ಯಲ್ಲಾಪುರ: ರಾಜಕೀಯ ಜೀವನಕ್ಕೂ ಮುಂಚಿತವಾಗಿ ಲಾರಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದೆ. ಚಾಲಕರ ಕಷ್ಟ ನಷ್ಟಗಳನ್ನು ಹತ್ತಿರದಿಂದ ಕಂಡಿದ್ದೇನೆ. ಅದಕ್ಕಾಗಿ ರಾಜಕೀಯ ಜೀವನಕ್ಕೆ ಬಂದ ನಂತರ ಚಾಲಕರಿಗೆ ಕೈಲಾದ ಸಹಾಯ ಮಾಡುತ್ತಾ ಸರ್ಕಾರದ ಸೌಲಭ್ಯಗಳು ಸಿಗುವಂತೆ ಪ್ರಯತ್ನಿಸಿದ್ದೇನೆ ಎಂದು ಶಾಸಕ ಶಿವರಾಮ ಹೆಬ್ಬಾರ್ ತಿಳಿಸಿದರು.
ನಿಮ್ಮದು ಆಟೋ ರಿಕ್ಷಾ ಚಾಲಕ ವೃತ್ತಿ. ತಾಲೂಕಿನ ರಿಕ್ಷಾ ಚಾಲಕರಿಗೆ ವಿಶೇಷವಾದ ಗೌರವವಿದ್ದು, ಯಾರೊಡನೆಯೂ ಅಸಭ್ಯವಾಗಿ ವರ್ತಿಸದೇ, ಹೆಚ್ಚಿನ ಬೆಲೆ ಕೇಳದೇ ಮಾನವೀಯತೆಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಾಗುತ್ತಿರುವುದು ಶ್ಲಾಘನೀಯ ಎಂದರು.
ಪಪಂ ಅಧ್ಯಕ್ಷೆ ನರ್ಮದಾ ನಾಯ್ಕ ಮಾತನಾಡಿ, ಆಟೋ ರಿಕ್ಷಾ ಎಂದರೆ ಬಡವರ ಪಾಲಿನ ಐರಾವತದಂತೆ. ಸುರಕ್ಷಿತವಾಗಿ ಮನೆ ತಲುಪಲು ಒಂದು ಸ್ಥಳದಿಂದ ಮತ್ತೊಂದೆಡೆ ಪಯಣಿಸಲು ಕುಟುಂಬದ ಸದಸ್ಯರಂತೆ ಆತ್ಮೀಯ ಭಾವದಲ್ಲಿ ಸಹಕರಿಸುವ ನಿಮ್ಮ ಸೇವೆ ಶ್ಲಾಘನೀಯ ಎಂದರು.ವಿಕಾಸ ಬ್ಯಾಂಕ್ ಅಧ್ಯಕ್ಷ ಮುರಳೀ ಹೆಗಡೆ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಭಗತ್ ಆಟೋ ಮಾಲೀಕ- ಚಾಲಕ ಸಂಘದ ನೂತನ ಅಧ್ಯಕ್ಷ ವಿಜಯ್ ಮಿರಾಶಿ, ಪಪಂ ಅಧ್ಯಕ್ಷೆ ನರ್ಮದಾ ನಾಯ್ಕ, ಉಪಾಧ್ಯಕ್ಷ ಅಮಿತ್ ಅಂಗಡಿ, ಮಾಜಿ ಅಧ್ಯಕ್ಷರಾದ ಎಂಡಿ ಮುಲ್ಲಾ, ಮಂಜುನಾಥ ರಾಯ್ಕರ್, ಕಿರವತ್ತಿಯ ಪ್ರಮುಖ ರಾಘವೇಂದ್ರ ಗೋಂದಿ, ಪಪಂ ಸದಸ್ಯ ಮತ್ತು ಆಟೋ ಚಾಲಕ ರಾಜು ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಕೇಬಲ್ ನಾಗೇಶ್ ಸ್ವಾಗತಿಸಿ, ನಿರ್ವಹಿಸಿ ವಂದಿಸಿದರು.
ಕುಮಟಾ: ಪಟ್ಟಣದ ನೆಲ್ಲಿಕೇರಿಯ ಹನುಮಂತ ಬೆಣ್ಣೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಜೂರಾಗಿದ್ದ ೧೨ ನೂತನ ಕಂಪ್ಯೂಟರ್‌ಗಳನ್ನು ಕಂಪ್ಯೂಟರ್ ವಿಭಾಗದ ಸುಸಜ್ಜಿತ ಕಲಿಕಾ ಕೊಠಡಿಯೊಂದಿಗೆ ಶಾಸಕ ದಿನಕರ ಶೆಟ್ಟಿ ಶನಿವಾರ ಉದ್ಘಾಟಿಸಿದರು.ಬಳಿಕ ಮಾತನಾಡಿದ ಶಾಸಕ ದಿನರ ಶೆಟ್ಟಿ ಅವರು, ಜಿಲ್ಲೆಯಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಪಿಯು ಕಾಲೇಜು ನಮ್ಮ ನೆಲ್ಲಿಕೇರಿ ಹನುಮಂತ ಬೆಣ್ಣೆ ಪಿಯು ಕಾಲೇಜು ಎಂಬುದನ್ನು ಗಮನಿಸಬೇಕು. ಇಲ್ಲಿ ೧೮೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ಈ ಕಾಲೇಜಿಗೆ ನಿವೇಶನ, ಕಟ್ಟಡ ಸಹಿತ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದೇನೆ.