ಫಲಿತಾಂಶಕ್ಕೆ ಕೆಲವು ದಿನ ಬಾಕಿಯುಳಿದಿರುವಾಗ ಇದೀಗ ತಮ್ಮ ಪಕ್ಷದ ನೆಚ್ಚಿನ ಅಭ್ಯರ್ಥಿ ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ಪಕ್ಷಗಳ ಕಟ್ಟಾ ಕಾರ್ಯಕರ್ತರು ಬೆಲೆಬಾಳುವ ವಸ್ತುಗಳ ಪಣಕ್ಕಿಡುವ ಮೂಲಕ ಸವಾಲು ಪ್ರತಿಸವಾಲು ದಿನದಿಂದ ದಿನಕ್ಕೆ ಹೆಚ್ಚತೊಡಗಿದೆ.
ಶಿಕಾರಿಪುರ : ಬಹು ಜಿದ್ದಾಜಿದ್ದಿನ ಈ ಬಾರಿಯ ಲೋಕಸಭಾ ಚುನಾವಣೆಯು ಪೂರ್ಣಗೊಂಡು ಫಲಿತಾಂಶಕ್ಕೆ ಕೆಲವು ದಿನ ಬಾಕಿಯುಳಿದಿರುವಾಗ ಇದೀಗ ತಮ್ಮ ಪಕ್ಷದ ನೆಚ್ಚಿನ ಅಭ್ಯರ್ಥಿ ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ಪಕ್ಷಗಳ ಕಟ್ಟಾ ಕಾರ್ಯಕರ್ತರು ಬೆಲೆಬಾಳುವ ವಸ್ತುಗಳ ಪಣಕ್ಕಿಡುವ ಮೂಲಕ ಸವಾಲು ಪ್ರತಿಸವಾಲು ದಿನದಿಂದ ದಿನಕ್ಕೆ ಹೆಚ್ಚತೊಡಗಿದೆ.
ಈಗಾಗಲೇ ತಾಲೂಕಿನ ಕಲ್ಮನೆ ಗ್ರಾಮದ ರವೀಂದ್ರ ಎಂಬ ವ್ಯಕ್ತಿಯೊಬ್ಬ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಗೆಲುವು ಸಾಧಿಸಲಿದ್ದು, ಈ ಬಗ್ಗೆ ತನ್ನ ಹಳೇ ಟ್ರ್ಯಾಕ್ಟರ್ ಪಣಕ್ಕಿಟ್ಟಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಸವಾಲು ಹಾಕಿ ವ್ಯಾಪಕ ಪ್ರಚಾರ ಗಿಟ್ಟಿಸಿಕೊಂಡಿದ್ದರು. ಈ ಸವಾಲಿಗೆ ಪ್ರತಿಯಾಗಿ ಸೋಮವಾರ ಪಟ್ಟಣದ ಜಮೀನ್ದಾರ್ ಮಂಜುನಾಥ್ ಎಂಬ ಕಟ್ಟಾ ಬಿಜೆಪಿ ಕಾರ್ಯಕರ್ತ ರವೀಂದ್ರರ ಸವಾಲನ್ನು ಸ್ವೀಕರಿಸಿದ್ದು ಹಳೆ ಟ್ರಾಕ್ಟರ್ ಹಾಗೂ ಹೊಸ ಟ್ರ್ಯಾಕ್ಟರ್ ಎರಡನ್ನೂ ಪಣಕ್ಕಿಡಲು ಸಿದ್ಧವಾಗಿದ್ದು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಚಂಡ ದಿಗ್ವಿಜಯ ಸಾಧಿಸಲಿದ್ದಾರೆ ಈ ಬಗ್ಗೆ ನಾಳೆಯೇ ಕ್ಷೇತ್ರ ದೇವತೆ ಶ್ರೀ ಹುಚ್ಚುರಾಯಸ್ವಾಮಿ ದೇವಸ್ಥಾನದಲ್ಲಿ ಎಲ್ಲರ ಸಮ್ಮುಖದಲ್ಲಿ ಬೀಗ ನೀಡುವ ಮೂಲಕ ಒಪ್ಪಂದ ಮಾಡಿಕೊಳ್ಳೋಣ ಎಂದು ಬಹಿರಂಗವಾಗಿ ಪ್ರತಿ ಸವಾಲು ಹಾಕಿದ್ದಾರೆ.
ಕಲ್ಮನೆ ಗ್ರಾಮದ ರವೀಂದ್ರ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಜಯಗಳಿಸುವ ಬಗ್ಗೆ ಪಣಕ್ಕಿಟ್ಟಿರುವ ಟ್ರ್ಯಾಕ್ಟರ್ ಬಗ್ಗೆ ಸವಾಲು ಸ್ವೀಕರಿಸಲು ಮೊಬೈಲ್ ಗೆ ಮಾಡಿದ ಕರೆ ಸ್ವೀಕರಿಸುತ್ತಿಲ್ಲ ಈ ಬಗ್ಗೆ ಹಲವು ಬಾರಿ ಪ್ರಯತ್ನಿಸಿರುವುದಾಗಿ ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಉಪಾಧ್ಯಕ್ಷ ವೀರೇಂದ್ರ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜನತೆಗೆ ಅಪಮಾನ:
ದೇಶದಲ್ಲಿಯೇ ಕೇಂದ್ರದ ಅನುದಾನವನ್ನು ಅತಿ ಹೆಚ್ಚು ಬಳಸಿ ಜಿಲ್ಲೆಯನ್ನು ಅಭಿವೃದ್ಧಿಪಡಿಸಿದ 2 ನೇ ಸಂಸದ ಎಂಬ ಹೆಗ್ಗಳಿಕೆ ಹೊಂದಿರುವ ಬಿ.ವೈ ರಾಘವೇಂದ್ರರ ಬಗ್ಗೆ ರವೀಂದ್ರ ಎಂಬ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಟ್ರ್ಯಾಕ್ಟರ್ ಪಣಕ್ಕಿಟ್ಟು ಅತ್ಯಂತ ಕೀಳು ವ್ಯಕ್ತಿತ್ವ ಪ್ರದರ್ಶಿಸಿದ್ದಾರೆ ಇದು ತಾಲೂಕಿನ ಜನತೆಗೆ ಮಾಡಿದ ಅಪಮಾನ ಎಂದು ಬಿಜೆಪಿ ಕಾರ್ಯಕರ್ತ ಪ್ರಕಾಶ್ ಜಿನ್ನು ಪ್ರತಿಕ್ರಿಯಿಸಿದ್ದಾರೆ.