ಕನ್ನಡಪ್ರಭ ವಾರ್ತೆ ಶಿವಮೊಗ್ಗ ಜಿಲ್ಲೆಯಲ್ಲಿ ಮಾ.25 ರಿಂದ ಏಪ್ರಿಲ್ 6ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿದ್ದು, ಸುವ್ಯವಸ್ಥಿತವಾಗಿ ಪರೀಕ್ಷೆಗಳನ್ನು ನಡೆಸಲು ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗ ರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೂಲಸೌಕರ್ಯಗಳಿಗೆ ಸೂಚನೆ:
ಪರೀಕ್ಷಾ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳಾದ ಆಸನ, ಕುಡಿಯುವ ನೀರು ಸೇರಿದಂತೆ ಇತರೇ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಬಂದೋಬಸ್ತ್ ಅನ್ನು ಪೊಲೀಸ್ ಇಲಾಖೆಯಿಂದ ಒದಗಿಸಲಾಗುವುದು. ವಾಹನ ವ್ಯವಸ್ಥೆಯನ್ನು ತಮ್ಮ ವತಿಯಿಂದ ಮಾಡಲಾಗುವುದು. ಸುಗಮ ಪರೀಕ್ಷೆಗೆ ಅಗತ್ಯವಾದ ಎಲ್ಲ ಸಹಕಾರವನ್ನು ನೀಡಲಾಗುವುದು. ಪ್ರತಿ ಹಂತದಲ್ಲಿ ನಿಯೋಜಿತ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಶಿಸ್ತಿನಿಂದ ನಿರ್ವಹಿಸುವ ಮೂಲಕ ಯಶಸ್ವಿಯಾಗಿ ಪರೀಕ್ಷೆಗಳನ್ನು ನಡೆಸಬೇಕೆಂದು ಸೂಚನೆ ನೀಡಿದರು.ನಿರ್ಭೀತಿಯಿಂದ ಪರೀಕ್ಷೆ ಎದುರಿಸಬೇಕು:
ಜಿ.ಪಂ. ಉಪ ಕಾರ್ಯದರ್ಶಿ ದಾಸೇಗೌಡ ಮಾತನಾಡಿ, ಚುನಾವಣೆ ಮತ್ತು ಪರೀಕ್ಷೆಗಳು ಒಟ್ಟಾಗಿ ಘೋಷಣೆಯಾಗಿವೆ. ಎರಡನ್ನೂ ಸುಗಮವಾಗಿ ನಡೆಸುವಂತಹ ವ್ಯವಸ್ಥೆ ಮಾಡಿಕೊಂಡು ಯಶಸ್ವಿಗೊಳಿಸಬೇಕು. ವಿದ್ಯಾರ್ಥಿಗಳು ಚೆನ್ನಾಗಿ ಪರೀಕ್ಷೆಗಳನ್ನು ಬರೆಯುವ ಮೂಲಕ ಜಿಲ್ಲೆಗೆ ಉನ್ನತ ಸ್ಥಾನ ತಂದು ಕೊಡಬೇಕು ಎಂದರು.
ಆರ್‌ಸಿಎಚ್ ಅಧಿಕಾರಿ ಡಾ.ನಾಗರಾಜ ನಾಯ್ಕ್ ಮಾತನಾಡಿ, ಮಕ್ಕಳು ಪರೀಕ್ಷೆಗೆ ಮಾನಸಿಕವಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಬೆಳಗ್ಗೆ ನಿಯಮಿತವಾಗಿ ತಿಂಡಿ ತಿನ್ನಬೇಕು. ಬೇಸಿಗೆ ಸಮಯವಾದ್ದರಿಂದ ಪದೇಪದೆ ಶುದ್ಧ ಕುಡಿಯುವ ನೀರನ್ನು ಕುಡಿಯಬೇಕು. ಪರೀಕ್ಷಾ ಕೇಂದ್ರಗಳಿಗೆ ಆರೋಗ್ಯ ಇಲಾಖೆಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ ಮಾತನಾಡಿ, ಮಾ.25ರಂದು ಪ್ರಥಮ ಭಾಷೆ, ಮಾ27ರಂದು ಸಮಾಜ ವಿಜ್ಞಾನ, ಮಾ.30ರಂದು ವಿಜ್ಞಾನ, ಏ.2ರಂದು ಗಣಿತ, ಏ.4ರಂದು ತೃತೀಯ ಭಾಷೆ ಮತ್ತು ಏ.6ರಂದು ದ್ವಿತೀಯ ಭಾಷೆ ಪರೀಕ್ಷೆಗಳು ನಡೆಯಲಿವೆ ಎಂದು ತಿಳಿಸಿದರು.2023- 24ನೇ ಸಾಲಿಗೆ ಜಿಲ್ಲೆಯಲ್ಲಿ ರೆಗ್ಯುಲರ್ ವಿದ್ಯಾರ್ಥಿಗಳು 22044, ಪುನರಾವರ್ತಿತ 1430, ಖಾಸಗಿ 384 ಮತ್ತು ಖಾಸಗಿ ಪುನರಾವರ್ತಿತ 144 ಸೇರಿದಂತೆ ಒಟ್ಟು 24002 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 78 ಪರೀಕ್ಷಾ ಕೇಂದ್ರಗಳು ಇದ್ದು, 78 ಮುಖ್ಯ ಅಧೀಕ್ಷಕರು, 24 ಉಪ ಮುಖ್ಯ ಅಧೀಕ್ಷಕರನ್ನು ನೇಮಿಸಲಾಗಿದೆ.
ಸಭೆಯಲ್ಲಿ ಎಲ್ಲ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಣಾಧಿಕಾರಿಗಳು, ಪರೀಕ್ಷೆಗೆ ನಿಯೋಜನೆಗೊಂಡ ಅಧಿಕಾರಿಗಳು ಹಾಜರಿದ್ದರು.
- - - ಬಾಕ್ಸ್* ಪರೀಕ್ಷಾ ವೇಳಾಪಟ್ಟಿಮಾ.25ರಂದು ಪ್ರಥಮ ಭಾಷೆಮಾ27ರಂದು ಸಮಾಜ ವಿಜ್ಞಾನ
ಏ.2ರಂದು ಗಣಿತ
ಏ.4ರಂದು ತೃತೀಯ ಭಾಷೆಏ.6ರಂದು ದ್ವಿತೀಯ ಭಾಷೆ
ಶಿವಮೊಗ್ಗದ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವಸಿದ್ಧತಾ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಮಾತನಾಡಿದರು.