ಬಿಜೆಪಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಸೀಕಲ್ ರಾಮಚಂದ್ರಗೌಡ ವಿಶ್ವಾಸ
2028ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ ಭವಿಷ್ಯ ನುಡಿದರು.
ಪಟ್ಟಣದ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಪಕ್ಕದಲ್ಲಿ ನೂತನ ಬಿಜೆಪಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, 2028ರ ಚುನಾವಣೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಬಾಗೇಪಲ್ಲಿ ಸೇರಿದಂತೆ ಜಿಲ್ಲೆಯಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೆ ಒಗ್ಗಟ್ಟಿನಿಂದ ಬಿಜೆಪಿ ಪಕ್ಷದ ಸಂಘಟಿಸುವುದಕ್ಕೆ ಹೆಚ್ಚಿನ ಒತ್ತು ನೀಡುವುದು. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯ ಬಿಜೆಪಿ ಪಕ್ಷದ ಎಲ್ಲಾ ಅಭ್ಯರ್ಥಿಗಳ ಗೆಲುವಿಗೆ ಜಿಲ್ಲೆಯ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಕೈಜೋಡಿಸಬೇಕೆಂದರು.ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಶಾಶ್ವತ ನಿವಾಸಿ ಪತ್ರ ವಿತರಣೆ ಮಾಡುವ ಕ್ರಮವನ್ನು ತೀವ್ರವಾಗಿ ಖಂಡಿಸಿದ ಅವರು, ಆಂಧ್ರ, ತಮಿಳುನಾಡು ಮಾತ್ರವಲ್ಲದೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತಿತರ ಹೊರ ರಾಜ್ಯ ಮತ್ತು ಹೊರ ದೇಶಗಳಿಂದ ವಲಸೆ ಬಂದಿರುವವರಿಗೆ ಯಾವುದೇ ರೀತಿಯ ಪರಿಶೀಲನೆ ಮಾಡದೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ಐ ಡಿ ಕಾರ್ಡ್ ರೇಷನ್ ಕಾರ್ಡ್, ಗ್ಯಾರೆಂಟಿಗಳನ್ನು ನೀಡುವುದರ ಜೊತೆಗೆ ಈಗ ಶಾಶ್ವತ ನಿವಾಸಿ ಪತ್ರವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ನೀಡುವ ಮೂಲಕ ಓಟ್ ಬ್ಯಾಂಕ್ ಮಾಡಿಕೊಳ್ಳುವಂತಹ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಹೊರ ದೇಶಗಳಿಂದ ಬಂದಂತಹ ವಲಸಿಗರನ್ನು ಆಯಾ ದೇಶಗಳಿಗೆ ವಾಪಸ್ ಕಳುಸುವಂತಹ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ. ರಾಜ್ಯದಲ್ಲಿಯೂ ಸಹ ಬಾಂಗ್ಲಾ ದೇಶ ಸೇರಿದಂತೆ ಹೊರ ರಾಜ್ಯ ಮತ್ತು ಹೊರ ದೇಶಗಳಿಂದ ಬಂದಿರುವ ವಲಸಿಗರನ್ನು ವಾಪಸ್ ಕಳುಹಿಸುವಂತಹ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕೆಂದು ಆಗ್ರಹಿಸಿದರು.
12ಬಿಜಿಪಿ-1: ಬಾಗೇಪಲ್ಲಿಯಲ್ಲಿ ನೂತನ ಬಿಜೆಪಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಬಿಜೆಪಿ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾದ ಸೀಕಲ್ ರಾಮಚಂದ್ರ ಗೌಡ ಭೂಮಿ ಪೂಜೆ ನೆರವೇರಿಸಿದರು.