ಕನ್ನಡಪ್ರಭ ವಾರ್ತೆ ಕುಶಾಲನಗರಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರಿಗೆ ಟಿಕೆಟ್ ನೀಡದೆ ಬಿಜೆಪಿ ಒಕ್ಕಲಿಗ ಸಮುದಾಯದ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯ ನೀತಿಯ ಧೋರಣೆಯನ್ನು ಕುಶಾಲನಗರ ಗೌಡ ಸಮಾಜದ ಪ್ರಮುಖರು ಖಂಡಿಸಿದ್ದಾರೆ.
ಕುಶಾಲನಗರ ಪತ್ರಿಕಾ ಭವನದಲ್ಲಿ ಕೊಡಗು ಗೌಡ ಸಮಾಜಗಳ ಒಕ್ಕೂಟದ ಪ್ರಮುಖ ಆನಂದ ಕರಂದ್ಲಾಜೆ ಮಾತನಾಡಿ, ಹಿಂದಿನ ಲೋಕಸಭೆಯಲ್ಲಿ ಅತ್ಯುತ್ತಮ ಸಂಸದೀಯ ಪಟು ಆಗಿದ್ದ ಪ್ರತಾಪ್ ಸಿಂಹ ಅವರಿಗೆ ಕೂಡ ಟಿಕೆಟ್ ನಿರಾಕರಿಸಲಾಗಿದೆ. ಬಿಜೆಪಿಯ ಹೈಕಮಾಂಡ್ ಮೂಲಕ ಒಕ್ಕಲಿಗರನ್ನು ತುಳಿಯುವ ಸಂಕೇತ ವಾಗಿದೆ ಎಂದು ಹೇಳಿದರು. ಬಿಜೆಪಿ ಪಕ್ಷದ ವರಿಷ್ಠರು ಸದಾನಂದ ಗೌಡರಿಗೆ ನೀಡಿದ ವಾಗ್ದಾನವನ್ನು ಕೊನೆಗಳಿಗೆಯಲ್ಲಿ ತಪ್ಪಿಸಿರುವುದು ಎಲ್ಲರ ಅಸಮಾಧಾನಕ್ಕೆ ಕಾರಣವಾಗಿದೆ ಎಂದರು.ಬಿಜೆಪಿ ಹೈಕಮಾಂಡ್ ತಕ್ಷಣ ಸದಾನಂದ ಗೌಡರಿಗೆ ಟಿಕೆಟ್ ನೀಡುವುದು ಅಥವಾ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ನೀಡದಿದ್ದಲ್ಲಿ ಕೊಡಗಿನ ಗೌಡ ಸಮಾಜಗಳು ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.ಈ ಸಂಬಂಧ ಕೊಡಗು ಗೌಡ ಸಮಾಜಗಳ ಒಕ್ಕೂಟದ ಸಭೆ ಕರೆದು ಒಕ್ಕಲಿಗರ ಹಿತ ಕಾಯದ ಪಕ್ಷಗಳಿಗೆ ಯಾವುದೇ ಕಾರಣಕ್ಕೂ ಬೆಂಬಲ ನೀಡದಂತೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಆನಂದ ತಿಳಿಸಿದ್ದಾರೆ.
ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್, ಕೊಡಗು ಮೈಸೂರು ಕ್ಷೇತ್ರದಲ್ಲಿ ಅಭಿವೃದ್ಧಿ ಯೋಜನೆಗಳನ್ನು ತರುವ ಮೂಲಕ ಗರಿಷ್ಠ ಮಟ್ಟದಲ್ಲಿ ಅನುಷ್ಠಾನಗೊಳಿಸಿರುವ ಸಂಸದ ಪ್ರತಾಪ್ ಸಿಂಹ ಅವರನ್ನು ಬಿಜೆಪಿ ಕಡೆಗಣಿಸಿರುವುದು ಸರಿಯಲ್ಲ ಎಂದು ಹೇಳಿದರು.ಮಾಜಿ ಕೇಂದ್ರ ಸಚಿವರು ಹಾಗೂ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದ ಡಿ.ವಿ. ಸದಾನಂದ ಗೌಡ ಅವರಿಗೆ ಟಿಕೆಟ್ ನಿರಾಕರಣೆ ಮಾಡಿರುವುದು ಕೊಡಗು ಜಿಲ್ಲೆಯ ಸಮುದಾಯ ಬಾಂಧವರಿಗೆ ಅತೀವ ಬೇಸರ ಉಂಟು ಮಾಡಿದೆ ಎಂದು ಹೇಳಿದರು. ಇದರಿಂದ ಮುಂದಿನ ದಿನಗಳಲ್ಲಿ ಸಮುದಾಯದ ಜನತೆ ಸೇರಿದಂತೆ ಜಿಲ್ಲೆಯ ಮತದಾರರು ಸೂಕ್ತ ತೀರ್ಮಾನ ಕೈಗೊಳ್ಳುವ ಬಗ್ಗೆ ಚಿಂತನೆ ಹರಿಸಲಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಕುಶಾಲನಗರ ಗೌಡ ಯುವಕ ಸಂಘದ ಅಧ್ಯಕ್ಷರಾದ ಕೊಡಗನ ಹರ್ಷ, ಗೌಡ ಸಮಾಜದ ಉಪಾಧ್ಯಕ್ಷರಾದ ಸೆಟ್ಟೆಜನ ದೊರೆ ಗಣಪತಿ, ಕುಲ್ಲಚೆಟ್ಟಿ ಕಾಶಿ ಪೂವಯ್ಯ, ಕುಲ್ಲಚ್ಚನ ಹೇಮಂತ್, ದಬ್ಬಡ್ಕ ಡಾಟ್ಟಿ ಇದ್ದರು.