ಕನ್ನಡಪ್ರಭ ವಾರ್ತೆ ದಾವಣಗೆರೆ
ಶ್ರೀ ಗೌರಿ ಗಣೇಶ ಹಬ್ಬದ ವೇಳೆ ಡಿಜೆಗೆ ಅನುಮತಿ ನೀಡುವಂತೆ ಒತ್ತಾಯಿಸಿ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಬಿಜೆಪಿ, ಹಿಂದು ಪರ ಸಂಘಟನೆಗಳು, ಗಣೇಶೋತ್ಸವ ಸಮಿತಿಗಳು, ಶಾಮಿಯಾನ, ಧ್ವನಿವರ್ಧಕಗಳ ಮಾಲೀಕರು, ಕೆಲಸಗಾರರು ದಿಢೀರ್ ರಸ್ತೆ ತಡೆ ನಡೆಸಿದ ಘಟನೆ ನಗರದಲ್ಲಿ ಶನಿವಾರ ಸಂಜೆ ನಡೆಯಿತು.ನಗರದ ಶ್ರೀ ಜಯದೇವ ವೃತ್ತಕ್ಕೆ ಹಳೆ ಪ್ರವಾಸಿ ಮಂದಿರದಿಂದ ಆಗಮಿಸಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮುಖಂಡರಾದ ಲೋಕಿಕೆರೆ ನಾಗರಾಜ, ಪಿ.ಸಿ.ಶ್ರೀನಿವಾಸ ಭಟ್, ಬಿ.ಜಿ.ಅಜಯಕುಮಾರ, ಚಂದ್ರಶೇಖರ ಪೂಜಾರ, ಧನಂಜಯ ಕಡ್ಲೇಬಾಳು, ಆರ್.ಎಲ್.ಶಿವಪ್ರಕಾಶ ಸೇರಿದಂತೆ ನೂರಾರು ಜನರು ದಿಢೀರನೇ ಜಯದೇವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಪ್ರತಿಭಟಿಸಲು ಮುಂದಾಗುತ್ತಿದ್ದಂತೆ ಪೊಲೀಸರೂ ಅಲರ್ಟ್ ಆದರು.
ಸ್ಥಳಕ್ಕೆ ದೌಡಾಯಿಸಿ ವೃತ್ತ ನಿರೀಕ್ಷಕಿ ಮಲ್ಲಮ್ಮ ಚೌಬೆ ರಸ್ತೆ ತಡೆ ಮಾಡಿ, ಪ್ರತಿಭಟಿಸದಂತೆಮನವಿ ಮಾಡಿದರು. ಆದರೆ, ರೇಣುಕಾಚಾರ್ಯ ಮಾತ್ರ ಡಿಜೆಗೆ ಅನುಮತಿ ನೀಡುವುದಿಲ್ಲವೆಂದಿರುವ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕರು ಸ್ಥಳಕ್ಕೆ ಧಾವಿಸುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲವೆಂದು ಪಟ್ಟು ಹಿಡಿದರು. ಸುಮಾರು ಹೊತ್ತಿನ ನಂತರ ಎಎಸ್ಪಿ ಪರಮೇಶ್ವರ ಹೆಗಡೆ, ಡಿವೈಎಸ್ಪಿಗಳಾದ ಶರಣ ಬಸವೇಶ್ವರ, ಸಿಪಿಐಗಳಾದ ಲಕ್ಷ್ಮಣ ನಾಯ್ಕ ಇತರರು ಸ್ಥಳಕ್ಕೆ ಧಾವಿಸಿದರು.ಕಡೆಗೆ ಡಿಸಿ, ಎಸ್ಪಿ ಜತೆ ಎಎಸ್ಪಿ ಪರಮೇಶ್ವರ ಹೆಗಡೆ ಚರ್ಚಿಸಿ, ಆ.24ರಂದು ಮಧ್ಯಾಹ್ನ ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇದೇ ವಿಚಾರವಾಗಿ ಚರ್ಚಿಸಲು ಸಭೆ ಕರೆಯುವುದಾಗಿ ಭರವಸೆ ನೀಡಿದ ನಂತರವಷ್ಟೇ ರೇಣುಕಾಚಾರ್ಯ ಇತರರು ತಾತ್ಕಾಲಿಕ ಹೋರಾಟವನ್ನು ಕೈಬಿಟ್ಟರು.
ಇದಕ್ಕೂ ಮುನ್ನ ಹಳೆ ಪ್ರವಾಸಿ ಮಂದಿರದಲ್ಲಿ ಸಮಿತಿಗಳು, ಪಕ್ಷ, ಸಂಘಟನೆಗಳು, ವಿದ್ಯಾರ್ಥಿ, ಯುವ ಜನರು, ಶಾಮಿಯಾನ, ಧ್ವನಿವರ್ಧಕ ಮಾಲೀಕರು, ಕೆಲಸಗಾರರ ಜೊತೆಗೆ ಸಭಾಂಗಣದಲ್ಲಿ ಸಭೆ ಮಾಡಿ, ನಂತರ ಹೊರಗಡೆ ಸಭೆಯಲ್ಲಿ ಯಾವುದೇ ಕಾರಣಕ್ಕೂ ಡಿಜೆ ನಿಷೇಧಕ್ಕೆ ನಮ್ಮ ಸಮ್ಮತಿ ಇಲ್ಲ. ನಾವು ನಮ್ಮ ಹಬ್ಬವನ್ನು ಆಚರಿಸಲು ಯಾವುದೇ ದೊಣೆ ನಾಯಕರ ಅಪ್ಪಣೆ ಬೇಕಾಗಿಲ್ಲ ಎಂದರು.ಮುಖಂಡರಾದ ಸಂತೋಷ ಪೈಲ್ವಾನ್, ಎನ್.ಎಚ್.ಹಾಲೇಶ ನಾಯ್ಕ, ಪಂಜು ಪೈಲ್ವಾನ ಸೇರಿದಂತೆ ಅನೇಕರು ಇದ್ದರು.
ಗಣೇಶ ಹಬ್ಬದ ಮಾರ್ಗ ಹಾಕಿಕೊಡೋಕೆ ನೀವ್ಯಾರು?ಹಬ್ಬದ ಮಾರ್ಗ ಹಾಕಿಕೊಡಲು ನೀವ್ಯಾರು? ನಿಮಗೆ ನಾವು ಮಾರ್ಗ ಬರೆದು ಕೊಡಬೇಕಾ? ಭಾರತದಲ್ಲಿ ಒಂದೊಂದು ಇಂಚು ಸಹ ಹಿಂದುಗಳ ರಾಷ್ಟ್ರ ಹಿಂದೂ ದೇಶ. ಹಿಂದುಗಳ ಹಕ್ಕುಗಳನ್ನು ದಮನ ಮಾಡಲು ಹೋದರೆ ಸಹಿಸೊಲ್ಲ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ನಗರದ ಹಳೆ ಪ್ರವಾಸಿ ಮಂದಿರ ಆವರಣದಲ್ಲಿ ಮಾತನಾಡಿ, ಮೊನ್ನೆ ನಿಮ್ಮ ವರ್ತನೆ ನೋಡಿ ಬೇಜಾರಾಯಿತು. ಓರ್ವ ಡಿಸಿ ಯಾರೇ ಮನವಿ ಕೊಟ್ಟರೂ ಅದನ್ನು ಗೌರವದಿಂದ ಸ್ವೀಕರಿಸಿ, ತಾಳ್ಮೆಯಿಂದ ಆಲಿಸಿ, ಒಪ್ಪುವಂತಹ ಷರತ್ತು ಹಾಕಬೇಕು ಎಂದರು.