೯ರಂದು ಪುತ್ತೂರಿನಲ್ಲಿ ಬಿಜೆಪಿ ಮಹಿಳಾ ಸಮಾವೇಶ

KannadaprabhaNewsNetwork | Published : Apr 8, 2024 1:09 AM

ಸಾರಾಂಶ

ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ರಾವ್, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರು ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಪಕ್ಷದ ಮಹಿಳಾ ಮುಖಂಡರಾದ ಕಸ್ತೂರಿ ಪಂಜ, ಮೀನಾಕ್ಷಿ ಶಾಂತಿಗೋಡು, ಮೀನಾಕ್ಷಿ ಮಂಜುನಾಥ್ ಭಾಗವಹಿಸಲಿದ್ದಾರೆ,

ಕನ್ನಡಪ್ರಭ ವಾರ್ತೆ ಪುತ್ತೂರು

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಏ.೯ರಂದು ಪುತ್ತೂರಿನ ಜೈನ ಭವನದಲ್ಲಿ ಮಹಿಳಾ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ನಟಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕ ಅವಿನಾಶ್ ಭಾಗವಹಿಸಲಿದ್ದಾರೆ ಎಂದು ಪುತ್ತೂರು ಕ್ಷೇತ್ರದ ಚುನಾವಣಾ ಪ್ರಭಾರಿ ಸುಲೋಚನಾ ಭಟ್ ತಿಳಿಸಿದ್ದಾರೆ.ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾವೇಶದಲ್ಲಿ ನಟಿ ಮಾಳವಿಕಾ ಅವಿನಾಶ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ರಾವ್, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರು ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಪಕ್ಷದ ಮಹಿಳಾ ಮುಖಂಡರಾದ ಕಸ್ತೂರಿ ಪಂಜ, ಮೀನಾಕ್ಷಿ ಶಾಂತಿಗೋಡು, ಮೀನಾಕ್ಷಿ ಮಂಜುನಾಥ್, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಸೇರಿದಂತೆ ಹಲವು ಮಂದಿ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಮಹಿಳಾ ಸಬಲೀಕರಣಕ್ಕೆ ವಿಶೇಷ ಒತ್ತು ನೀಡಲಾಗಿದೆ. ತ್ರಿವಳಿ ತಲಾಕ್ ರದ್ದು, ಮಹಿಳಾ ಮೀಸಲಾತಿ ಹೆಚ್ಚಳ, ಮಹಿಳಾ ದೌಜರ್ನ್ಯಕ್ಕೆ ಗಲ್ಲು ಶಿಕ್ಷೆ ಸೇರಿದಂತೆ ಆತ್ಮ ನಿರ್ಭರ ಭಾರತ ವ್ಯವಸ್ಥೆಯಲ್ಲಿ ಮಹಿಳೆಯರನ್ನು ಜೋಡಿಸಿಕೊಂಡು ಆರ್ಥಿಕ ಅಭಿವೃದ್ಧಿಗೆ ಪ್ರೇರೇಪಿಸಲಾಗಿದೆ. ಶೇ.೬೬ ಮಹಿಳಾ ಉದ್ದಿಮೆದಾರರಿಗೆ ಸಹಕಾರ, ಇಂದಿರಾ ಆವಾಜ್ ಯೋಜನೆಯಲ್ಲಿ ಶೇ.೭೧ ಮಹಿಳೆಯರಿಗೆ ಮನೆಗಳ ನಿರ್ಮಾಣ, ಸ್ವಸಹಾಯ ಸಂಘಗಳಿಗೆ ೧೮೦೦ ಕೋಟಿ ರೂ. ಸಾಲ, ಜನಧನ್ ಖಾತೆ, ಉಜ್ವಲ ಯೋಜನೆಯಲ್ಲಿ ೩೫.೫೭ ಲಕ್ಷ ಮಹಿಳೆಯರಿಗೆ ಸಹಾಯ, ೫ ಕೆ.ಜಿ. ಅಕ್ಕಿ ನಿರಂತರ ವಿತರಣೆ, ಮಹಿಳೆಯರಿಗೆ ಹೆರಿಗೆ ರಜೆ ಅವಧಿ ವಿಸ್ತರಣೆ ಸೇರಿದಂತೆ ಮಹಿಳೆಯರಿಗೆ ಶಕ್ತಿಯಾಗಿ ನಿಂತ ಪ್ರಧಾನಿ ನರೇಂದ್ರ ಮೋದಿಯವರಿಗೆ ನಮ್ಮ ಬೆಂಬಲ ನಿರಂತರವಾಗಿರುತ್ತದೆ ಎಂದು ತಿಳಿಸಿದರು.ರಾಷ್ಟ್ರೀಯ ವಿಚಾರಧಾರೆಯಲ್ಲಿ ಬಿಜೆಪಿ ಪಕ್ಷ ಕೆಲಸ ಮಾಡುತ್ತದೆ. ಆದರೆ ಪಾಕಿಸ್ತಾನ್ ಜಿಂದಾಬಾದ್ ಎನ್ನುವ ಮನಸ್ಥಿತಿಯ ಕಾಂಗ್ರೆಸ್ ಪಕ್ಷದಡಿಯಲ್ಲಿ ಮಹಿಳೆಯರು ಸುರಕ್ಷಿತರಾಗಿರಲು ಸಾಧ್ಯವಿಲ್ಲ. ಭಾಗ್ಯಗಳ ಘೋಷಣೆಯ ಮೂಲಕ ಅಧಿಕಾರಕ್ಕೆ ಬಂದ ರಾಜ್ಯದ ಕಾಂಗ್ರೆಸ್ ಸರಕಾರ ಅಂಗನವಾಡಿಗಳ ಸ್ಥಿತಿಯನ್ನು ಹದೆಗೆಡುವಂತೆ ಮಾಡಿದೆ. ಮಕ್ಕಳಿಗೆ ಸಮರ್ಪಕ ಆಹಾರ ಪೂರೈಕೆಯೂ ಇವರಿಗೆ ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಸರಕಾರಿ ನೌಕರರಿಗೆ ವೇತನ ನೀಡಲೂ ಇವರಿಂದ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿದ್ಯಾ ಆರ್. ಗೌರಿ, ಪುತ್ತೂರು ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರಿ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಪಕ್ಷದ ಮುಖಂಡರಾದ ಜಯಶ್ರೀ, ಗೌರಿ ಬನ್ನೂರು, ಕುಸುಮ, ಉಷಾ ಮುಳಿಯ, ಯಶೋದಾ, ನಾಗವೇಣಿ ಉಪಸ್ಥಿತರಿದ್ದರು.

Share this article