ಧರ್ಮಸ್ಥಳದ ಬಗ್ಗೆ ಅಪಪ್ರಚಾರ: ನಾಳೆಯಿಂದ ಬಿಜೆಪಿ ಪ್ರತಿಭಟನೆ

KannadaprabhaNewsNetwork |  
Published : Aug 22, 2025, 01:00 AM IST
21ಎಚ್‌ವಿಆರ್1 | Kannada Prabha

ಸಾರಾಂಶ

ದಕ್ಷಿಣ ಭಾರತದ ಧಾರ್ಮಿಕ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಹಾಗೂ ಜೈನ ಸಮುದಾಯದ ಧರ್ಮಾಧಿಕಾರಿಯನ್ನು ಗುರಿಯಾಗಿಸಿಕೊಂಡು ಮಾಡುತ್ತಿರುವ ದುರುದ್ದೇಶಪೂರಿತ ಅಪಪ್ರಚಾರ ಖಂಡನೀಯ.

ಹಾವೇರಿ: ಕೋಟ್ಯಂತರ ಹಿಂದೂಗಳ ಶ್ರದ್ಧಾಭಕ್ತಿಯ ಕೇಂದ್ರವಾದ ಧರ್ಮಸ್ಥಳ ಪುಣ್ಯಕ್ಷೇತ್ರ ಹಾಗೂ ಧರ್ಮಾಧಿಕಾರಿಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಯೂಟ್ಯೂಬರ್ ಹಾಗೂ ಇನ್ನಿತರ ವ್ಯಕ್ತಿಗಳ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸಿ ಆ. 23 ಹಾಗೂ ಆ. 25ರಂದು ಎರಡು ದಿನಗಳ ಕಾಲ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಬಹುದೊಡ್ಡ ಷಡ್ಯಂತ್ರ ನಡೆಯುತ್ತಿದೆ. ದಕ್ಷಿಣ ಭಾರತದ ಧಾರ್ಮಿಕ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಹಾಗೂ ಜೈನ ಸಮುದಾಯದ ಧರ್ಮಾಧಿಕಾರಿಯನ್ನು ಗುರಿಯಾಗಿಸಿಕೊಂಡು ಮಾಡುತ್ತಿರುವ ದುರುದ್ದೇಶಪೂರಿತ ಅಪಪ್ರಚಾರ ಖಂಡನೀಯ ಎಂದರು.

ಧರ್ಮಸ್ಥಳ ಧರ್ಮಾಧಿಕಾರಿಗಳು ಮಹಿಳೆಯರ ಸಬಲೀಕರಣ, ಕೆರೆ- ಕಟ್ಟೆಗಳ ಅಭಿವೃದ್ಧಿ, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಶ್ರಮಿಸಿದ್ದಾರೆ. ಧರ್ಮಸ್ಥಳ ಪಾವಿತ್ರ್ಯಕ್ಕೆ ಧಕ್ಕೆ ತರುವ ಉದ್ದೇಶದಿಂದ ಸರ್ಕಾರ ಹುನ್ನಾರ ಮಾಡುತ್ತಿದೆ. ಅಪಪ್ರಚಾರ ಮಾಡುವ ವ್ಯಕ್ತಿಗಳಿಗೆ ಬೆಂಬಲವಾಗಿ ನಿಂತುಕೊಂಡಿದೆ. ಸರ್ಕಾರದ ಖಜಾನೆ ಖಾಲಿಯಾಗಿದ್ದು, ಧರ್ಮಸ್ಥಳದ ಆಸ್ತಿ, ದೇಣಿಗೆ ಹಣವನ್ನು ಕಬಳಿಕೆ ಮಾಡುವ ಹುನ್ನಾರ ಮಾಡುತ್ತಿದೆ. ಧರ್ಮಸ್ಥಳ ಕ್ಷೇತ್ರವನ್ನು ತನ್ನ ತಾಬಾ ತೆಗೆದುಕೊಳ್ಳುವ ಮಹದಾಸೆ ಹೊಂದಿದೆ ಎಂದು ಆರೋಪಿಸಿದರು.

ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುವ ಯೂಟ್ಯೂಬರ್ ಹಾಗೂ ಸಾಮಾಜಿಕ ಮಾಧ್ಯಮ ಪ್ರಭಾವಿಗಳಿಗೆ ಸರ್ಕಾರ, ಅಂತಾರಾಷ್ಟ್ರೀಯ ಮಟ್ಟ ಹಾಗೂ ಯಾವುದಾದರೂ ಸಮುದಾಯದಿಂದ ಹಣ ಹರಿದುಬಂದಿರುವ ಗುಮಾನಿ ಇದ್ದು, ಅವರ ಆದಾಯದ ಕುರಿತು ತನಿಖೆ ಮಾಡಬೇಕು ಎಂದರು.

ಧರ್ಮ ಜಾಗೃತಿ ಸ್ಥಳ ಸರ್ವನಾಶ ಮಾಡುವ ಷಡ್ಯಂತ್ರ ರೂಪಿಸಿದ್ದಾರೆ. ಇದನ್ನು ಖಂಡಿಸಿ ಹಾಗೂ ಅಪಪ್ರಚಾರ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ತನಿಖೆಗೆ ಆಗ್ರಹಿಸಿ ಬಿಜೆಪಿ ವಿವಿಧ ಮಂಡಲಗಳು ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಾತೀತವಾಗಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಪ್ರತಿಭಟನೆ ನಡೆಸುತ್ತಿದೆ. ಆ. 23ರಂದು ಬ್ಯಾಡಗಿ, ಹಾವೇರಿ, ಹಾನಗಲ್ಲ ಕ್ಷೇತ್ರದಲ್ಲಿ ಪ್ರತಿಭಟನೆ ನಡೆಯಲಿದ್ದು, ಆ. 25ರಂದು ಶಿಗ್ಗಾಂವಿ, ರಾಣಿಬೆನ್ನೂರು, ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಡಾ. ಸಂತೋಷ ಆಲದಕಟ್ಟಿ, ಹನುಮಂತಪ್ಪ ಅಮ್ಮಿನಕಟ್ಟಿ, ವೀರಣ್ಣ ಅಂಗಡಿ ಇದ್ದರು.

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ