದ್ದರೆ ರಾಜ್ಯ ಸರ್ಕಾರವು ಶೋಷಿತ ಸಮುದಾಯಗಳಿಗೆ ಘನಘೋರ ಅನ್ಯಾಯ ಮಾಡಿದಂತಾಗುತ್ತದೆ ಎಂದು ಎಚ್ಚರಿಸಿದರು.

ಮಾಜಿ ಶಾಸಕ ಎಚ್.ಪಿ.ರಾಜೇಶ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ, ಮಾಡಾಳ ಮಲ್ಲಿಕಾರ್ಜುನ, ಚಂದ್ರಶೇಖರ ಪೂಜಾರ, ಎನ್.ರಾಜಶೇಖರ ನಾಗಪ್ಪ, ಬಿ.ಎಂ. ಸತೀಶ ಕೊಳೇನಹಳ್ಳಿ, ಆರ್.ಲಕ್ಷ್ಮಣ, ಐರಣಿ ಅಣ್ಣೇಶ, ಆರ್.ಎಲ್.ಶಿವಪ್ರಕಾಶ, ಧನಂಜಯ ಕಡ್ಲೇಬಾಳು, ಬಿ.ಜಿ. ಅಜಯಕುಮಾರ, ಆಲೂರು ನಿಂಗರಾಜ, ಅಶ್ವಿನಿ ಕೃಷ್ಣ, ರಾಕೇಶ ಬಜರಂಗಿ, ಎಚ್.ಪಿ.ವಿಶ್ವಾಸ, ತಾರೇಶ ನಾಯ್ಕ, ಶಂಕರಗೌಡ ಬಿರಾದಾರ, ಕರಿಬಸಪ್ಪ ಮಟ್ಟಿಕಲ್ಲು, ಸಂತೋಷ ಪೈಲ್ವಾನ, ಡಿ.ಹನುಮಂತಪ್ಪ, ಅಕ್ಕಿ ಪ್ರಭು ಕಲ್ಬುರ್ಗಿ, ಟಿಪ್ಪು ಸುಲ್ತಾನ್, ನಾಸಿರ್, ರಾಜು ನೀಲಗುಂದ, ಆನಂದ, ಗುರುರಾಜ, ಅಕ್ಕಿ ಬಸಣ್ಣ, ಸಚಿನ್‌, ಶೇಖರ್, ಬೆಳ್ಳೂಡಿ ಮಂಜುನಾಥ, ಸಚಿನ್ ಇತರರು ಇದ್ದರು.

- - -

-17ಕೆಡಿವಿಜಿ1, 2.ಜೆಪಿಜಿ:

ದಾವಣಗೆರೆ ಎಸಿ ಕಚೇರಿ ಬಳಿ ಸೋಮವಾರ ವಾಲ್ಮೀಕಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ಸಚಿವ ಬಿ.ನಾಗೇಂದ್ರ ವಜಾಗೆ ಒತ್ತಾಯಿಸಿ ಬಿಜೆಪಿ ಧರಣಿ ಸತ್ಯಾಗ್ರಹ ನಡೆಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಿಡಲ್‌ ಪಕ್ಕ...ಕಮಲನಗರದಲ್ಲಿ ಸಂಭ್ರಮದ ನಾಗರ ಪಂಚಮಿ
ದೇವೇಗೌಡರ ಮುಖ ತೋರಿಸದೇ ಗೆದ್ದು ಬನ್ನಿ