ಬಿಜೆಪಿ ಸಮೀಕ್ಷೆಗಳನ್ನು ಮೀರಿ ಐತಿಹಾಸಿಕ ಗೆಲುವು ಸಾಧಿಸಲಿದೆ: ಪ್ರಹ್ಲಾದ ಜೋಶಿ

KannadaprabhaNewsNetwork |  
Published : Jun 03, 2024, 01:16 AM ISTUpdated : Jun 03, 2024, 08:07 AM IST
Prahlada Joshi

ಸಾರಾಂಶ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಚಿವ ನಾಗೇಂದ್ರ ಬಂಧನವಾದರೆ ಎಲ್ಲವೂ ಬಯಲಿಗೆ ಬರಲಿದೆ. ಈ ಭ್ರಷ್ಟಾಚಾರ ಹಗರಣದಲ್ಲಿ ಸಿಎಂ ಸೇರಿದಂತೆ ಮತ್ಯಾರು, ಭಾಗಿಯಾಗಿದ್ದಾರೆ? ಅವರ ಪಾತ್ರ ಏನಿದೆ? ಎಂಬುದು ಗೊತ್ತಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಹುಬ್ಬಳ್ಳಿ: ಚುನಾವಣಾ ಸಮೀಕ್ಷೆಗಳನ್ನು ಮೀರಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಖಚಿತ ಎಂದು ಹೇಳಿದರು.

ಬಿಜೆಪಿ ಯಾವತ್ತೂ ಇದನ್ನು ಹೇಳುತ್ತಲೇ ಬಂದಿದೆ. ಆದರೆ, ಕೆಲವರು ಸಂಶಯ ವ್ಯಕ್ತಪಡಿಸುತ್ತಿದ್ದರು. ಈಗ ಸಮೀಕ್ಷೆಗಳೇ ಎನ್‌ಡಿಎ ಐತಿಹಾಸಿಕ ಗೆಲುವನ್ನು ಖಚಿತಪಡಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ನೇತೃತ್ವದಲ್ಲಿ ಎನ್‌ಡಿಎ ಪ್ರಚಂಡ ಬಹುಮತದಿಂದ ಗೆಲ್ಲಲಿದೆ. ಕರ್ನಾಟಕದಲ್ಲೂ 25ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದರು.

ಜನರ ದಿಕ್ಕು ತಪ್ಪಿಸುವಲ್ಲಿ, ಸುಳ್ಳು ಹೇಳುವುದರಲ್ಲಿ ಕಾಂಗ್ರೆಸಿಗರು ನಿಸ್ಸೀಮರು. ವಾಸ್ತವವನ್ನೇ ಮರೆ ಮಾಚುತ್ತಾರೆ ಎಂದು ಆರೋಪಿಸಿದರು.

ಬಂಧನವಾದರೆ ಎಲ್ಲ ಬಯಲಿಗೆ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಚಿವ ನಾಗೇಂದ್ರ ಬಂಧನವಾದರೆ ಎಲ್ಲವೂ ಬಯಲಿಗೆ ಬರಲಿದೆ ಎಂದ ಅವರು, ಈ ಭ್ರಷ್ಟಾಚಾರ ಹಗರಣದಲ್ಲಿ ಸಿಎಂ ಸೇರಿದಂತೆ ಮತ್ಯಾರು, ಭಾಗಿಯಾಗಿದ್ದಾರೆ? ಅವರ ಪಾತ್ರ ಏನಿದೆ? ಎಂಬುದು ಗೊತ್ತಾಗಲಿದೆ. ಹಾಗಾಗಿ, ರಾಜ್ಯ ಸರ್ಕಾರ ಮೊದಲು ಸಚಿವ ನಾಗೇಂದ್ರ ಅವರನ್ನು ಬಂಧಿಸಲಿ ಎಂದು ಆಗ್ರಹಿಸಿದರು.

ಪೊಲೀಸರ ಭಯವೇ ಇಲ್ಲ: ರಾಜ್ಯದಲ್ಲಿ ಕ್ರಿಮಿನಲ್‌ಗಳಿಗೆ ಪೊಲೀಸರ ಮೇಲೆ ಭಯವೇ ಇಲ್ಲ. ಅಂಥ ಆತಂಕಕಾರಿ ಸ್ಥಿತಿ ನಿರ್ಮಾಣವಾಗಿದೆ ಎಂದರು. ಬೆಂಗೇರಿ ಶಾಲೆ ಮುಖ್ಯ ಶಿಕ್ಷಕಿಗೆ ನೇಹಾ, ಅಂಜಲಿ ಮಾದರಿಯಲ್ಲಿ ಹತ್ಯೆ ಮಾಡುವುದಾಗಿ ಬೆದರಿಕೆ ಪತ್ರ ಬಂದಿರುವ ಬಗ್ಗೆ ಹೀಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಭ್ರಷ್ಟಾಚಾರ ಸಿಕ್ಕಾಪಟ್ಟೆಯಾಗಿದೆ. ಪೊಲೀಸರಿಗೆ ಸ್ಥಳೀಯ ಶಾಸಕರಿಂದ ಅಷ್ಟೇ ಒತ್ತಡವೂ ಇದೆ. ಹಾಗಾಗಿ ಕ್ರಿಮಿನಲ್ಸ್‌ಗಳಿಗೆ ಪೊಲೀಸರ ಹೆದರಿಕೆಯೇ ಇಲ್ಲದಾಗಿದೆ ಎಂದು ಹೇಳಿದರು.

ನಿದ್ರೆಯಿಂದ ಎಚ್ಸೆತ್ತುಕೊಳ್ಳಲಿ: ಸಿಎಂ ಸಿದ್ದರಾಮಯ್ಯ ಇನ್ನಾದರೂ ನಿದ್ರೆಯಿಂದ ಎಚ್ಚೆತ್ತುಕೊಳ್ಳಲಿ. ಹುಬ್ಬಳ್ಳಿ ಸೇರಿದಂತೆ ಎಲ್ಲೇ ನಡೆದ ಹತ್ಯೆ, ಬೆದರಿಕೆ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ