ಕನ್ನಡಪ್ರಭ ವಾರ್ತೆ ಹೊಸಪೇಟೆ
ನಗರದ ಪಟೇಲ್ ನಗರದಲ್ಲಿರುವ ಬಿಜೆಪಿ ಕಚೇರಿಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪುನೀತ್ ರಾಜ್‌ಕುಮಾರ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಲಾಯಿತು. ಬಳಿಕ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಸರ್ಕಾರ ಕಾಂಗ್ರೆಸ್‌ನ ಎಟಿಎಂ ಆಗಿದ್ದು, ಹಣ ಸಂಗ್ರಹದ ಕೇಂದ್ರವಾಗಿ ಮಾರ್ಪಟ್ಟಿದೆ. ಕಾಂಗ್ರೆಸ್‌ನಿಂದ ಇಡೀ ರಾಜ್ಯವನ್ನು ಉಳಿಸಬೇಕು. ರಾಜ್ಯದ ಭ್ರಷ್ಟ ಸರ್ಕಾರ ತೊಲಗಲಿ, ತೊಲಗಲಿ ಎಂದು ಬಿಜೆಪಿ ಕಾರ್ಯಕರ್ತರು ಘೋಷಣೆ ಮೊಳಗಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಬೆಂಗಳೂರಿನಲ್ಲಿ ಅಂಬಿಕಾಪತಿ ಎಂಬ ಗುತ್ತಿಗೆದಾರರ ಮನೆಯಲ್ಲಿ ₹42 ಕೋಟಿ ಐಟಿ ದಾಳಿಯಲ್ಲಿ ಸಿಕ್ಕಿದೆ. ಕಾಂಗ್ರೆಸ್ ಸರ್ಕಾರಕ್ಕೆ ಕಮಿಷನ್ ರೂಪದಲ್ಲಿ ಬಂದ ಹಣ ಎಂಬುದು ಈಗ ದಟ್ಟವಾಗಿ ಸುದ್ದಿಯಾಗಿದೆ. ಪಂಚ ರಾಜ್ಯ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಫಂಡಿಂಗ್ ಮಾಡಲು ಈ ಹಣ ಬಳಕೆ ಮಾಡಲಾಗುತ್ತಿತ್ತು. ಕರ್ನಾಟಕವನ್ನು ಕಾಂಗ್ರೆಸ್ ತನ್ನ ಎಟಿಎಂ ಆಗಿ ಪರಿವರ್ತನೆ ಮಾಡಿಕೊಂಡಿದೆ. ಐಟಿ ದಾಳಿಯಲ್ಲಿ ಒಂದೊಂದು ಕಡೆ ₹40 ಕೋಟಿ, ₹42 ಕೋಟಿ ಸಿಗುತ್ತಿದೆ ಎಂದರೆ ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ರಾಜ್ಯ ಸರ್ಕಾರ ಕಮಿಷನ್ ದಂಧೆ, ವರ್ಗಾವಣೆ ದಂಧೆಯಲ್ಲಿ ಮುಳುಗಿದೆ ಎಂದು ಆರೋಪಿಸಿದರು.
ತಹಸೀಲ್ದಾರ್ ವಿಶ್ವಜಿತ್ ಮೇಹತಾರ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ರವಾನಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್. ರಾಘವೇಂದ್ರ, ಮಂಡಳ ಅಧ್ಯಕ್ಷ ಕಾಸಟ್ಟಿ ಉಮಾಪತಿ, ಹುಡಾ ಮಾಜಿ ಅಧ್ಯಕ್ಷ ಅಶೋಕ್ ಜೀರೆ, ಮುಖಂಡರಾದ ಸಾಲಿಸಿದ್ಧಯ್ಯಸ್ವಾಮಿ, ಶಂಕರ್ ಮೇಟಿ, ಜೀವರತ್ನಂ, ಕಿರಣ್ ಶಂಕ್ರಿ, ರಮೇಶ್ ಗುಪ್ತ, ಬಸವರಾಜ ಕರ್ಕಿಹಳ್ಳಿ, ಹೊನ್ನೂರಪ್ಪ ಮತ್ತಿತರರಿದ್ದರು.