ಕನ್ನಡಪ್ರಭ ವಾರ್ತೆ ವಿಜಯಪುರ
ಯಾವುದೇ ಆರೋಪದಲ್ಲಿ ಗಂಭೀರತೆ ಇದ್ದರೆ, ಉತ್ತರಿಸಬೇಕು. ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಯತ್ನಾಳ ಮಾಡಿರುವ ಕೋವಿಡ್ ಸ್ಕ್ಯಾಮ್ ಆರೋಪ ಸತ್ಯಕ್ಕೆ ದೂರವಾದದ್ದು, ಹುಡುಗಾಟಿಕೆ ಆರೋಪಗಳಿಗೆ ರಿಯಾಕ್ಷನ್ ಕೊಡಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರ ಮೇಲೆ ಯಾವುದೇ ಅನುಕಂಪ ಇಲ್ಲದೆ ತನಿಖೆ ಮಾಡಲಿ. ಆರೋಪ ಮಾಡಿದವರು ದಾಖಲೆ ಕೊಡಲಿ ಎಂದು ಯತ್ನಾಳ ಅವರಿಗೆ ಟಾಂಗ್ ನೀಡಿದರು.
ನಮ್ಮಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳಿದ್ದರೂ, ವಯಸ್ಸಿನಲ್ಲಿ ಚಿಕ್ಕವನಾದರೂ ಪಕ್ಷದ ಅಧ್ಯಕ್ಷನಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕರ್ತವ್ಯ ನನ್ನದು. ಯಶಸ್ವಿಯಾಗಿ ಮಾಡುವ ಅಚಲ ವಿಶ್ವಾಸ ನನಗಿದೆ ಎಂದು ಹೇಳಿದರು.ಹೊಸ ವರ್ಷದ ಹೊಸ್ತಿಲಲ್ಲಿ ನಾವಿದ್ದೇವೆ. ಎಲ್ಲ ಹಳೆಯ ವಿಚಾರಗಳನ್ನು ಬದಿಗಿಟ್ಟು ಎಲ್ಲರ ವಿಶ್ವಾಸ ತೆಗೆದುಕೊಂಡು ಮುನ್ನಡೆಯುತ್ತೇನೆ. ನಾನು ಇಟ್ಟ ಗುರಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಲೋಕಸಭೆ ಚುನಾವಣೆಯಲ್ಲಿ ಗೆಲ್ಲಬೇಕು. ಮತ್ತೇ ಮೋದಿ ಅವರನ್ನು ಪ್ರಧಾನಿ ಮಾಡಬೇಕು ಎಂದರು.
ನಾನಾಗಲಿ, ಪಕ್ಷದ ಮುಖಂಡರಾಗಲಿ ಕೇಂದ್ರಕ್ಕೆ ಹೋಗಿ ಯಾರ ಬಗ್ಗೆಯೂ ಚಾಡಿ ಹೇಳುವುದಾಗಲಿ, ದೂರು ನೀಡುವುದಾಗಲಿ ಮಾಡಿಲ್ಲ. ಶಿಸ್ತು ಕ್ರಮಕ್ಕೂ ಒತ್ತಾಯಿಸಿಲ್ಲ. ಅದರ ಅವಶ್ಯಕತೆಯೂ ನಮಗಿಲ್ಲ. ಆದರೆ ಮುಂದೆ ಸಂದರ್ಭ ಹೇಗೆ ಸೃಷ್ಟಿಯಾಗುತ್ತೆ ಅದರ ಮೇಲೆ ಕೇಂದ್ರ ವರಿಷ್ಠರು ತಿರ್ಮಾನ ಮಾಡುತ್ತಾರೆ ಎಂದು ಹೇಳಿದರು.ಚುನಾವಣೆ ಹಪಹಪಿಯಿಂದ ಕಾಂಗ್ರೆಸ್ ಜನರಿಗೆ ಅನೇಕ ಭರವಸೆಗಳನ್ನು ನೀಡಿತ್ತು. ಈಡೇರಿಸಲು ಸಾಧ್ಯವಾಗದೆ, ಸಿದ್ದರಾಮಯ್ಯ ಸರ್ಕಾರ ಅತೀ ಕಡಿಮೆ ಅವಧಿಯಲ್ಲಿಯೇ ಜನರ ವಿಶ್ವಾಸ ಕಳೆದುಕೊಂಡಿದೆ. ರಾಜ್ಯದಲ್ಲಿ ಭೀಕರ ಬರ ಆವರಿಸಿದೆ. ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಬೇಕಿರುವ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ತುಷ್ಟಿಕರಣದಲ್ಲಿ ಮುಳುಗಿದೆ. ಅಲ್ಪಸಂಖ್ಯಾತರಿಗೆ ₹೧೦ ಸಾವಿರ ಕೋಟಿ ನೀಡುತ್ತೇವೆ ಎಂದು ಹೇಳುತ್ತಿರುವ ಸಿದ್ದರಾಮಯ್ಯನವರಿಗೆ ರೈತರ ಕಷ್ಟ ಕಾಣುತ್ತಿಲ್ಲ. ರೈತರು ಯಾವುದೇ ಒಂದು ಕೋಮಿಗೆ ಸೇರಿದವರಲ್ಲ. ರೈತ ಸಮುದಾಯ ಹಿಂದು, ಮುಸ್ಲಿಂ, ಕ್ರೈಸ್ತ ಎಲ್ಲ ಜನಾಂಗವನ್ನು ಒಳಗೊಂಡಿದೆ. ಹಾಗಾಗಿ ರೈತರಿಗೆ ಬೆಂಬಲ ಬೆಲೆ, ಬೆಳೆ ಪರಿಹಾರ ನೀಡಬೇಕು ಎಂದು ಒತ್ತಾಯಿಸುತ್ತೇನೆ ಎಂದರು.ಚುನಾವಣೆಯಲ್ಲಿ ಕಾಂಗ್ರೆಸ್ ಭರವಸೆ ನಂಬಿ ಮತ ನೀಡಿದ ಮತದಾರರೇ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಕಬ್ಬು, ದ್ರಾಕ್ಷಿ ಬೆಳೆಗಾರರು ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸುತ್ತಿದ್ದಾರೆ. ಈ ಕುರುಡು ಸರ್ಕಾರ ಮಾತ್ರ ಖರ್ಚು ಮಾಡಿ ಜಾಹೀರಾತು ನೀಡುವುದನ್ನು ಬಿಟ್ಟು ಏನನ್ನೂ ಮಾಡುತ್ತಿಲ್ಲ. ಶಾಸಕರಿಗೆ ಒಂದೇ ಒಂದು ರುಪಾಯಿ ಕೂಡ ಅನುದಾನ ನೀಡಿಲ್ಲ. ಎಲ್ಲ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡುವ ಬೂಟಾಟಿಕೆ ನಾಟಕ ಬಿಟ್ಟು ರೈತರ ನೆರವಿಗೆ ಧಾವಿಸಲಿ ಎಂದು ಹರಿಹಾಯ್ದರು.
ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಕಣ್ಣಿದ್ದು ಕುರುಡನಂತೆ, ಕಿವಿ ಇದ್ದು ಕಿವುಡನಂತೆ ವರ್ತಿಸುತ್ತಿದೆ. ಬರಗಾಲದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ರೈತರ ಹೊಲ-ಗದ್ದೆಗಳಿಗೆ ಭೇಟಿ ನೀಡಿಲ್ಲ. ಕಂದಾಯ ಸಚಿವರು ಎಸಿ ರೂಮ್‌ನಲ್ಲಿ ಕುಳಿತು ಸಭೆ ಮಾಡಿದ್ದು ಬಿಟ್ಟು ರೈತರ ಹೊಲಗಳಿಗೆ ಭೇಟಿ ನೀಡಿಲ್ಲ. ರಾಜ್ಯದಲ್ಲಿರುವ ಬರಗಾಲದ ಬಗ್ಗೆ ಪ್ರಧಾನ ಮಂತ್ರಿಗಳಿಗೆ ಮನವರಿಕೆ ಮಾಡಲು ಹೋಗಿರುವ ಸಚಿವ ಜಮೀರ್ ಅಹಮ್ಮದ್ ವಿಮಾನದಲ್ಲಿ ವರ್ತಿಸಿರುವುದನ್ನು ರಾಜ್ಯದ ಜನ ನೋಡಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ೨೮ ಕ್ಷೇತ್ರದಲ್ಲೂ ಬಿಜೆಪಿ ಹಾಗೂ ಜೆಡಿಎಸ್ ಗೆಲ್ಲಿಸಿ ಕಾಂಗ್ರೆಸ್‌ಗೆ ಮಂಗಳಾರತಿ ಮಾಡಲಿದ್ದಾರೆ ಎಂದರು.ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಕೊಠಡಿ ಇಲ್ಲದೆ. ಬಯಲಿನಲ್ಲಿ ಕುಳಿತು ಕಲಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಶಿಕ್ಷಣ ಸಚಿವರೇ ₹6 ಕೋಟಿಗೂ ಅಧಿಕ ಮೊತ್ತದ ಚೆಕ್ ಬೌನ್ಸ್ ಕೇಸ್ ಪ್ರಕರಣದಲ್ಲಿ 6 ತಿಂಗಳು ಶಿಕ್ಷೆ ಅಥವಾ ದಂಡ ಪಾವತಿಸುವಂತೆ ಕೋರ್ಟ್ ಆದೇಶ ನೀಡಿದೆ. ಇದನ್ನೂ ಜನ ನೋಡಿದ್ದಾರೆ. ಸರ್ಕಾರಿ ನೌಕರರಿಗೂ ಸಂಬಳ ನೀಡಲು ಸರ್ಕಾರದ ಬಳಿ ಹಣ ಇಲ್ಲ. ರಾಜ್ಯದಲ್ಲಿ ಆರ್ಥಿಕ ಪರಸ್ಥಿತಿ ಸಂಪೂರ್ಣ ಹದಗೆಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಮುರುಗೇಶ ನಿರಾಣಿ, ಬಿಜೆಪಿ ಜಿಲ್ಲಾಧ್ಯಕ್ಷ ಕೂಚಬಾಳ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಮಾಜಿ ಶಾಸಕ ರಮೇಶ ಭೂಸನೂರ, ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಶಹಪೂರ, ಬಿಜೆಪಿ ಮುಖಂಡರಾದ ಡಾ.ಸುರೇಶ ಬಿರಾದಾರ, ವಿಜುಗೌಡ ಪಾಟೀಲ ಮುಂತಾದವರು ಇದ್ದರು.