- ಮಾದಿಗ ಆತ್ಮಗೌರವ ಸಮಾವೇಶದಲ್ಲಿ ಕಾಂಗ್ರೆಸ್‌ಗೆ ಟೀಕೆ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ದಲಿತರಿಗೆ ನ್ಯಾಯ ಕೊಡಿಸಲು ಕಾಂಗ್ರೆಸ್‌ಗೆ ಸಾಧ್ಯವಾಗಲಿಲ್ಲ. ಬರೀ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಕಿಡಿಕಾರಿದರು.
ಇಲ್ಲಿನ ಸವಾಯಿ ಗಂಧರ್ವ ಹಾಲ್‌ನಲ್ಲಿ ಮಾದಿಗರ ಆತ್ಮಗೌರವ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.ಬಿಜೆಪಿ ಸರ್ಕಾರದ ಅವಧಿಯಲ್ಲಿ ಘೋಷಿಸಿದ ಒಳಮೀಸಲಾತಿ ಬಗ್ಗೆ ಜನರಿಗೆ ತಿಳಿವಳಿಕೆ ನೀಡಬೇಕೆನ್ನುವಷ್ಟರಲ್ಲೇ ಚುನಾವಣೆ ಘೋಷಣೆಯಾಯಿತು. ಬಳಿಕ ಕಾಂಗ್ರೆಸ್ ಒಳ ಮೀಸಲು ಬಗ್ಗೆ ಗೊಂದಲ ಮೂಡಿಸಿತು. ನಮ್ಮವರೂ ಏನು ತಿಳಿದುಕೊಳ್ಳಲಿಲ್ಲ. ಹಾಗಾಗಿ ಚುನಾವಣೆಯಲ್ಲಿ ಹಿನ್ನಡೆಯಾಯಿತು. ಕಾಂಗ್ರೆಸ್ ಮೂಡಿಸುತ್ತಿರುವ ಗೊಂದಲ ಬಗ್ಗೆ ಮಾದಿಗರು ಸಮಾಜದ ಮನೆ ಮನೆಗೆ ತಿಳಿ ಹೇಳಬೇಕು ಎನ್ನುವುದೇ ಈ ಸಮಾವೇಶದ ಉದ್ದೇಶ. ಅದನ್ನು ಮಾಡಬೇಕು ಎಂದು ಸಲಹೆ ನೀಡಿದರು.
2023ರಲ್ಲಿ ಬಿಜೆಪಿ ಸರಕಾರ ಸದಾಶಿವ ವರದಿಯನ್ನು ಇನ್ನಷ್ಟು ವೈಜ್ಞಾನಿಕ ಪರಿಶೀಲಿಸಿ ಒಳಮೀಸಲಾತಿ ಪ್ರಕಟಿಸಿತು. ಈ ಮೀಸಲಾಯಿತಿಯಿಂದ ಲಂಬಾಣಿ, ಕೊರಮ, ಕೊರಚ, ಭೋವಿ ಸಮಾಜದವರಿಗೆ ಅನ್ಯಾಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಒಳ ಮೀಸಲಾಯಿತಿಯಲ್ಲಿ ಕಾಂಗ್ರೆಸ್ ಬರೀ ಢೋಂಗಿತನ ಪ್ರದರ್ಶಿಸುತ್ತಿದೆ. ಒಳಮೀಸಲಾತಿ ಜಾರಿ ಕುರಿತು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ಕೊಟ್ಟು ಅಧಿಕಾರಕ್ಕೆ ಬಂದರೂ ಏನು ಮಾಡಲಿಲ್ಲ ಎಂದು ಆರೋಪಿಸಿದರು.ಕಾಂಗ್ರೆಸ್ ದಲಿತರನ್ನು ವೋಟ್‌ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ. ಪ್ರಧಾನಿ ಹುದ್ದೆಗೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಿಂಬಿಸಲಾಗುತ್ತಿದೆ. ಆದರೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಪ್ರಸ್ತಾಪಿಸಲಿಲ್ಲ. ಸಿದ್ದರಾಮಯ್ಯ ಕೂಡ ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆಂದು ಹೇಳುತ್ತಿದ್ದಾರೆ ಎಂದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ದೇಶದಲ್ಲಿ ವಂಶವಾದ ಹೊಂದಿರುವವರಿಂದ ಜನರಿಗೆ ಒಳ್ಳೆಯದಾಗಲ್ಲ. ಕಾಂಗ್ರೆಸ್ ಅಂಬೇಡ್ಕರ್‌ರಿಗೆ ಅನ್ಯಾಯ ಮಾಡಿತು. ಚುನಾವಣೆಯಲ್ಲಿ ಸೋಲಿಸಿದರು. ಬಾಬು ಜಗಜೀವನರಾಮ್ ಅವರನ್ನು ಪ್ರಧಾನಿಯಾಗಲು ಬಿಡಲಿಲ್ಲ ಎಂದು ಟೀಕಿಸಿದರು.ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಅದು ನಾಮಕಾವಸ್ಥೆ. ಅವರು ಪ್ರಧಾನಿಯಾಗಬೇಕು ಎಂದರೆ ಸಿದ್ದರಾಮಯ್ಯ ಸೇರಿ ಎಲ್ಲರೂ ವಿರೋಧಿಸುತ್ತಿದ್ದಾರೆ. ಬಿಜೆಪಿ ಮಾತ್ರ ನಿಮ್ಮ ಹಿತ ಕಾಯಲಿದೆ. ನೀವು ಆತಂಕಕ್ಕೆ ಒಳಗಾಗಬೇಡಿ ಎಂದು ಭರವಸೆ ನೀಡಿದರು.
ಮಾದಿಗರು ಭಿನ್ನಾಭಿಪ್ರಾಯ ಬಿಟ್ಟು ಒಗ್ಗಟ್ಟಿನಿಂದ ಬಂದು ಬೇಡಿಕೆ ಕೊಟ್ಟರೆ ನಾವು ಈಡೇರಿಸುತ್ತೇವೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ತತ್ವ ಇಟ್ಟುಕೊಂಡು ನಾವು ಮುಂದುವರೆದಿದ್ದೇವೆ ಎಂದರು.ಸಮಾವೇಶದಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಎಂ.ಆರ್. ಪಾಟೀಲ, ಮಹೇಶ ಟೆಂಗಿನಕಾಯಿ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಬಿ.ಆರ್. ಮುನಿರಾಜ, ಸಿದ್ದು ಮೇತ್ರಿ, ಸಾಬು ದೊಡ್ಡಮನಿ, ಈರಣ್ಣ ಮೌರ್ಯ, ಸಹದೇವ ಮಾಳಗಿ, ಮಂಜುನಾಥ ಕೆ, ನರಸಪ್ಪ ದಂಡೋರ ಸೇರಿದಂತೆ ಇತರರು ಇದ್ದರು.
ಸಮಾವೇಶದಲ್ಲಿ ಗೊಂದಲಒಳಮೀಸಲಾತಿ ಕುರಿತು ಅರಿವು ಮೂಡಿಸುವ ಸಲುವಾಗಿ ಹಮ್ಮಿಕೊಂಡಿದ್ದ ಮಾದಿಗರ ಆತ್ಮಗೌರವ ಸಮಾವೇಶ ಗೊಂದಲದ ಗೂಡಾಗಿ ಪರಿಣಮಿಸಿತು.
ಮೊದಲೇ ನಿಗದಿತ ಅವಧಿಗಿಂತ 2 ಗಂಟೆ ತಡವಾಗಿ ಕಾರ್ಯಕ್ರಮ ಆರಂಭವಾಯಿತು. ಸಮಾವೇಶ ಪ್ರಾರಂಭವಾಗುತ್ತಿದ್ದಂತೆ ಕಾರ್ಯಕ್ರಮ ನಿರೂಪಕರು, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಅನ್ನು ಟೀಕಿಸಿದರು.ಇದಕ್ಕೆ ವೇದಿಕೆಯಲ್ಲಿದ್ದ ಅದೇ ಸಮಾಜದ ಕೆಲವರು ಆಕ್ಷೇಪ ವ್ಯಕ್ತಪಡಿಸಿ, ಹಳೆಯದನ್ನು ಬಿಡಿ, ಈಗ ಸಮಾವೇಶ ನಡೆಸುತ್ತಿರುವ ಉದ್ದೇಶ ತಿಳಿಸಿ ಎಂದರು. ಆದರೂ ಕಾಂಗ್ರೆಸ್‌ನ್ನು ಗುರಿಯಾಗಿಸಿ ಟೀಕಿಸಲು ಮುಖಂಡರು ಮುಂದಾದರು. ಆವಾಗಲೂ ಮತ್ತೆ ನಿರೂಪಕರ ಬಳಿ ಹೋಗಿ ಮತ್ತದೇ ಏಕೆ ? ಸಮಾವೇಶ ಬಗ್ಗೆ ಹೇಳಿ ಎಂದು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಹಲವರು ದನಿಗೂಡಿಸಿದರು. ಆಗ ಸಂಘಟಕರು, ನಾವು ವಾಸ್ತವವನ್ನು ಹೇಳುತ್ತೇವೆ. ಬೇಕಾದರೆ; ಇರಿ. ಬೇಡವಾದವರು ಹೋಗಬಹುದು ಎಂದು ಜೋರಾಗಿ ಹೇಳಿದರು. ಇದರಿಂದ ಆಕ್ರೋಶ ವ್ಯಕ್ತಪಡಿಸಿ ಸಮಾವೇಶದಲ್ಲಿದ್ದ ಸುಮಾರು ಜನರು ಹೊರ ನಡೆಯಲು ಮುಂದಾದರು.
ಈ ವೇಳೆ ಅರವಿಂದ ಬೆಲ್ಲದ ಬಾಗಲಿಗೆ ಬಂದು ಹೊರ ಹೋಗುವವರನ್ನು ತಡೆಯಲು ಮುಂದಾದರು. ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಮೈಕ್ ಹಿಡಿದು ಎಲ್ಲರೂ ಒಗ್ಗಟ್ಟಾಗಿ ಹೋಗೋಣ. 30 ವರ್ಷಗಳ ಬಳಿಕ ನಮಗೆ ನ್ಯಾಯ ಸಿಗುತ್ತಿದೆ. ಮೋದಿ ಅವರು ನ್ಯಾಯ ಕೊಡಿಸುತ್ತಾರೆ ಎಂದು ಮನವರಿಕೆ ಮಾಡಲೆತ್ನಿಸಿದರು.ಕೊನೆಗೆ ಗೋವಿಂದ ಕಾರಜೋಳ ಮೈಕ್ ಹಿಡಿದು, ಹೋಗಬ್ಯಾಡ ಬರ್ರೀ...ಬರ್ರೀ..ಎಂದು ಮನವಿ ಮಾಡುತ್ತಲೇ ಇದ್ದರು. ಕಾರಜೋಳ ಅವರ ಮಾತಿಗೆ ಮನ್ನಣೆ ನೀಡಿ ಹಲವರು ವಾಪಸ್ ಬಂದರು.