ಗ್ಯಾಂಗ್‌ರೇಪ್‌: ಎಸ್‌ಐಟಿ ತನಿಖೆಗೆ ಬಿಜೆಪಿ ಪಟ್ಟು

KannadaprabhaNewsNetwork |  
Published : Jan 21, 2024, 01:34 AM IST
20ಎಚ್‌ವಿಆರ್‌1, 1ಎ, 1ಬಿ, 1ಸ | Kannada Prabha

ಸಾರಾಂಶ

ಹಾನಗಲ್‌ ಗ್ಯಾಂಗ್‌ ರೇಪ್‌ ಪ್ರಕರಣದ ಎಸ್‌ಐಟಿ ತನಿಖೆಗೆ ಆಗ್ರಹಿಸಿ ಹಾವೇರಿಯಲ್ಲಿ ಶನಿವಾರ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ನಡೆಯಿತು.

- ಹಾವೇರಿಯಲ್ಲಿ ಅಶೋಕ್‌, ಬೊಮ್ಮಾಯಿ ನೇತೃತ್ವದಲ್ಲಿ ಪ್ರತಿಭಟನೆ । ಎಸ್ಪಿ ಕಚೇರಿ ಮುತ್ತಿಗೆ ಯತ್ನ: ಬಂಧನ, ಬಿಡುಗಡೆ ಕನ್ನಡಪ್ರಭ ವಾರ್ತೆ ಹಾವೇರಿ

ಹಾನಗಲ್‌ ಗ್ಯಾಂಗ್‌ ರೇಪ್‌ ಪ್ರಕರಣದ ಎಸ್‌ಐಟಿ ತನಿಖೆಗೆ ಆಗ್ರಹಿಸಿ ಹಾವೇರಿಯಲ್ಲಿ ಶನಿವಾರ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ನಡೆಯಿತು.

ನಗರದ ಬಿಜೆಪಿ ಕಾರ್ಯಾಲಯದಿಂದ ನೂರಾರು ಕಾರ್ಯಕರ್ತರು ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಆಗಮಿಸಿದರು. ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ, ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಅಶೋಕ್‌, ಬೊಮ್ಮಾಯಿ, ಮಾಜಿ ಸಚಿವ ಬಿ.ಸಿ. ಪಾಟೀಲ್‌ ಸೇರಿದಂತೆ ನೂರಾರು ಬಿಜೆಪಿ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು, ಬಳಿಕ ಬಿಡುಗಡೆಗೊಳಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಆರ್‌.ಅಶೋಕ್‌ ಹಾಗೂ ಬೊಮ್ಮಾಯಿ, ಪ್ರಕರಣ ಕುರಿತು ಎಸ್‌ಐಟಿಯಿಂದ ತನಿಖೆ ನಡೆಸಬೇಕು. ಪ್ರಕರಣ ತಾರ್ಕಿಕ ಅಂತ್ಯ ಕಾಣುವವರೆಗೆ ಸದನದ ಒಳಗೂ, ಹೊರಗೂ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

‘ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾಂಗ್ರೆಸ್‌ ಸರ್ಕಾರದ ದುರಾಡಳಿತದಿಂದ ರಾಜ್ಯದಲ್ಲಿ ತಾಲಿಬಾನ್‌ ಶಕ್ತಿ ತಲೆ ಎತ್ತುತ್ತಿದೆ. ನಮ್ಮ ಸರ್ಕಾರ ಇದ್ದಾಗ ಊರು ಬಿಟ್ಟು ಗೋವಾ ಸೇರಿದ್ದವರು ಈಗ ಜಿಲ್ಲೆಗೆ ಬಂದು ಕ್ಲಬ್ ನಡೆಸುತ್ತಿದ್ದಾರೆ. ಎಲ್ಲಾ ಗೊತ್ತಿದ್ದರೂ ಪೊಲೀಸರು ಏನೂ ಮಾಡುತ್ತಿಲ್ಲ, ಪೊಲೀಸ್ ಠಾಣೆಗಳು ಸೆಟ್ಲಮೆಂಟ್ ಕೇಂದ್ರಗಳಾಗಿವೆ’ ಎಂದು ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು. ಆರ್. ಅಶೋಕ ಮಾತನಾಡಿ, ‘ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಮುಸ್ಲಿಮರು ನಮ್ಮ ಬದ್ರರ್ಸ್‌, ಸಿಸ್ಟರ್ಸ್‌ ಎಂದಿದ್ದರು. ಇಲ್ಲಿ ಸಿಸ್ಟರ್ ರೇಪ್ ಆಗಿದೆ. ಈಗ ಎಲ್ಲಿದ್ದಾರೆ ನಿಮ್ಮ ಬ್ರದರ್‌ಗಳು?’ ಎಂದು ಪ್ರಶ್ನಿಸಿದರು. ಫೆ.12ರಿಂದ ಆರಂಭವಾಗುವ ಅಧಿವೇಶನದಲ್ಲೂ ಈ ಬಗ್ಗೆ ಧ್ವನಿ ಎತ್ತುತ್ತೇವೆ. ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಈ ಕೆಟ್ಟ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಎಂದು ಅಶೋಕ್‌ ವಾಗ್ದಾಳಿ ನಡೆಸಿದರು. ಮಾಜಿ ಶಾಸಕರಾದ ಶಿವರಾಜ ಸಜ್ಜನರ, ವಿರುಪಾಕ್ಷಪ್ಪ ಬಳ್ಳಾರಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ