ಕಾರ್ಕಳ: ಕಾರ್ಕಳದ ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿಗೆ ಸದಸ್ಯರ ನೇಮಕಾತಿ ಮಾಡುವುದು ಸರ್ಕಾರದ ಅಧಿಕಾರ ಮತ್ತು ಜವಾಬ್ದಾರಿಯಾಗಿದ್ದು, ಈ ವಿಚಾರವನ್ನು ಬಿಜೆಪಿ ಅನಗತ್ಯವಾಗಿ ರಾಜಕೀಯಗೊಳಿಸುತ್ತಿದೆ ಎಂದು ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿ ಸದಸ್ಯರಾದ ಅಣ್ಣಪ್ಪನಕ್ರೆ ಹಾಗೂ ಪ್ರತಿಮಾ ರಾಣೆ ಆರೋಪಿಸಿದ್ದಾರೆ.
ಸಮಿತಿಯ ನೇಮಕಾತಿಯಲ್ಲಿ ಯಾವುದೇ ರೀತಿಯ ರಾಜಕೀಯ ಉದ್ದೇಶ ಅಥವಾ ಪಕ್ಷಪಾತಕ್ಕೆ ಅವಕಾಶ ನೀಡಿಲ್ಲ. ಸಮಾಜದ ಹಿತಾಸಕ್ತಿ ಹಾಗೂ ಸಂಸ್ಥೆಯ ಸುಸೂತ್ರ ನಿರ್ವಹಣೆಯನ್ನು ಗಮನದಲ್ಲಿಟ್ಟುಕೊಂಡು ಸದಸ್ಯರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೆಲವರು ತಮ್ಮನ್ನು ಸಮಿತಿಗೆ ಸೇರಿಸಿಲ್ಲ ಎಂಬ ಕಾರಣಕ್ಕೆ ಪತ್ರಿಕಾಗೋಷ್ಠಿ ನಡೆಸಿ ಅನಗತ್ಯ ವಿವಾದ ಸೃಷ್ಟಿಸಲು ಮುಂದಾಗಿರುವುದು ವಿಷಾದನೀಯ. ಜನರ ನೈಜ ಸಮಸ್ಯೆಗಳಿಗಿಂತ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಬಿಜೆಪಿ ಈ ವಿಷಯವನ್ನು ಬಳಸಿಕೊಳ್ಳುತ್ತಿದೆ ಎಂದು ಅವರು ಟೀಕಿಸಿದ್ದಾರೆ.ಅಂಬೇಡ್ಕರ್ ಭವನವು ಯಾವುದೇ ವ್ಯಕ್ತಿ ಅಥವಾ ಸಂಘಟನೆಯ ಸ್ವತ್ತಲ್ಲ; ಅದು ಸಮಾಜದ ಸಮಗ್ರ ಅಭಿವೃದ್ಧಿಗಾಗಿ ನಿರ್ಮಾಣಗೊಂಡ ಸಾರ್ವಜನಿಕ ಸಂಸ್ಥೆಯಾಗಿದೆ. ಅದರ ಅಭಿವೃದ್ಧಿ ಹಾಗೂ ಉತ್ತಮ ನಿರ್ವಹಣೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.ಅನಗತ್ಯ ರಾಜಕೀಯ ಆರೋಪಗಳ ಮೂಲಕ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನಗಳನ್ನು ಜನತೆ ಗಮನಿಸುತ್ತಿದ್ದು, ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿ ಅಂಬೇಡ್ಕರ್ ಭವನದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಅಣ್ಣಪ್ಪನಕ್ರೆ ಹಾಗೂ ಪ್ರತಿಮಾ ರಾಣೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.