ಕೊಪ್ಪಳ:
ನಗರದ ಅಶೋಕ ವೃತ್ತದಲ್ಲಿ ಸೋಮವಾರ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ವಿಪಕ್ಷ ಮುಖ್ಯಸಚೇತಕ ಎನ್. ರವಿಕುಮಾರ ಹೇಳಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಗೆ ಜನರು ತಕ್ಕಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ಕಳೆದ ಅವಧಿಯಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಕಾಲಹರಣ, ಭ್ರಷ್ಟಾಚಾರ ಮಾಡಿತು. ಆದರೆ, ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಜನಪ್ರಿಯತೇ ನೋಡಿ ಬಿಜೆಪಿಗೆ ತಡೆದುಕೊಳ್ಳಲು ಆಗುತ್ತಿಲ್ಲ ಎಂದ ಅವರು, ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಹಾಗೂ ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ವಿರುದ್ಧ ಎನ್. ರವಿಕುಮಾರ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದು ಖಂಡನೀಯ. ಅವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಇಂತಹ ಮಾತುಗಳಿಂದಲೇ ಬಿಜೆಪಿ ನಾಯಕರು ಹೋದಲೆಲ್ಲ ಘೇರಾವ್ ಹಾಕುವಂತೆ ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು.ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಕರ್ನಾಟಕದಿಂದ ಕೇಂದ್ರ ಸರ್ಕಾರಕ್ಕೆ ₹ 4 ಲಕ್ಷ ಕೋಟಿ ತೆರಿಗೆ ಕಟ್ಟಲಾಗುತ್ತಿದೆ. ಆದರೆ, ಅನುದಾನ ಬರುತ್ತಿಲ್ಲ. ಈ ಬಗ್ಗೆ ಬಿಜೆಪಿ ನಾಯಕರು ಧ್ವನಿ ಎತ್ತದೇ ಸಚಿವರು, ಅಧಿಕಾರಿಗಳ ವಿರುದ್ಧ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಗ್ಯಾರಂಟಿ ಕಾರ್ಯಕ್ರಮ ದೇಶಕ್ಕೆ ಮಾದರಿಯಾಗಿದ್ದು ಬಡವರನ್ನು ಆರ್ಥಿಕವಾಗಿ, ಸಾಮಾಜಿಕ ಮುಖ್ಯವಾಹಿನಿಗೆ ತರಲಾಗುತ್ತಿದೆ. ಇದನ್ನು ಬಿಜೆಪಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದರು.
ಇದೇ ವೇಳೆ ಉಪ ವಿಭಾಗಾಧಿಕಾರಿ ಮಹೇಶ ಮಾಲಗತ್ತಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಬಸವರಾಜ್ ಹಿಟ್ನಾಳ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಎಂ. ಇಟ್ಟಂಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಷಾ ಕಾಟನ್, ಫಕೀರಪ್ಪ ಎಮ್ಮಿ, ಹನುಮಂತಗೌಡ ಚಂಡೂರ, ಅಲ್ಪಸಂಖ್ಯಾತ ಜಿಲ್ಲಾಧ್ಯಕ್ಷ ಮೈನುದ್ದಿನ್ ಮುಲ್ಲಾ, ನಗರಸಭೆ ಸದಸ್ಯ ಅಕ್ಬರ್ ಪಾಷಾ, ಮುತ್ತುರಾಜ್ ಕುಷ್ಟಗಿ, ಜ್ಯೋತಿ ಗೊಂಡಬಾಳ, ಪದ್ಮಾವತಿ ಕಂಬಳಿ, ಗಂಗಮ್ಮ ಕಂಬಳಿ, ಗಾಳೆಪ್ಪ ಪೂಜಾರ, ಬಾಲಚಂದ್ರನ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.