ರೈತರ ಹಿತದೃಷ್ಟಿಯಿಂದ ಗೋವಿನಜೋಳ ಖರೀದಿಸುತ್ತಿದ್ದು ಪ್ರತಿ ಕ್ವಿಂಟಲ್‍ಗೆ ಗರಿಷ್ಠ ₹2150 ನಿಗದಿಪಡಿಸಲಾಗಿದೆ. ಪ್ರತಿ ಎಕರೆಗೆ 12 ಕ್ವಿಂಟಲ್‍ನಂತೆ ಗರಿಷ್ಠ 50 ಕ್ವಿಂಟಲ್ ಗೋವಿನಜೋಳವನ್ನು ಫ್ರುಟ್ಸ್ ತಂತ್ರಾಂಶದಲ್ಲಿನ ರೈತರು ಹೊಂದಿರುವ ಜಮೀನಿನ ವಿಸ್ತ್ರೀರ್ಣಕ್ಕೆ ಅನುಗುಣವಾಗಿ ಖರೀದಿಸಬಹುದು.
ಹುಬ್ಬಳ್ಳಿ:
ಗೋವಿನಜೋಳ ಖರೀದಿ ಪಾರದರ್ಶಕವಾಗಿರಲಿ. ದಲ್ಲಾಳಿ ಅಥವಾ ಮಧ್ಯವರ್ತಿಗಳಿಗೆ ಇದರಲ್ಲಿ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು. ಇಲ್ಲಿನ ಅಮರಗೋಳದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರದೇಶದಲ್ಲಿ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಆರಂಭಿಸಿರುವ ಗೋವಿನಜೋಳ ನೋಂದಣಿ ಮತ್ತು ಖರೀದಿ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು.ರೈತರ ಹಿತದೃಷ್ಟಿಯಿಂದ ಗೋವಿನಜೋಳ ಖರೀದಿಸುತ್ತಿದ್ದು ಪ್ರತಿ ಕ್ವಿಂಟಲ್‍ಗೆ ಗರಿಷ್ಠ ₹2150 ನಿಗದಿಪಡಿಸಲಾಗಿದೆ. ಪ್ರತಿ ಎಕರೆಗೆ 12 ಕ್ವಿಂಟಲ್‍ನಂತೆ ಗರಿಷ್ಠ 50 ಕ್ವಿಂಟಲ್ ಗೋವಿನಜೋಳವನ್ನು ಫ್ರುಟ್ಸ್ ತಂತ್ರಾಂಶದಲ್ಲಿನ ರೈತರು ಹೊಂದಿರುವ ಜಮೀನಿನ ವಿಸ್ತ್ರೀರ್ಣಕ್ಕೆ ಅನುಗುಣವಾಗಿ ಖರೀದಿಸಬಹುದು ಎಂದರು.
ನೋಡಲ್ ಅಧಿಕಾರಿಗಳಾಗಿ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್‌ರನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ನೇಮಿಸಲಾಗಿದೆ. ಅವರು ಗೋವಿನಜೋಳ ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಕರ್ತವ್ಯದಲ್ಲಿ ಲೋಪ-ದೋಷ ಕಂಡು ಬಂದರೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಬೆಲೆ ಕೊರತೆ ವ್ಯತ್ಯಾಸ ಪಾವತಿ ಕೇಂದ್ರಗಳನ್ನು ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ, ಧಾರವಾಡ, ಕಲಘಟಗಿ ಮತ್ತು ಕುಂದಗೋಳ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರದೇಶದಲ್ಲಿ ತೆರೆಯಲಾಗಿದೆ. ಗೋವಿನಜೋಳ ಖರೀದಿ ಹಾಗೂ ರೈತರ ನೋಂದಣಿ ಕಾರ್ಯ ಜ. 8ರಿಂದ ಫೆ. 7ಕ್ಕೆ ಮುಕ್ತಾಯಗೊಳ್ಳಲಿದೆ. ಜಿಲ್ಲೆಯಲ್ಲಿ 1.85 ಲಕ್ಷ ಕ್ವಿಂಟಲ್ ಗೋವಿನಜೋಳ ಖರೀದಿಗೆ ಸರ್ಕಾರವು ಅನುಮತಿ ನೀಡಿದ್ದು ಈಗಾಗಲೇ 120 ರೈತರು ನೋಂದಣಿ ಮಾಡಿಸಿದ್ದು ಜ. 12ರ ವರೆಗೆ 399 ಕ್ವಿಂಟಲ್ ಗೋವಿನಜೋಳ ಖರೀದಿಯಾಗಿದೆ ಎಂದರು.
ಈ ವೇಳೆ ಜಿಪಂ ಸಿಇಒ ಭುವನೇಶ ಪಾಟೀಲ, ಪ್ರೊಬೆಷನರಿ ಐಎಎಸ್ ಅಧಿಕಾರಿ ರಿತೀಕಾ ವರ್ಮಾ, ಶಹರ ತಹಸೀಲ್ದಾರ್ ಮಹೇಶ ಭಗವಂತ ಗಸ್ತೆ, ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ ಉಪನಿರ್ದೇಶಕ ವಿ.ಎಂ. ಲಮಾಣಿ ಹಾಗೂ ಅಧಿಕಾರಿಗಳು, ರೈತರಿದ್ದರು.