ಕನ್ನಡಪ್ರಭ ವಾರ್ತೆ ಕೋಲಾರ

ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ರಸಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಮತ್ತು ಕಾಳಸಂತೆ ಮಾರಾಟ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ನಗರದ ಜಿಪಂ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಯೋಜನೆಗಳ (ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಭೆಯಲ್ಲಿ ಮುಳಬಾಗಿಲು ಭಾಗದಲ್ಲಿ ಅಕ್ರಮವಾಗಿ ಆಂಧ್ರಪ್ರದೇಶಕ್ಕೆ ರಸಗೊಬ್ಬರ ಸಾಗಿಸುತ್ತಿದ್ದ ಪ್ರಕರಣದ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಕೋಲಾರ ತಾಲೂಕಿನ ಶೆಟ್ಟಿ ಅಂಡ್ ಸನ್ಸ್ ಮಳಿಗೆಯಿಂದ ಅಕ್ರಮವಾಗಿ ಗೊಬ್ಬರ ಸಾಗಾಟವಾಗುತ್ತಿರುವುದನ್ನು ಪತ್ತೆಹಚ್ಚಿ ಎಫ್ಐಆರ್ ದಾಖಲಿಸಿರುವುದಾಗಿ ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಈ ವೇಳೆ ಕೇವಲ ಲೈಸೆನ್ಸ್ ಅಮಾನತು ಮಾಡುವುದರಿಂದ ಪ್ರಯೋಜನವಿಲ್ಲ, ತಪ್ಪು ಮಾಡಿದವರ ಪರವಾನಗಿ ಪೂರ್ಣವಾಗಿ ರದ್ದುಗೊಳಿಸಬೇಕು. ಇಲಾಖೆಯಿಂದ ಪೊಲೀಸ್ ಇಲಾಖೆಗೆ ಸಂಪೂರ್ಣ ಸಹಕಾರ ನೀಡಿ ಕಠಿಣ ಕ್ರಮ ಜರುಗಿಸಬೇಕು ಎಂದು ಸಚಿವರು ನಿರ್ದೇಶಿಸಿದರು.ಜಿಲ್ಲೆಯಲ್ಲಿ ಬೇಸಿಗೆ ಆರಂಭವಾಗುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ತಲೆದೂರದಂತೆ ಎಚ್ಚರಿಕೆ ವಹಿಸಬೇಕು. ಪ್ರಸ್ತುತ ಜಿಲ್ಲೆಯ ಸುಮಾರು 76 ಹಳ್ಳಿಗಳಲ್ಲಿ ನೀರಿನ ಅಭಾವ ಕಂಡುಬಂದಿದ್ದು, ಅಗತ್ಯವಿರುವ ಕಡೆ ಹೊಸ ಬೋರ್‌ವೆಲ್ ಕೊರೆಸಲು ಹಾಗೂ ಖಾಸಗಿ ಬೋರ್‌ವೆಲ್‌ಗಳ ಮೂಲಕ ನೀರು ಪೂರೈಸಲು ಯೋಜನೆ ರೂಪಿಸಿದೆ.

ಜಲಜೀವನ್ ಮಿಷನ್ ಅಡಿಯಲ್ಲಿ ಕೊರೆದ ಸುಮಾರು 266 ಬೋರ್‌ವೆಲ್‌ಗಳಿಗೆ ವಿದ್ಯುತ್ ಸಂಪರ್ಕ ಬಾಕಿ ಇರುವುದಕ್ಕೆ ಸಚಿವರು ಅತೃಪ್ತಿ ವ್ಯಕ್ತಪಡಿಸಿದರು. ಕೂಡಲೇ ಠೇವಣಿ ಪಾವತಿಸಿ ಕನೆಕ್ಷನ್ ಪಡೆಯಲು ಹಾಗೂ ಬಾಕಿ ಬಿಲ್ ಪಾವತಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.ಮಾಕಂಡೇಯ ಜಲಾಶಯ ಯೋಜನೆ ವಿಳಂಬ:ಮಾಕಂಡೇಯ ಜಲಾಶಯದಿಂದ 156 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ 45 ಕೋಟಿ ರು. ಮೊತ್ತದ ಯೋಜನೆಯು ಅರ್ಧಕ್ಕೆ ನಿಂತಿರುವುದರ ಬಗ್ಗೆ ಸಚಿವರು ಗಂಭೀರವಾಗಿ ಪರಿಗಣಿಸಿದರು. ಗುತ್ತಿಗೆದಾರರಿಗೆ ಶೇ. 98ರಷ್ಟು ಬಿಲ್ ಪಾವತಿಯಾಗಿದ್ದರೂ ಕೆಲಸ ಪೂರ್ಣಗೊಂಡಿಲ್ಲದಿರುವ ಬಗ್ಗೆ ಮಾಹಿತಿ ಪಡೆದ ಸಚಿವರು, ಈ ಯೋಜನೆಯಲ್ಲಿನ ಹಣಕಾಸು ವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡಲು ಹಿರಿಯ ಅಧಿಕಾರಿಗಳಿಗೆ ಆದೇಶಿಸಿದರು.

ಪ್ರತಿ ಶನಿವಾರ ತಾಲೂಕು ಮಟ್ಟದಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಶಾಸಕರನ್ನು ಒಳಗೊಂಡ ಕುಡಿಯುವ ನೀರಿನ ಸಮಿತಿ ಸಭೆ ನಡೆಸಿ ವರದಿ ನೀಡಲು ಸೂಚಿಸಲಾಯಿತು.

ಯರಗೋಳ್ ಅಣೆಕಟ್ಟಿನಲ್ಲಿ ಪ್ರಸ್ತುತ 210 ಟಿಎಂಸಿ ನೀರು ಲಭ್ಯವಿದ್ದು, ಮುಂದಿನ ಹತ್ತು ತಿಂಗಳವರೆಗೆ ಕೋಲಾರ, ಬಂಗಾರಪೇಟೆ ಮತ್ತು ಮಾಲೂರು ನಗರಗಳಿಗೆ ನೀರಿನ ತೊಂದರೆಯಾಗುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.ಸಭೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕರಾದ ಡಾ.ಕೊತ್ತೂರು ಜಿ.ಮಂಜುನಾಥ್, ಕೆ.ವೈ.ನಂಜೇಗೌಡ, ಡಾ.ರೂಪಕಲಾ ಶಶಿಧರ್, ಎಂಎಲ್ಸಿಗಳಾದ ಎಂ.ಎಲ್.ಅನಿಲ್ ಕುಮಾರ್, ಡಿ.ಟಿ.ಶ್ರೀನಿವಾಸ್, ಕೆಡಿಪಿ ನಾಮನಿರ್ದೇಶತ ಸದಸ್ಯರಾದ ಸೊಣ್ಣೇಗೌಡ, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ. ಶಿವಾಕುಮಾರ್ ಇತರರಿದ್ದರು.