ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಎಂಡಿಎ) 2021ರಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರ ಕುರಿತು ಸಾರ್ವಜನಿಕ ಚರ್ಚೆಗೆ ಬರುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಆಹ್ವಾನಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯವರು ನಗರ ಪಾಲಿಕೆ ಮುಂಭಾಗದಲ್ಲಿ ಶುಕ್ರವಾರ ಪತ್ರ ಚಳವಳಿ ನಡೆಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ, ಜೆಡಿಎಸ್ ರಾಜಕೀಯ ಹುನ್ನಾರ ಮಾಡುತ್ತಿವೆ. ಹೇಗಾದರೂ ಮಾಡಿ ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಧಕ್ಕೆ ತಂದು ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಹುನ್ನಾರ ಮಾಡುತ್ತಿವೆ. ಇದಕ್ಕಾಗಿ ಕೇಂದ್ರ ಬಿಜೆಪಿ ನಾಯಕರು ವಿಜಯೇಂದ್ರ ಅವರಿಗೆ ಸುಪಾರಿ ಕೊಟ್ಟಿದ್ದಾರೆ. ಆ ಸುಪಾರಿಯಂತೆ ವಿಜಯೇಂದ್ರ ಮತ್ತು ಜೆಡಿಎಸ್ ನಾಯಕರು ಸಿದ್ದರಾಮಯ್ಯ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.ಬಿ.ಎಸ್. ಯಡಿಯೂರಪ್ಪ ಅವರು 2021ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಂಡಿಎಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಇದರ ವಿರುದ್ಧ ಹಲವಾರು ಹೋರಾಟಗಳನ್ನು ನಮ್ಮ ವೇದಿಕೆ ಮಾಡಿದೆ. ಆದರೂ ಭ್ರಷ್ಟಾಚರಾದ ವಿರುದ್ಧ ಆಗಿನ ಸರ್ಕಾರದ ಮುಖ್ಯಮಂತ್ರಿಗಳಾಗಲಿ, ವಿಜಯೇಂದ್ರ ಅವರಾಗಲೀ ಧ್ವನಿ ಎತ್ತಲಿಲ್ಲ ಎಂದು ಅವರು ದೂರಿದರು.ಹೀಗಾಗಿ, 2021ರ ಭ್ರಷ್ಟಾಚಾರ ಕುರಿತಂತೆ ಜು.29ರ ಬೆಳಗ್ಗೆ 11.30ಕ್ಕೆ ಮೈಸೂರಿನ ಗಾಂಧಿ ಚೌಕದ ಗಾಂಧಿ ಪ್ರತಿಮೆ ಬಳಿ ದಾಖಲೆಗಳ ಸಮೇತ ಬಹಿರಂಗ ಚರ್ಚೆ ನಡೆಸಲಿದ್ದು, ಬಿ.ವೈ. ವಿಜಯೇಂದ್ರ ನಮ್ಮ ಆಹ್ವಾನ ಸ್ವೀಕರಿಸಿ ಚರ್ಚೆಗೆ ಬರಲಿ ಎಂದು ಅವರು ಸವಾಲು ಹಾಕಿದರು.ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮು, ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಎಚ್.ಎಸ್. ಪ್ರಕಾಶ್, ಮಡಿವಾಳರ ಸಂಘದ ಅಧ್ಯಕ್ಷ ರವಿನಂದನ್, ಉಪ್ಪಾರರ ಸಂಘದ ಅಧ್ಯಕ್ಷ ಯೋಗೇಶ್ ಉಪ್ಪಾರ್, ವಿಶ್ವಕರ್ಮ ಸಮಾಜದ ಅಧ್ಯಕ್ಷ ಮೊಗಣ್ಣಚಾರ್, ಮುಖಂಡರಾದ ಲೋಕೇಶ್, ಸುನಿಲ್, ರವಿ ಮೊದಲಾದವರು ಇದ್ದರು.