ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಒಳ ಮೀಸಲಾತಿ ರೋಸ್ಟರ್ ಹಂಚಿಕೆ ವಿರೋಧಿಸಿ ಮಾ.24ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ಬೃಹತ್ ಹೋರಾಟಕ್ಕೆ ಜನ ಸಾಗರೋಪಾದಿಯಲ್ಲಿ ಸೇರುವಂತೆ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿ ಕರೆ ನೀಡಿದರು.

ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ರಾಜ್ಯ ಸಮಿತಿ, ಒಳ ಮೀಸಲಾತಿ ರೋಸ್ಟರ್ ಹಂಚಿಕೆ ವಿರೋಧಿಸಿ ಹಳೆ ನಿಯಮದಂತೆ ನೇಮಕಾತಿಗೆ ಸರ್ಕಾರವನ್ನು ಒತ್ತಾಯಿಸಲು ಮಾ.24ರಂದು ನಡೆಯುವ ಪ್ರತಿಭಟನೆಗೆ ಸಂಬಂಧಿಸಿದಂತೆ ಭೋವಿ ಗುರುಪೀಠದಲ್ಲಿ ಭಾನುವಾರ ನಡೆದ ವಿಭಾಗೀಯ ಮಟ್ಟದ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ನಾಗಮೋಹನ್‌ ದಾಸ್ ಆಯೋಗ ಸಂಗ್ರಹಿಸಿರುವ ದತ್ತಾಂಶ ಒಂದು ಸಮಾಜಕ್ಕೆ ಪೂರ್ವಾಗ್ರಹ ಪೀಡಿತವಾಗಿದೆ ಎಂದು ಹಲವಾರು ಬಾರಿ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಭೋವಿ, ಲಂಬಾಣಿ, ಕೊರಮ, ಕೊರಚ ಜನಾಂಗ ಮುಂದುವರೆದಿದೆ ಎಂದು ನಾಗಮೋಹನ್ದಾಸ್ ಆಯೋಗ ಹೇಳಿಲ್ಲ. ಸಂಗ್ರಹಿಸಿರುವ ದತ್ತಾಂಶಕ್ಕೂ ಸರ್ಕಾರಕ್ಕೆ ನೀಡಿರುವ ವರದಿಗೂ ವ್ಯತ್ಯಾಸವಿದೆ. ಅಲೆಮಾರಿ ಸಮುದಾಯಗಳಿಗೆ ಪರಿಶಿಷ್ಟ ಜಾತಿಯ ಸೂಕ್ಷ್ಮ ವಲಯಗಳಿಗೆ ನ್ಯಾಯ ಸಿಗಬೇಕು. ಎಸ್‌ಸಿಪಿ, ಟಿಎಸ್‌ಪಿ ಹಣವನ್ನು ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸದೆ ನಮ್ಮ ಸಮುದಾಯದ ಅಭಿವೃದ್ಧಿಗೆ ಮೀಸಲಿಡಬೇಕೆಂದು ಹೋರಾಟದಲ್ಲಿ ಒತ್ತಾಯಿಸಲಾಗುವುದು. ಜನಸಂಖ್ಯೆಗೆ ಅನುಗುಣವಾಗಿ ಭೋವಿ ಅಭಿವೃದ್ದಿ ನಿಗಮ ಹಾಗೂ ಬಂಜಾರ ಅಭಿವೃದ್ಧಿ ನಿಗಮಗಳಿಗೆ ಹಣ ಮಂಜೂರು ಮಾಡಲಿ. ಸಮಾಜದ ಬಗ್ಗೆ ಕಾಳಜಿಯಿರುವವರು ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಜನರನ್ನು ಎಚ್ಚರಿಸುವ ಮೂಲಕ ಕುಟುಂಬ ಬಂಧು-ಬಳಗದವರ ಮನವೊಲಿಸಿ ಪ್ರತಿಭಟನೆಗೆ ಕರೆ ತನ್ನಿ. ಇಲ್ಲವಾದಲ್ಲಿ ಅಸ್ತಿತ್ವ ಉಳಿಸಿಕೊಳ್ಳುವುದು ಕಷ್ಟವಾಗುತ್ತದೆಂದು ಎಚ್ಚರಿಸಿದರು.

ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್‌ ಸ್ವಾಮೀಜಿ ಮಾತನಾಡಿ, ಒಳ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟ ನಿನ್ನೆ ಮೊನ್ನೆಯದಲ್ಲ. ಹಲವಾರು ವರ್ಷಗಳಿಂದಲೂ ಚಳುವಳಿ, ಪ್ರತಿಭಟನೆಗಳು ನಡೆಯುತ್ತಿವೆ. ಶಾಸಕರು, ಮಂತ್ರಿಗಳ ಮನೆ, ವಿಧಾನಸೌಧಕ್ಕೂ ಮುತ್ತಿಗೆ ಹಾಕಿದ್ದೇವೆ. ಭೋವಿ, ಬಂಜಾರರನ್ನು ಮೀಸಲಾತಿಯಿಂದ ಹೊರಗಿಡುವ ಹುನ್ನಾರ ನಡೆಯುತ್ತಿರುವುದನ್ನು ವಿರೋಧಿಸಿ ಮಾ.24 ರಂದು ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸರ್ಕಾರಕ್ಕೆ ಶಕ್ತಿ ಪ್ರದರ್ಶಿಸುವಂತೆ ಭೋವಿ, ಲಂಬಾಣಿ, ಕೊರಚ, ಕೊರಮ ಹಾಗೂ ಅಲೆಮಾರಿ ಜನಾಂಗದವರಲ್ಲಿ ಮನವಿ ಮಾಡಿದರು.


ಭೋವಿ ಅಭಿವೃದ್ಧಿ ನಿಗಮದ ಅಧಕ್ಷ ನೇರ್ಲಗುಂಟೆ ರಾಮಪ್ಪ, ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವಾನಾಯ್ಕ, ಭೋವಿ ಸಮಾಜದ ರಾಜ್ಯಾಧ್ಯಕ್ಷ ಆನಂದ್, ಜಿಲ್ಲಾ ಕೊರಮ ಸಮಾಜದ ಅಧ್ಯಕ್ಷ ಕೃಷ್ಣಪ್ಪ, ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ನಾಗೇಂದ್ರನಾಯ್ಕ, ಭೋವಿ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ, ಜಿಪಂ ಮಾಜಿ ಸದಸ್ಯ ರಾಜಾನಾಯ್ಕ, ನಿವೃತ್ತ ನ್ಯಾಯಾಧೀಶರಾದ ವೀರಭದ್ರಪ್ಪ, ರಾಘವೇಂದ್ರನಾಯ್ಕ, ಸಿಂಡಿಕೇಟ್ ಸದಸ್ಯ ದಾವಣಗೆರೆಯ ದ್ಯಾಮಣ್ಣ, ಮಂಜುಳ ಬಿ.ಜಯದೇವ, ಆದರ್ಶ ಯಲ್ಲಪ್ಪ ಇವರುಗಳು ಮಾತನಾಡಿದರು.

ಈ ವೇಳೆ ಭೋವಿ ಸಮಾಜದ ಮೋಹನ್, ಹನುಮಂತಪ್ಪ ಗೋಡೆಮನೆ, ಡಿ.ತಿಮ್ಮಣ್ಣ, ಬಂಜಾರ ಸಮಾಜದ ಸುರೇಶ್ನಾಯ್ಕ, ಪ್ರಕಾಶ್ರಾಮನಾಯ್ಕ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರಭದ್ರಪ್ಪ, ತುಳಸಿ ರಮೇಶ್, ಗೀತ ಸೇರಿದಂತೆ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಹೊಸಪೇಟೆ, ಹಾವೇರಿ ಜಿಲ್ಲೆಗಳಿಂದ ಭೋವಿ, ಲಂಬಾಣಿ, ಕೊರಮ, ಕೊರಚ, ಅಲೆಮಾರಿ ಜನಾಂಗದ ಮುಖಂಡರುಗಳು ವಿಭಾಗೀಯ ಮಟ್ಟದ ಸಭೆಯಲ್ಲಿ ಭಾಗವಹಿಸಿದ್ದರು.