ದೆಹಲಿಯಲ್ಲಿ ಬಿಜೆಪಿ ಗೆಲುವು- ಕೊಪ್ಪಳದಲ್ಲಿ ಬಿಜೆಪಿ ವಿಜಯೋತ್ಸವ

KannadaprabhaNewsNetwork |  
Published : Feb 09, 2025, 01:16 AM IST
ಕೊಪ್ಪಳ ನಗರದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. | Kannada Prabha

ಸಾರಾಂಶ

ದೆಹಲಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದಿರುವ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು ನಗರದ ಬಸವೇಶ್ವರ ವೃತ್ತದಲ್ಲಿ ಸಿಹಿ ಹಂಚಿ ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಣೆ ಮಾಡಿದರು.

ಕೊಪ್ಪಳ: ದೆಹಲಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದಿರುವ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು ನಗರದ ಬಸವೇಶ್ವರ ವೃತ್ತದಲ್ಲಿ ಸಿಹಿ ಹಂಚಿ ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಣೆ ಮಾಡಿದರು.

ಬಿಜೆಪಿ ಕೊಪ್ಪಳ ಜಿಲ್ಲಾಧ್ಯಕ್ಷ ಬಸವರಾಜ ದಢೇಸಗೂರು ಮಾತನಾಡಿ, 27 ವರ್ಷಗಳ ನಂತರ ನಮ್ಮ ಪಕ್ಷ ದೆಹಲಿಯಲ್ಲಿ ಅಧಿಕಾರ ಹಿಡಿಯುತ್ತಿರುವುದು ಸಂತಸದ ಸಂಗತಿಯಾಗಿದೆ. ದೆಹಲಿಯಲ್ಲಿ ಕಾಂಗ್ರೆಸ್‌ಗೆ ಒಂದೂ ಸ್ಥಾನ ಸಿಕ್ಕಿಲ್ಲ. ಕಾಂಗ್ರೆಸ್‌ಮುಕ್ತ ದೆಹಲಿಯನ್ನು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಮುಕ್ತ ಭಾರತವನ್ನಾಗಿ ಮಾಡುತ್ತೇವೆ ಎಂದರು.

ಕಾಂಗ್ರೆಸ್‌ನವರು ಕೇವಲ ಸುಳ್ಳುಗಳನ್ನು ಹೇಳುವ ಮೂಲಕ ಅಧಿಕಾರ ಪಡೆಯುತ್ತಾರೆ. ಅದಕ್ಕೆ ಈ ದೆಹಲಿ ಚುನಾವಣೆಯಲ್ಲಿ ಮತದಾರರು ತಕ್ಕಪಾಠ ಕಲಿಸಿದ್ದಾರೆ ಎಂದರು.

ಡಾ. ಬಸವರಾಜ ಕ್ಯಾವಟರ ಮಾತನಾಡಿ, ಬಿಜೆಪಿಗೆ ಸುಮಾರು 27 ವರ್ಷಗಳ ನಂತರ ಆಡಳಿತ ಮಾಡುವ ಅವಕಾಶವನ್ನು ಮತದಾರರು ಕೊಟ್ಟಿದ್ದಾರೆ ಎಂದರು.

ದೆಹಲಿಯಲ್ಲಿ ಹತ್ತು ವರ್ಷಗಳ ಕಾಲ ಭ್ರಷ್ಟ ಆಡಳಿತ ಮಾಡಿದ ಎಎಪಿಯನ್ನು ಹಾಗೂ ಜನರಿಗೆ ಸುಳ್ಳು ಹೇಳುವ ಮೂಲಕ ಅಧಿಕಾರ ಮಾಡುತ್ತಿರುವಂತಹ ಕಾಂಗ್ರೆಸ್‌ಗೆ ದೆಹಲಿಯ ಮತದಾರರ ಉತ್ತಮವಾದ ತೀರ್ಪು ಕೊಡುವ ಮೂಲಕ ತಕ್ಕಪಾಠವನ್ನು ಕಲಿಸಿದ್ದಾರೆ ಎಂದರು.

ಅರವಿಂದ ಕೇಜ್ರಿವಾಲ ಭ್ರಷ್ಟಾಚಾರ ನಡೆಸಿ ಜೈಲಿಗೆ ಹೋದರು. ಆದರೂ ರಾಜಿನಾಮೆ ಕೊಡಲಿಲ್ಲ. ಅದೇ ರೀತಿ ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೆಸ್‌ ಪಂಗನಾಮ ಹಾಕುತ್ತಿದೆ. ಇದನ್ನು ಮನಗಂಡ ಮತದಾರರು ಕಾಂಗ್ರೆಸ್‌ಗೆ ಯಾವುದೇ ಸ್ಥಾನ ನೀಡಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲೂ ಇದೇ ಸ್ಥಿತಿ ಕಾಂಗ್ರೆಸ್‌ಗೆ ಬರುತ್ತದೆ ಎಂದರು.

ನಗರಾಭಿವೃದ್ಧಿ ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ ನವಲಳ್ಳಿ, ಆರ್.ಬಿ. ಪಾನಗಂಟಿ, ವಿ.ಎಂ. ಬೂಸನೂರಮಠ, ಮಹಾಲಕ್ಷ್ಮೀ ಕಂದಾರಿ ಮಾತನಾಡಿದರು.

ಪಕ್ಷದ ಮುಖಂಡರಾದ ಗಣೇಶ ಹೊರತಟ್ನಾಳ, ಚಂದ್ರಶೇಖರ ಹಲಗೇರಿ, ಪ್ರಾಣೇಶ ಮಾದಿನೂರು, ಮಲ್ಲಣ್ಣ ಡಿಕೆ, ದೇವರಾಜ ಹಾಲಸಮುದ್ರ, ಸೋಮನಗೌಡ, ಡಾ. ಮಹೇಶ, ಸುನಿಲ್ ಹೆಸರೂರು, ನೀಲಕಂಠಯ್ಯ ಹಿರೇಮಠ, ಪ್ರದೀಪ ಪಲ್ಲೇದ್, ಸೋಮಣ್ಣ ಹಳ್ಳಿ, ಚನ್ನಬಸು ಗಾಳಿ, ಪಂಪಯ್ಯ ಹಿರೇಮಠ, ವಾಣಿಶ್ರೀ ಹಿರೇಮಠ, ಶೋಭಾ ನಗರಿ, ರಾಧಾ ಕನಕ ಮೂರ್ತಿ ಭಾಗಿಯಾಗಿದ್ದರು.

ಕುಷ್ಟಗಿಯಲ್ಲಿ ವಿಜಯೋತ್ಸವ:

ದೆಹಲಿಯ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸಿರುವ ಹಿನ್ನೆಲೆಯಲ್ಲಿ ಕುಷ್ಟಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಉಮೇಶ ಯಾದವ ಮಾತನಾಡಿ, ದೆಹಲಿಯ ಮತದಾರರು ಭ್ರಷ್ಟಾಚಾರಕ್ಕೆ ಬೇಸತ್ತು ಹೋಗಿ ಬಿಜೆಪಿ ಗೆಲ್ಲಿಸಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಜನರು ಇಟ್ಟಿರುವ ನಂಬಿಕೆಯಾಗಿದೆ. ಎಎಪಿಯ ಭ್ರಷ್ಟಾಚಾರ ಹಾಗೂ ಜನರ ಹಿತ ಕಾಯದ ಕಾಂಗ್ರೆಸ್‌ಗೆ ಜನರು ತಕ್ಕ ಉತ್ತರ ನೀಡಿದ್ದಾರೆ ಎಂದರು.ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಬಾದಾಮಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ವಡ್ಡಿಗೇರಿ, ಪಕ್ಷದ ಮುಖಂಡರಾದ ರವಿಕುಮಾರ ಹಿರೇಮಠ, ಪ್ರಭುಶಂಕರಗೌಡ ಪಾಟೀಲ, ಶಶಿಧರ ಕವಲಿ, ನಬಿಸಾಬ ಕುಷ್ಟಗಿ, ಗಂಗಾಧರಯ್ಯಸ್ವಾಮಿ, ಜೆಜೆ ಆಚಾರ್ಯ, ಹನುಮಂತ ಹೂಗಾರ, ದೊಡ್ಡಬಸವ ಸುಕಂದ, ದ್ಯಾಮಣ್ಣ ತಳವಾರ, ಮಲ್ಲಪ್ಪ, ಗ್ಯಾನಪ್ಪ, ಹುಲ್ಲಪ ಟಕ್ಕಳಕಿ, ಈರಣ್ಣ ಪಾಲ್ಗೊಂಡಿದ್ದರು.

ಗಂಗಾವತಿಯಲ್ಲಿ ವಿಜಯೋತ್ಸವ:

ದೆಹಲಿಯಲ್ಲಿ ಬಿಜೆಪಿ ಬಹುಮತ ಪಡೆದು ಅಧಿಕಾರ ಚುಕ್ಕಾಣಿ ಹಿಡಿಯುತ್ತಿದ್ದ ಹಿನ್ನೆಲೆಯಲ್ಲಿ ಇಲ್ಲಿಯ ಬಿಜೆಪಿ ಕಾರ್ಯಕರ್ತರು ಮಹಾತ್ಮ ಗಾಂಧಿ ವೃತ್ತದಲ್ಲಿ ಸಿಡಿಮದ್ದು ಸಿಡಿಸಿ ವಿಜಯೋತ್ಸವ ಆಚರಿಸಿದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರು ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಆನಂತರ ಮಾತನಾಡಿದ ಅವರು, ದೆಹಲಿಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕಾರ ಚುಕ್ಕಾಣಿ ಹಿಡಿಯಲಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರ ಶ್ರಮ ಕಾರಣ ಎಂದು ಶ್ಲಾಘಿಸಿದರು.

ಕಾಂಗ್ರೆಸ್ ಒಂದೂ ಸ್ಥಾನ ಪಡೆಯದೆ ಹೀನಾಯ ಸೋಲು ಕಂಡಿದೆ. ಕೇಜ್ರಿವಾಲ್ ಪಕ್ಷ ಅಸ್ತಿತ್ವ ಕಳೆದುಕೊಂಡಿದೆ ಎಂದರು.ನಗರಸಭೆ ಅಧ್ಯಕ್ಷ ಮೌಲಾಸಾಬ್, ಬಿಜೆಪಿ ಅಧ್ಯಕ್ಷ ಕಾಶೀನಾಥ ಚಿತ್ರಗಾರ, ಮುಖಂಡರಾದ ವೀರಭದ್ರಪ್ಪನಾಯಕ, ನಗರಸಭೆ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪನಾಯಕ, ನಗರಸಭಾ ಸದಸ್ಯರಾದ ವಾಸುದೇವ ನವಲಿ, ರಾಚಪ್ಪ ಸಿದ್ದಾಪುರ, ಪರಶುರಾಮ ಮಡ್ಡೇರ್, ಹನುಮಂತಪ್ಪ ಡಗ್ಗಿ, ಮಹಾಲಿಂಗಪ್ಪ ಬನ್ನಿಕೊಪ್ಪ, ಅಮರೇಗೌಡ, ರಾಯಬಾಗಿ, ಚಂದ್ರು ಅಕ್ಕಿ, ಪ್ರಕಾಶ ಅಕ್ಕಿ, ಶಕುಂತಲಾ ಕಲ್ಲೂರು, ಸೌಭಾಗ್ಯ ಭಾಗವಹಿಸಿದ್ದರು.

PREV

Recommended Stories

ಭಕ್ತರ ಸಹಕಾರದಿಂದ ದೇವಸ್ಥಾನದಲ್ಲಿ ಹೊಸತನ
ಪತ್ನಿ ಮೇಲೆ ಹಲ್ಲೆಗೈದು ಅರ್ಧ ತಲೆ ಬೋಳಿಸಿದ ಪತಿ