- ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವ । ರಾಜ್ಯ ಸರ್ಕಾರ ವಿರುದ್ಧ ಮುಖಂಡರ ವಾಗ್ದಾಳಿ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳು ಹಾಗೂ ರಾಜ್ಯದ ಬಹುತೇಕ ಇತರ ತಾಲೂಕುಗಳಲ್ಲಿ ಮಳೆ ಇಲ್ಲದೇ ಬೆಳೆಗಳು ಸಂಪೂರ್ಣ ಒಣಗಿ, ರೈತರ ಬದುಕು ದುಸ್ತರವಾಗಿದೆ. ಹೀಗಿದ್ದರೂ ರಾಜ್ಯದ ಕಾಂಗ್ರೆಸ್ ಸರ್ಕಾರ ಭೀಕರ ಬರಗಾಲದ ಬಗ್ಗೆ ಕಿಂಚಿತ್ತೂ ಚಿಂತಿಸದೇ ಸತ್ತುಹೋಗಿದೆ. ರೈತರು, ಸಾಮಾನ್ಯ ಜನರು ಸರ್ಕಾರದ ಬಗ್ಗೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾ ಮತ್ತು ತಾಲೂಕು ಬಿಜೆಪಿ ಮೋರ್ಚಾ ಹಾಗೂ ಬಿಜೆಪಿ ಮಂಡಲ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಬರ ಸಮೀಕ್ಷೆಯಲ್ಲಿ ತಾಲೂಕಿನ ಎಚ್.ಕಡದಕಟ್ಟೆ ಗ್ರಾಮದ ಜಮೀನೊಂದಿಕ್ಕೆ ಭೇಟಿ ನೀಡಿ ಒಣಗಿದ ಬೆಳೆಗಳ ಪರಿಶೀಲಿಸಿದ ನಂತರ ಅವರು ಮಾತನಾಡಿದರು. ರಾಜ್ಯ ಸರ್ಕಾರ ತಕ್ಷಣ ಅವಳಿ ತಾಲೂಕುಗಳು ಸೇರಿದಂತೆ ಭೀಕರ ಬರಗಾಲ ಎದುರಿಸುವ ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಿ ಸೂಕ್ತ ಪರಿಹಾರ ನೀಡಬೇಕು. ತಪ್ಪಿದಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಬಿಎಸ್‌ವೈ ಸಿಎಂ ಆಗಿದ್ದ ಸಂದರ್ಭ ಹೆಚ್ಚು ಮಳೆಯಿಂದ ಬೆಳೆ, ಮನೆಗಳಿಗೆ ಹಾನಿಯಾಗಿದ್ದನ್ನು ಸಮರ್ಪಕವಾಗಿ ನಿಭಾಯಿಸಿದ್ದರು. ಈಗ ಅನಾವೃಷ್ಠಿಯಿಂದ ಬೆಳೆಗಳು ಹಾಳಾಗಿದ್ದರೂ ಸಿಎಂ ಡಿ.ಕೆ.ಶಿವಕುಮಾರ್, ಹಿರಿಯ ಪ್ರಬುದ್ಧ ರಾಜಕಾರಣಿ ಎನಿಸಿರುವ ಮಾಜಿ ಸಿ.ಎಂ ಸಿದ್ದರಾಮಯ್ಯ ಹಾಗೂ ಇತರ ನಾಯಕರು ಸಚಿವ ಸಂಪುಟ ವಿಸ್ತರಣೆಗೆ ತಮ್ಮ ಬೆಂಬಲಿಗರ ಪಟ್ಟಿ ಹಿಡಿದುಕೊಂಡು ಅಪ್ರಬುದ್ಧ ರಾಹುಲ್ ಗಾಂಧಿ ಮುಂದೆ ಮಂಡಿಯೂರಿದ್ದಾರೆ ಎಂದ ಅವರು, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜು.22ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಮಾತನಾಡಿ, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರ ಆದೇಶದಂತೆ ಬಿಜೆಪಿ 4 ತಂಡಗಳನ್ನಾಗಿ ರಚಿಸಿ ಇದೇ ಮೊದಲ ಬಾರಿಗೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ಬರ ಅಧ್ಯಯನ ಪ್ರಾರಂಭ ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಚಂದ್ರಶೇಖರ ಪುಜಾರ್ ಮಾತನಾಡಿ, ಭೀಕರ ಬರಗಾಲದಿಂದ ಬೆಳೆಗಳು ಸುಟ್ಟುಹೋಗಿವೆ ಸರ್ಕಾರ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ಘೋಷಿಸಿ ಆದಷ್ಟು ಬೇಗನೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
- - -
ಎಚ್.ಕಡದಕಟ್ಟೆ ಗ್ರಾಮದ ಜಮೀನಿನಲ್ಲಿ ಬಿಜೆಪಿಯಿಂದ ಬರ ಸಮೀಕ್ಷೆ ನಡೆಸಲಾಯಿತು.