ಪೆನ್ಷನ್ ಅದಾಲತ್ ಸರ್ಕಾರಿ ಕಾರ್ಯಕ್ರಮದಲ್ಲಿ ತಮಿಳು ಭಾಷಿಗರು ಕೇಳದೇ ಇದ್ದರೂ ಸಹ ತಮಿಳು ಭಾಷೆಯಲ್ಲಿ ಭಾಷಣ ಮಾಡಿರುವುದು ಕನ್ನಡ ಸಂಘಟನೆಗಳ ಕಾರ್ಯಕರ್ತರನ್ನು ಕೆರಳಿಸಿದೆ.

ಸರ್ಕಾರದ ಆದೇಶ ಗಾಳಿಗೆ ತೂರಿದ ಗಾಯತ್ರಿ । ಪೆನ್ಷನ್ ಅದಾಲತ್ ಕಾರ್ಯಕ್ರಮದಲ್ಲಿ ತಮಿಳು ಭಾಷಣ

ಕೆಜಿಎಫ್ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಕನ್ನಡ ಭಾಷೆಯನ್ನು ಕಟ್ಟುನಿಟ್ಟಾಗಿ ಅನುಷ್ಟಾನಗೊಳಿಸುವ ಜವಾಬ್ದಾರಿಯನ್ನು ಹೊತ್ತಿರುವ ತಹಸೀಲ್ದಾರ್ ಗಾಯತ್ರಿ ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ ಯಾರನ್ನೋ ಓಲೈಸುವ ಸಲುವಾಗಿ ತಮಿಳು ಭಾಷೆಯಲ್ಲಿ ಭಾಷಣ ಮಾಡುವ ಮೂಲಕ ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ನಗರದ ೧೮ನೇ ವಾರ್ಡ್‌ನಲ್ಲಿ ಕಂದಾಯ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ನಗರಸಭೆ ಇಲಾಖೆಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪೆನ್ಷನ್ ಅದಾಲತ್ ಸರ್ಕಾರಿ ಕಾರ್ಯಕ್ರಮದಲ್ಲಿ ತಮಿಳು ಭಾಷಿಗರು ಕೇಳದೇ ಇದ್ದರೂ ಸಹ ತಮಿಳು ಭಾಷೆಯಲ್ಲಿ ಭಾಷಣ ಮಾಡಿರುವುದು ಕನ್ನಡ ಸಂಘಟನೆಗಳ ಕಾರ್ಯಕರ್ತರನ್ನು ಕೆರಳಿಸಿದೆ. ಕನ್ನಡ ಭಾಷೆಯನ್ನು ಅನುಷ್ಠಾನಗೊಳಿಸುವುದು ಸವಾಲಿನ ಕೆಲಸವಾಗಿರುವ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳೇ ಕನ್ನಡ ಭಾಷೆಗೆ ಅಪಮಾನ ಮಾಡಿ, ತಮಿಳು ಭಾಷೆಯಲ್ಲಿ ಭಾಷಣ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಈ ಭಾಗದಲ್ಲಿನ ಕನ್ನಡಾಭಿಮಾನಿ ಬೆಸ್ಕಾಂ ನಾಗರಾಜ್ ಪ್ರಶ್ನಿಸುತ್ತಿದ್ದಾರೆ.ಸರ್ಕಾರಿ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯನ್ನು ನಿರ್ಲಕ್ಷಿಸಿ ತಮಿಳು ಭಾಷೆಯಲ್ಲಿ ಭಾಷಣ ಮಾಡುವುದು ಖಂಡನೀಯ. ಕೂಡಲೇ ಜಿಲ್ಲಾಧಿಕಾರಿಗಳು ತಹಸೀಲ್ದಾರ್ ಅವರನ್ನು ಅಮಾನತುಗೊಳಿಸಬೇಕು. ಇಲ್ಲದೇ ಹೋದರೆ ಡಿಸಿ ಕಚೇರಿ ಮುಂಭಾಗ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ನವಕರವೇ ರಾಜ್ಯಧ್ಯಕ್ಷರಾದ ಎಸ್.ಎನ್. ರಾಜಗೋಪಾಲಗೌಡ ಹೇಳಿದ್ದಾರೆ.

ಕರ್ನಾಟಕದಲ್ಲಿ ಕನ್ನಡದ ಬಳಕೆ ಕಡ್ಡಾಯವಾಗಿದ್ದು, ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ ಕನ್ನಡ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಸುರೇಶ್‌ಕುಮಾರ್ ಒತ್ತಾಯಿಸಿದ್ದಾರೆ. ತಹಸೀಲ್ದಾರ್‌ ತಮಿಳು ಭಾಷೆಯಲ್ಲಿ ಮಾತನಾಡುವ ಮೂಲಕ ಕನ್ನಡಿಗರಿಗೆ ಅಪಮಾನ ಮಾಡಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ. ಈ ಬಗ್ಗೆ ಕಾನೂನು ಹೋರಾಟ ನಡೆಸಲಾಗುವುದು ನವಕರವೇ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ತಿಳಿಸಿದ್ದಾರೆ.

೧೨ಕೆಜಿಎಫ್೧ sಸರಕಾರಿ ಕರ‍್ಯಕ್ರಮದಲ್ಲಿ ಮಾಜಿ ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ಬಾಷಣ ಭಾಷೆ