ಕನ್ನಡಪ್ರಭ ವಾರ್ತೆ ಚಾಮರಾಜನಗರ
ಶ್ರೀಚಾಮರಾಜೇಶ್ವರ ಉದ್ಯಾನವನ ಮುಂಭಾಗದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಮುಖಂಡರು ಅಲ್ಲಿಂದ ಮೆರವಣಿಗೆಯಲ್ಲಿ ಭುವನೇಶ್ವರಿ ವೃತ್ತಕ್ಕೆ ತೆರಳಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಪರ ಜೈಕಾರ ಕೂಗಿ ಸಂಭ್ರಮಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ವೃಷಭೇಂದ್ರಪ್ಪ ಮಾತನಾಡಿ, ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿ ರಾಜ್ಯಗಳಲ್ಲಿ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಧಿಕಾರ ಹಿಡಿದಿರುವುದು ತುಂಬಾ ಸಂತಸವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನಪರ ಆಡಳಿತ ಒಪ್ಪಿ ಜನತೆ ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿ ರಾಜ್ಯಗಳಲ್ಲಿ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವ ಮೂಲಕ ಅಧಿಕಾರಕ್ಕೆ ತಂದಿದ್ದಾರೆ. ಈ ಮೂರು ರಾಜ್ಯ ಫಲಿತಾಂಶ ಕರ್ನಾಟಕ ರಾಜ್ಯದ ಮುಂದಿನ ಚುನಾವಣೆಯ ದಿಕ್ಸೂಚಿಯಾಗಿದೆ ಎಂದರು.ಯುವ ಮೋರ್ಚಾದ ಅಧ್ಯಕ್ಷ ಸೂರ್ಯಕುಮಾರ್ ಮಾತನಾಡಿ, ದೇಶದ ಜನ ಹಿಂದುತ್ವ ಕಡೆ ಸಾಗುತ್ತಿದ್ದಾರೆ ಎನ್ನುವುದಕ್ಕೆ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಒಂದು ಸಾಕ್ಷಿಯಾಗಿದೆ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿಗೆ ದೊಡ್ಡ ಗೆಲುವು ಆಗಿದೆ. ಅದೇ ರೀತಿ ಅಸ್ಸಾಂ, ಪುದುಚೇರಿಯಲ್ಲೂ ಬಿಜೆಪಿ ಅಧಿಕಾರ ಹಿಡಿದಿದೆ. ತಮಿಳುನಾಡಿನಲ್ಲಿ ಹಿಂದುತ್ವದ ವಿರುದ್ಧವಿದ್ದ ಡಿಎಂಕೆಗೆ ಜನರು ಸೋಲಿನ ರುಚಿ ತೋರಿಸಿದ್ದಾರೆ, ದೇಶದ ಜನರು ಸುಭದ್ರ ಆಡಳಿತ, ರಕ್ಷಣೆಗೆ ಹೆಚ್ಚು ಒತ್ತು ನೀಡಿದ್ದಾರೆ ಎಂದರು.
ಮನೋಜ್ ಪಟೇಲ್, ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ಆನಂದ್ ಭಗೀರಥ, ಬಂಗಾರನಾಯಕ, ಶಿವಣ್ಣ, ಮಂಜು, ಕೂಸಣ್ಣ, ಮಹೇಶ್, ಕೇಬಲ್ ರಂಗಸ್ವಾಮಿ, ಶೇಷಪ್ಪಾ ಪಾಸ್ವಾನ್, ವಿ.ಶ್ರೀನಿವಾಸಪ್ರಸಾದ್, ಸೋಮವಾರಪೇಟೆ ಗುರು, ಪೋಟೋಕೃಷ್ಣ, ಭೋಗಾಪುರ ಕುಮಾರ್, ಕೃಷ್ಣಪ್ಪ, ಪ್ರವೀಣ್ ನಾಯಕ್, ಕೃಷ್ಣಕುಮಾರ್, ಚಂದ್ರಶೇಖರ್, ಪರಶಿವು ಹಾಜರಿದ್ದರು.