ಕಾಂಗ್ರೆಸ್ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ । ರಾಹುಲ್‌ಗಾಂಧಿ ಹೇಳಿಕೆ ಖಂಡನೀಯ । ಜಿಲ್ಲಾ ಬಿಜೆಪಿ ಸದಸ್ಯತ್ವ ಅಭಿಯಾನ
ತಲತಲಾಂತರದಿಂದ ಮೀಸಲಾತಿ ಮೂಲಕ ಪರಿಶಿಷ್ಟ ಜಾತಿ, ಪಂಗಡ ಏಳಿಗೆ ಕಂಡಿದೆ. ಆದರೆ, ಮೀಸಲಾತಿ ರದ್ದತಿ ಕುರಿತ ರಾಹುಲ್ ಗಾಂಧಿಯವರ ಹೇಳಿಕೆಯಿಂದ ಗಾಬರಿ ಆಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನೀಲ್‍ಕುಮಾರ್ ಹೇಳಿದರು.
ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ನಡೆದ ಸದಸ್ಯತ್ವ ಅಭಿಯಾನದ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರೆ ಮೀಸಲಾತಿ ರದ್ದು ಮಾಡಿ ಬಿಡುತ್ತಿತ್ತೇನೋ ಎಂಬಷ್ಟು ಆತಂಕ ನಿರ್ಮಾಣವಾಗಿದೆ. ಈ ಹೇಳಿಕೆಯನ್ನು ಖಂಡಿಸುತ್ತೇವೆ. ಮೀಸಲಾತಿಯನ್ನು ರದ್ದು ಮಾಡಲು ಬಿಜೆಪಿ ಬಿಡುವುದಿಲ್ಲ ಎಂದರು.ಶೋಷಿತರಿಗೆ ನೀಡುತ್ತಿರುವ ಮೀಸಲಾತಿ ರದ್ದುಗೊಳಿಸುವ ಹೇಳಿಕೆ ನೀಡುವ ಮೂಲಕ ಆ ವರ್ಗಕ್ಕೆ ಅವಮಾನ ಮಾಡಿದ್ದಾರೆ. ಕಾಂಗ್ರೆಸ್ ದಲಿತ, ಶೋಷಿತ ವರ್ಗದ ವಿರೋಧಿ ಎಂಬುದು ಅವರ ಹೇಳಿಕೆಯಿಂದ ಸಾಬೀತಾಗಿದೆ. ಈ ಹೇಳಿಕೆಯನ್ನು ಖಂಡಿಸಿ ನಾಳೆಯಿಂದ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿದರು.
ರಾಹುಲ್ ಗಾಂಧಿಯವರು ಅಮೆರಿಕದಿಂದ ವಾಪಸ್ ಬರುವುದರ ಒಳಗೆ ಕಾಂಗ್ರೆಸ್ ಇದಕ್ಕೆ ಪಶ್ಚಾತ್ತಾಪದ ಹೇಳಿಕೆ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ನಮ್ಮ ದೇಶದ ಚುನಾವಣಾ ವ್ಯವಸ್ಥೆ ಸರಿಯಾಗಿಲ್ಲ. ನಿರುದ್ಯೋಗ ಸಮಸ್ಯೆ ಮತ್ತು ಭ್ರಷ್ಟಾಚಾರ ಹೆಚ್ಚಿದೆ ಎಂದು ನಮ್ಮ ದೇಶದ ಗೌರವಕ್ಕೆ ಧಕ್ಕೆ ತರುವಂತಹ ಹೇಳಿಕೆಯನ್ನು ರಾಹುಲ್‌ಗಾಂಧಿ ಅವರು ನೀಡಿದ್ದಾರೆ ಎಂದು ಹೇಳಿದ ಸುನೀಲ್ ಕುಮಾರ್, ಇದು ಖಂಡನೀಯ ಎಂದು ಹೇಳಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಎಸ್‌ಐಟಿ ಮೂಲಕ ಮುಚ್ಚಿ ಹಾಕುವ ಯತ್ನವನ್ನು ರಾಜ್ಯ ಸರ್ಕಾರ ನಡೆಸಿತ್ತು. ಈಡಿ ತನಿಖೆಯಿಂದ ಸತ್ಯಸಂಗತಿ ಬಯಲಾಗಿದೆ. ನಿಗಮದ ಅಧ್ಯಕ್ಷ ನಾಗೇಂದ್ರ ಅವರು ಎ-1 ಆರೋಪಿಯಾಗಿದ್ದಾರೆ. ಈ ಹಗರಣದ ಸಂಪೂರ್ಣ ಹೊಣೆಗಾರಿಕೆಯನ್ನು ಸಿಎಂ ಸಿದ್ದರಾಮಯ್ಯ ಹೊರಬೇಕೆಂದು ಒತ್ತಾಯಿಸಿದರು.ಸಭೆಯ ಅಧ್ಯಕ್ಷತೆ ವಹಿಸಿದ್ಧ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ. ಆರ್. ದೇವರಾಜಶೆಟ್ಟಿ ಸದಸ್ಯತ್ವ ಅಭಿಯಾನ ಕುರಿತು ಮಾತನಾಡಿದರು.