ಸಂಡೂರು: ಸಿದ್ದೇಶ್ವರ ಸ್ವಾಮೀಜಿ ಯೋಗಸ್ಥರಾಗಿದ್ದರು. ಅವರ ಜೀವನ ಸಾಧನೆ, ಆದರ್ಶಗಳು ನಮಗೆ ದಾರಿದೀಪ ಎಂದು ಬೆಂಗಳೂರಿನ ಆಧ್ಯಾತ್ಮ ಚಿಂತಕ ಜಂಬುನಾಥ ಮಳಿಮಠ ಅಭಿಪ್ರಾಯಪಟ್ಟರು.
ಪಟ್ಟಣದ ಗುರುಭವನದಲ್ಲಿ ಬುಧವಾರ ನಡೆದ ಸಾಹಿತಿ ಡಾ.ರಾಗಂ ರಚಿಸಿರುವ ಯೋಗಸ್ಥ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.ಗುರು ಎಂದರೆ ಬೆಳಕು. ಗುರು ನಮ್ಮ ಜೀವನದಲ್ಲಿ ಬೆಳಕು ಚೆಲ್ಲುವವರು. ಪಾಲಕರು ತಮ್ಮ ಮಕ್ಕಳಿಗೆ ಸಂಸ್ಕಾರ ನೀಡುವುದು ಅಗತ್ಯವಾಗಿದೆ. ಪಾಶ್ಚಾತ್ಯರು ನಮ್ಮ ಸಂಸ್ಕೃತಿ ಹಾಗೂ ಆಧ್ಯಾತ್ಮವನ್ನು ಒಪ್ಪುತ್ತಿದ್ದಾರೆ. ಆದರೆ, ನಮ್ಮ ಯುವ ಜನತೆ ಅದನ್ನು ಒಪ್ಪುತ್ತಿಲ್ಲ. ಯುವ ಪೀಳಿಗೆಗೆ ತಮ್ಮ ಮೇಲೆ ತಮಗೆ ನಂಬಿಕೆ ಇಲ್ಲ. 2047ರ ಹೊತ್ತಿಗೆ ಭಾರತ ದೇಶ ವಿಶ್ವಗುರುವಾಗಲಿದೆ. ಜೀವನದಲ್ಲಿ ಶ್ರದ್ಧೆ, ಆತ್ಮಸಾಕ್ಷಿ ಹಾಗೂ ಕೃತಜ್ಞತಾ ಮನೋಭಾವವಿದ್ದರೆ, ಪ್ರಗತಿ ಸಾಧ್ಯ ಎಂದರು.
ಗ್ರಂಥ ಕುರಿತು ಮಾತನಾಡಿದ ಎಸ್.ಇ.ಎಸ್. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಜಗದೀಶ ಬಸಾಪುರ, ಯೋಗಸ್ಥ ಎಂದರೆ ನಿರ್ಮೋಹಿಯಾಗಿ ಕಾಯಕದಲ್ಲಿ ನಿರತರಾದವರು ಎಂದರ್ಥ. ವಿಜಯಪುರದ ಸಿದ್ದೇಶ್ವರ ಸ್ವಾಮೀಜಿಯವರು ಯೋಗಸ್ಥರು ಹಾಗೂ ಜ್ಞಾನ ಗುಮ್ಮಟವೂ ಆಗಿದ್ದರು. ಯೋಗಸ್ಥ ಗ್ರಂಥದಲ್ಲಿ ಸಿದ್ದೇಶ್ವರ ಸ್ವಾಮೀಜಿಯವರ ಶಿಕ್ಷಣ, ನಡೆದುಬಂದ ಹಾದಿ, ಸಾಧನೆ, ದಾಸೋಹ ಮುಂತಾದ ಅಂಶಗಳ ವಿವರಣೆಯನ್ನು ಕಾಣಬಹುದಾಗಿದೆ. ಸಿದ್ದೇಶ್ವರ ಸ್ವಾಮೀಜಿ ಪಾಶ್ಚಾತ್ಯ ಹಾಗೂ ಪೌರಾತ್ಯ ತತ್ವಾದರ್ಶಗಳ ಸಂಗಮವಾಗಿದ್ದಾರೆ. ಸಂತರಾಗಿದ್ದ ಸಿದ್ದೇಶ್ವರ ಸ್ವಾಮೀಜಿಯವರ ಜೀವನ ಚರಿತ್ರೆಯನ್ನು ಪಠ್ಯಪುಸ್ತಕದಲ್ಲಿ ಅಳವಡಿಸುವ ಕಾರ್ಯ ನಡೆಯಬೇಕಿದೆ ಎಂದರು.ಸಂಸದ ಈ.ತುಕಾರಾಂ ತಮ್ಮ ತಂದೆ ಈರೇಗಾರ್ ಓಬಣ್ಣ ಹಾಗೂ ತಾಯಿ ದಿ.ಓಬಮ್ಮ ಅವರ ಹೆಸರಿನಲ್ಲಿ ಯೋಗಸ್ಥ ಗ್ರಂಥದ ದಾಸೋಹ ಸೇವೆ ಕೈಗೊಂಡು, ಸಿದ್ದೇಶ್ವರ ಸ್ವಾಮೀಜಿಯವರ ಜೀವನ ಚರಿತ್ರೆಯನ್ನು ಪಠ್ಯಪುಸ್ತಕದಲ್ಲಿ ಅಳವಡಿಸಲು ಕೋರಿ ಮುಖ್ಯಮಂತ್ರಿಗೆ ನಾನು, ನನ್ನ ಪತ್ನಿ ಹಾಗೂ ಶಾಸಕಿ ಈ.ಅನ್ನಪೂರ್ಣ ಸಹ ಪತ್ರ ಬರೆದು ಮನವಿ ಮಾಡಿಕೊಳ್ಳುತ್ತೇವೆ. ಕಾಯಕ, ನ್ಯಾಯ ಹಾಗೂ ಧರ್ಮ ಪಾಲನೆಯಿಂದ ಜೀವನದಲ್ಲಿ ಮುಂದೆ ಬರಲು ಸಾಧ್ಯವೆಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ.ವಿ.ಟಿ. ಕಾಳೆ, ಗ್ರಂಥದ ಲೇಖಕರಾದ ಡಾ.ರಾಗಂ ಹಾಗೂ ಸಾನ್ನಿಧ್ಯ ವಹಿಸಿದ್ದ ಬಳ್ಳಾರಿಯ ಕಲ್ಯಾಣ ಸ್ವಾಮೀಜಿಯವರು ಮಾತನಾಡಿದರು. ಶಾಸಕಿ ಈ.ಅನ್ನಪೂರ್ಣ ತುಕಾರಾಂ ಸ್ವಾಗತಿಸಿದರು. ಡಾ. ತಿಪ್ಪೇರುದ್ರ ಸಂಡೂರು ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ನಿಷ್ಠಿ ರುದ್ರಪ್ಪ, ತಾಲೂಕು ಘಟಕದ ಅಧ್ಯಕ್ಷ ಬಿ.ನಾಗನಗೌಡ, ಪುರಸಭೆ ಅಧ್ಯಕ್ಷ ಎಸ್.ಸಿರಾಜ್ ಹುಸೇನ್, ನಿವೃತ್ತ ಉಪನ್ಯಾಸಕ ಬಸವರಾಜ ಮಸೂತಿ, ಶೈಲೇಶ್ವರ ವಿದ್ಯಾಕೇಂದ್ರದ ಕಾರ್ಯದರ್ಶಿ ಚಿದಂಬರ ಎಸ್. ನಾನಾವಟೆ, ಆಡಳಿತಾಧಿಕಾರಿ ಕುಮಾರ್ ಎಸ್. ನಾನಾವಟೆ, ಯೋಗಸ್ಥ ಕೃತಿಯ ತೆಲಗು ಅವತರಣಿಕೆಯ ಭಾಷಾಂತರಕಾರರಾದ ಪೃಥ್ವಿರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್. ಅಕ್ಕಿ, ಮುಖಂಡರಾದ ಕೆ. ರಾಮಲಿಂಗಪ್ಪ, ಮರೇಗೌಡ ಮುಂತಾದವರು ಉಪಸ್ಥಿತರಿದ್ದರು.
ಸಂಡೂರಿನ ಗುರುಭವನದಲ್ಲಿ ಬುಧವಾರ ನಡೆದ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಚಿಂತಕರಾದ ಜಂಬುನಾಥ ಮಳಿಮಠ ಗ್ರಂಥಸ್ಥ ಗ್ರಂಥವನ್ನು ಬಿಡುಗಡೆ ಮಾಡಿದರು.