ಪೆಟ್ರೋಲ್ - ಡೀಸೆಲ್ ಬೆಲೆ ಏರಿಕೆಗೆ ಬಿಜೆಪಿಯಿಂದ ತೀವ್ರ ಖಂಡನೆ

KannadaprabhaNewsNetwork |  
Published : Jun 30, 2024, 12:47 AM IST
29ಕೆಎಂಎನ್ ಡಿ11 | Kannada Prabha

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದಲೂ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ರೈತರಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ವಿದ್ಯಾನಿಧಿ, ಭೂ ಸಿರಿ ಕಾಯ್ದೆ, ಗೋಶಾಲೆ, ಕಿಸಾನ್ ಸಮ್ಮಾನ್ ಸೇರಿದಂತೆ ಹಲವು ಯೋಜನೆಗಳನ್ನು ಸ್ಥಗಿತ ಮಾಡುವ ಮೂಲಕ ರೈತರ ಶಕ್ತಿ ಕುಗ್ಗಿಸಲು ಮುಂದಾಗಿದೆ ಎಂದು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಹಾಲು ಉತ್ಪಾದಕ ರೈತರಿಗೆ 5 ರು. ಪ್ರೋತ್ಸಾಹ ಧನ ವಿತರಣೆಗೆ ಆಗ್ರಹಿಸಿ, ಪೆಟ್ರೋಲ್ – ಡೀಸೆಲ್ ಬೆಲೆ ಹೆಚ್ಚಳ ಖಂಡಿಸಿ, ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶನಿವಾರ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಸೇರಿದ ನೂರಾರು ಕಾರ್ಯಕರ್ತರು ಹಸುಗಳಲ್ಲಿ ಹಾಲು ಕರೆದು ಪ್ರತಿಭಟಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದಲೂ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ರೈತರಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ವಿದ್ಯಾನಿಧಿ, ಭೂ ಸಿರಿ ಕಾಯ್ದೆ, ಗೋಶಾಲೆ, ಕಿಸಾನ್ ಸಮ್ಮಾನ್ ಸೇರಿದಂತೆ ಹಲವು ಯೋಜನೆಗಳನ್ನು ಸ್ಥಗಿತ ಮಾಡುವ ಮೂಲಕ ರೈತರ ಶಕ್ತಿ ಕುಗ್ಗಿಸಲು ಮುಂದಾಗಿದೆ ಎಂದು ಆರೋಪಿಸಿದರು.

ಪರಿಶಿಷ್ಟರಿಗೆ ಮೀಸಲಿಟ್ಟಿದ್ದ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುವ ಮೂಲಕ ದ್ರೋಹ ಮಾಡುತ್ತಿದೆ. ಹಾಲಿನ ಪ್ರೋತ್ಸಾಹ ಧನವನ್ನು ಪಶುಪಾಲನಾ ಇಲಾಖೆ ಸೇರಿ ವಿವಿಧ ಇಲಾಖೆಗೆ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಕಿಡಿಕಾರಿದರು

ಪೆಟ್ರೋಲ್ – ಡೀಸೆಲ್ ಬೆಲೆ ಹೆಚ್ಚಳ ಮಾಡಿ ಜನಸಾಮಾನ್ಯರನ್ನು ಕತ್ತಲಲ್ಲಿ ನೂಕಿದೆ. ಹಾಲಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹ ಧನವನ್ನು ಕಳೆದ ಆರು ತಿಂಗಳಿಂದ ನೀಡಿಲ್ಲ. ರೈತರು, ಕಾರ್ಮಿಕರು, ಜನಸಾಮಾನ್ಯರು ಸೇರಿ ರಾಜ್ಯದ ಎಲ್ಲಾ ಜನರ ವಿರೋಧಿಯಾಗಿ ಸರ್ಕಾರ ಆಡಳಿತ ನೀಡುತ್ತಿದೆ ಎಂದು ದೂರಿದರು.

ಕೂಡಲೇ ರೈತರಿಗೆ ಹಾಲಿನ ಪ್ರೋತ್ಸಾಹ ಧನ ಪಾವತಿಸಬೇಕು, ಪೆಟ್ರೋಲ್ ಡೀಸೆಲ್ ದರ ಇಳಿಕೆ ಮಾಡಿ, ಕೇಂದ್ರದ ರೈತಪರ ಯೋಜನೆಗಳನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್, ಅಶೋಕ್ ಜಯರಾಮ್, ಪಕ್ಷದ ಜಿಲ್ಲಾಧ್ಯಕ್ಷ ಡಾ. ಇಂದ್ರೇಶ್, ಡಾ. ಸಿದ್ದರಾಮಯ್ಯ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಎಚ್.ಎಂ.ರಘುಗೌಡ, ಹನಿಯಂಬಾಡಿ ನಾಗರಾಜು, ವಿವೇಕ್, ಸಿ. ಟಿ ಮಂಜುನಾಥ್, ಸಿದ್ದರಾಜು ಗೌಡ, ನಾಗಾನಂದ, ಶಶಿಕುಮಾರ್, ಸತೀಶ್, ಭೀಮೇಶ್,ನಾಗರಾಜು, ಲಿಂಗರಾಜು, ಜವರೇಗೌಡ , ವೈರಮುಡಿ , ವಿನಯ್ ಸೇರಿ ಹಲವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು