ಸ್ವಂತ ಬಲದ ಮೇಲೆ ಬಿಜೆಪಿ ಅಧಿಕಾರಕ್ಕೆ: ಬಿವೈವಿ

KannadaprabhaNewsNetwork |  
Published : Dec 26, 2025, 01:45 AM IST
ವಿಜಯೇಂದ್ರ | Kannada Prabha

ಸಾರಾಂಶ

ರಾಜ್ಯದಲ್ಲಿ ಯಾವಾಗ ಚುನಾವಣೆ ನಡೆದರೂ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಯಾವಾಗ ಚುನಾವಣೆ ನಡೆದರೂ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗುರುವಾರ ಪಕ್ಷದ ಕಚೇರಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕವು ಮುಂದೊಂದು ದಿನ ದಕ್ಷಿಣ ಭಾರತದಲ್ಲಿ ಬಿಜೆಪಿಯ ಭದ್ರ ಕೋಟೆ ಆಗಲಿದೆ ಎಂಬ ದೂರದೃಷ್ಟಿತ್ವ ವಾಜಪೇಯಿ ಅವರಲ್ಲಿತ್ತು. ಕಾರ್ಯಕರ್ತರ ಕುರಿತು ಅದಮ್ಯ ವಿಶ್ವಾಸ ಅವರದಾಗಿತ್ತು. ಸೋಲಿನಿಂದ ಅಂಜುವ ಪ್ರಶ್ನೆಯೇ ಇಲ್ಲ ಎಂಬ ಮಾತನ್ನು ವಾಜಪೇಯಿ ಅವರು ಹೇಳುತ್ತಿದ್ದರು. ಪಕ್ಷವನ್ನು ದೃಢವಾಗಿ ಕಟ್ಟುವ ಆತ್ಮವಿಶ್ವಾಸವನ್ನು ಕಾರ್ಯಕರ್ತರಲ್ಲಿ ಅವರು ತುಂಬಿದ್ದರು ಎಂದು ಹೇಳಿದರು.

ಅರ್ಥ ಮಾಡಿಕೊಳ್ಳಿ:

ವಾಜಪೇಯಿ ಅವರ ದೇಶಭಕ್ತಿ ನಮಗೆ ಪ್ರೇರಣೆ ಆಗಬೇಕು. ಅವರ ದೂರದೃಷ್ಟಿತ್ವವನ್ನು ಅರ್ಥ ಮಾಡಿಕೊಳ್ಳಿ. ಅಸ್ತಿತ್ವ ಕಳಕೊಳ್ಳುತ್ತಿರುವ ಕಾಂಗ್ರೆಸ್ಸಿನ ಸ್ಥಿತಿಯನ್ನು ರಾಜ್ಯದ ಪಟ್ಟಣ ಪಂಚಾಯಿತಿ ಚುನಾವಣೆ ತೋರಿಸಿಕೊಟ್ಟಿದೆ ಎಂದರು. ಇವಿಎಂ ಇರಲಿ, ಬ್ಯಾಲೆಟ್ ಇರಲಿ. ಕಾಂಗ್ರೆಸ್ಸಿನ ಹಣೆಬರಹ ಬದಲಾಗಲು ಸಾಧ್ಯವಿಲ್ಲ ಎಂದು ಹೇಳಿದರು.

ನಮ್ಮ ಸ್ವಯಂಕೃತ ಅಪರಾಧದಿಂದ ಪ್ರತಿಪಕ್ಷದಲ್ಲಿ ಕುಳಿತಿದ್ದೇವೆ. ನಾವ್ಯಾರೂ ಆತಂಕ ಪಡಬೇಕಿಲ್ಲ. ರಾಜ್ಯದ ಜನವಿರೋಧಿ, ಬಡವರ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಕ್ರೋಶ ಹೆಚ್ಚಾಗಿದೆ. ಜನ ಆಕ್ರೋಶ ಹೊರಹಾಕುತ್ತಿದ್ದಾರೆ. ಚುನಾವಣೆ ನಾಳೆಯೇ ನಡೆಯಲಿ ಅಥವಾ ನಿಗದಿತ 2028ರಲ್ಲೇ ನಡೆಯಲಿ. ಯಾವಾಗ ನಡೆದರೂ ಕರ್ನಾಟಕದಲ್ಲಿ ಬಿಜೆಪಿ ಸ್ವಂತ ಶಕ್ತಿಯ ಮೇಲೆ 130-140 ಶಾಸಕರೊಂದಿಗೆ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ. ನಾವೆಲ್ಲರೂ ಇದಕ್ಕಾಗಿ ಪಕ್ಷವನ್ನು ಬಲಪಡಿಸಬೇಕು ಎಂದು ಮನವಿ ಮಾಡಿದರು.ರಾಜ್ಯಾದ್ಯಂತ ವಾಜಪೇಯಿ 101ನೇ ಹುಟ್ಟುಹಬ್ಬ ಆಚರಣೆ:ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ವರ್ಷದ ಜನ್ಮ ದಿನಾಚರಣೆಯನ್ನು ರಾಜ್ಯಾದ್ಯಂತ ಗುರುವಾರ ಭಕ್ತಿ-ಭಾವದಿಂದ ಆಚರಿಸಲಾಯಿತು.ಬೆಂಗಳೂರಿನಲ್ಲಿ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪಾಲ್ಗೊಂಡಿದ್ದರು. ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸೋಮಣ್ಣ ಅವರು ವಾಜಪೇಯಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಹಾಸನದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷಕ್ಕಾಗಿ ಹಲವಾರು ವರ್ಷಗಳ ಕಾಲ ದುಡಿದ ಬಿಜೆಪಿಯ ಹಿರಿಯರಾದ ರಮೇಶ್ ಮತ್ತು ಪ್ರೇಮ್‌ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ನೆಲಮಂಗಲ ತಾಲೂಕು ಬಿಜೆಪಿ ವತಿಯಿಂದ ಬಸ್ ನಿಲ್ದಾಣದ ಆವರಣದಲ್ಲಿ ವಾಜಪೇಯಿಯವರ ಭಾವಚಿತ್ರ ಇಟ್ಟು, ಪುಷ್ಪ ನಮನ ಸಲ್ಲಿಸಿ, ಸಿಹಿ ವಿತರಿಸಲಾಯಿತು. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯಲ್ಲಿ ಜನ್ಮ ದಿನಾಚರಣೆ ಅಂಗವಾಗಿ ಸಸಿ ನೆಡಲಾಯಿತು. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಪರಿಸರ ವೇದಿಕೆಯಿಂದ ಗಿಡ ನೆಡುವ ಮೂಲಕ ವಾಜಪೇಯಿ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಇದೇ ವೇಳೆ, ಉಡುಪಿ, ಮಂಗಳೂರು, ಶಿವಮೊಗ್ಗ, ಮೈಸೂರು, ಕಲಬುರಗಿ, ಮಂಡ್ಯ, ರಾಯಚೂರು ಸೇರಿ ರಾಜ್ಯದ ಇತರೆಡೆಯೂ ಜನ್ಮ ದಿನಾಚರಣೆಯ ಕಾರ್ಯಕ್ರಮಗಳು ನಡೆದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುರ್ಚಿ ಸರ್ಕಸ್‌ ಮಧ್ಯೆ ಇಂದು ಸಿದ್ದು ದೆಹಲಿಗೆ - ನಾಳೆ ಸಿಡಬ್ಲುಸಿ ಸಭೆಯಲ್ಲಿ ಸಿಎಂ ಭಾಗಿ
ಭೂಪರಿವರ್ತನೆ ಇನ್ನು ಅತಿ ಸರಳ