ಕೇಂದ್ರದ ಜಾತಿಗಣತಿ ನಿರ್ಧಾರಕ್ಕೆ ಬಿಜೆಪಿ ಸ್ವಾಗತ: ಕೆ.ಪ್ರಸನ್ನ ಕುಮಾರ್

KannadaprabhaNewsNetwork | Published : May 3, 2025 12:15 AM

ಸಾರಾಂಶ

ಜಾತಿಗಣತಿಯನ್ನು ಮಾಡಲು ನಿರ್ಧರಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಾಮಾಣಿಕ, ಸಾಮಾಜಿಕ ಬದ್ಧತೆಯ ನೇತೃತ್ವದ ಕೇಂದ್ರ ಸರ್ಕಾರ ಈ ಐತಿಹಾಸಿಕ ನಿರ್ಧಾರ ಕೈಗೊಂಡಿರುವುದು ಎಲ್ಲಾ ವರ್ಗದ ಜನತೆಯ ಮೆಚ್ಚುಗೆಗೆ ಕಾರಣವಾಗಿದೆ

1951ರಿಂದ ಅವಕಾಶ ಸಿಕ್ಕರೂ ಜಾತಿ ಲೆಕ್ಕಹಾಕದ ಕಾಂಗ್ರೆಸ್‌ । ಮೋದಿ ಕ್ರಮ ಸಹಿಸದ ಕೈ

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೇಂದ್ರ ಸರ್ಕಾರ 2026ರಲ್ಲಿ ಅಧಿಕೃತವಾಗಿ ಜನಗಣತಿಯ ಜೊತೆಗೆ ಜಾತಿಗಣತಿಯನ್ನು ಮಾಡಲು ನಿರ್ಧರಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಾಮಾಣಿಕ, ಸಾಮಾಜಿಕ ಬದ್ಧತೆಯ ನೇತೃತ್ವದ ಕೇಂದ್ರ ಸರ್ಕಾರ ಈ ಐತಿಹಾಸಿಕ ನಿರ್ಧಾರ ಕೈಗೊಂಡಿರುವುದು ಎಲ್ಲಾ ವರ್ಗದ ಜನತೆಯ ಮೆಚ್ಚುಗೆಗೆ ಕಾರಣವಾಗಿದೆ ಎಂದು ಬಿಜೆಪಿ ಮುಖಂಡ ಕೆ.ಪ್ರಸನ್ನ ಕುಮಾರ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1931ರ ನಂತರ ಜಾತಿಗಣತಿ ನಡೆದಿರಲಿಲ್ಲ. ಜನಗಣತಿ ಮಾತ್ರ ನಡೆದಿತ್ತು. ಇದೀಗ ಸಾಮಾಜಿಕ ಅವಶ್ಯಕತೆಯ ನೈಜ ದತ್ತಾಂಶಗಳನ್ನು ಸಂಗ್ರಹಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಸತತವಾಗಿ ಐವತ್ತು ವರ್ಷಕ್ಕೂ ಮಿಕ್ಕಿ ಕೇಂದ್ರದಲ್ಲಿ ಆಡಳಿತ ಮಾಡಿದ ಕಾಂಗ್ರೆಸ್ ಪಕ್ಷ ಈ ವಿಷಯದಲ್ಲಿ ನ್ಯಾಯ ಒದಗಿಸಲು ಯಾವ ಪ್ರಯತ್ನಗಳನ್ನು ಮಾಡಿರಲಿಲ್ಲ ಎಂದರು.

1951ರಿಂದ ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿ ನಡೆದಿದೆ. 1951, 1961, 1971, 1981, 1991 ಮತ್ತು 2011ರಲ್ಲಿ ಕೇಂದ್ರದಲ್ಲಿ ಸರ್ಕಾರ ಇದ್ದದ್ದು ಕಾಂಗ್ರೆಸ್ ನೇತೃತ್ವದಲ್ಲಿ. ಆರು ಬಾರಿ ಅವಕಾಶ ಸಿಕ್ಕಾಗ ಏನು ಮಾಡದ ಕಾಂಗ್ರೆಸ್ ಪಕ್ಷ ಬಿಜೆಪಿ ಜಾತಿಗಣತಿಗೆ ಮುಂದಾಗಿರುವುದನ್ನು ಸಹಿಸುತ್ತಿಲ್ಲ ಎಂದು ತಿಳಿಸಿದರು.

ಒಂದು ಕುಟುಂಬದ ನೇತೃತ್ವಕ್ಕೆ ಅಧಿಕಾರ ಬಿಟ್ಟುಕೊಟ್ಟಿದ್ದು, ಕಾಂಗ್ರೆಸ್ ದೇಶ ಮೊದಲ ಬಾರಿಗೆ ಒಬಿಸಿ ಹಿನ್ನೆಲೆಯ ಪ್ರಧಾನಿಯ ಆಳ್ವಿಕೆ ಕಂಡಿದ್ದು ಬಿಜೆಪಿಯಿಂದ. ನರೇಂದ್ರ ಮೋದಿಯಂತಹ ಎಲ್ಲ ಜನವರ್ಗದವರ ಮೆಚ್ಚುಗೆಗೆ ಪಾತ್ರರಾಗಿರುವ ನೇತೃತ್ವ ಮೂರನೇ ಬಾರಿಗೆ ದೇಶವನ್ನು ಮುನ್ನಡೆಸುತ್ತಿರುವುದನ್ನು ಕಾಂಗ್ರೆಸ್ ಪಕ್ಷಕ್ಕೆ ಸಹಿಸಲಾಗುತ್ತಿಲ್ಲ. ಹಾಗಾಗಿಯೇ ಜಾತಿಗಣತಿ ನೆಪದಲ್ಲಿ ಹಿಂದುಳಿದ ವರ್ಗಗಳನ್ನು ಎತ್ತಿಕಟ್ಟಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ನಾಯಕರು ವಿಫಲ ಪ್ರಯತ್ನ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಜಾತಿಗಣತಿ ನಡೆಸುವ ನಿರ್ಧಾರ ಕಾಂಗ್ರೆಸ್ಸಿನ ಬುಡ ಅಲ್ಲಾಡಿಸಿದೆ ಎಂದು ಕುಟುಕಿದರು.

ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೋಳೇನಹಳ್ಳಿ ಮಾತನಾಡಿ, ಕರ್ನಾಟಕದಲ್ಲಿ ಸಿದ್ದರಾಮಯ್ಯ ನವರ ಸರ್ಕಾರ ಜಾತಿಗಣತಿ ಹೆಸರಿನಲ್ಲಿ ಹತ್ತು ವರ್ಷ ಕಾಲಹರಣ ಮಾಡಿದ್ದು ಮಾತ್ರವಲ್ಲ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವರದಿ ಗೊಂದಲದ ಗುಡಾಗಿದೆ. ಪ್ರವರ್ಗ 1 ರಲ್ಲಿದ್ದ ಅತಿ ಹಿಂದುಳಿದ ಜಾತಿಗಳಿದ್ದ ಆರ್ಥಿಕ ಮಾನದಂಡವನ್ನು ಕಿತ್ತುಹಾಕಿ ಅನ್ಯಾಯ ಮಾಡಲಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿಗಣತಿಯನ್ನು ತಮ್ಮ ಕುರ್ಚಿ ಉಳಿಸಿಕೊಳ್ಳಲು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ಅತಿಯಾದ ರಾಜಕೀಯದಿಂದಾಗಿ ಗೊಂದಲದ ಗೂಡಾಗಿರುವ ಕರ್ನಾಟಕದ ಜಾತಿ ಗಣತಿ ವರದಿಗೆ ಪರ್ಯಾಯವಾಗಿ ಕೇಂದ್ರ ಸರ್ಕಾರದ ಜಾತಿ ಗಣತಿ ವರದಿ ಬರಲಿದೆ ಎಂದು ತಿಳಿಸಿದರು.

ಸುರೇಶ ಗಂಡಗಾಳೆ, ಆರ್.ಶಿವಾನಂದ, ಮಹೇಂದ್ರ ಹೆಬ್ಬಾಳು ಇದ್ದರು.

Share this article