ಕನ್ನಡಪ್ರಭ ವಾರ್ತೆ,ರಬಕವಿ-ಬನಹಟ್ಟಿ
ಶಾಸಕ ಸಿದ್ದು ಸವದಿ ಕೆಎಚ್‌ಡಿಸಿ ಅಧ್ಯಕ್ಷರಾದಾಗ ನಡೆದ ಅವ್ಯವಹಾರ ಕುರಿತಾಗಿ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ನೀಡಿರುವ ಹೇಳಿಕೆ ವಿರುದ್ಧ ಬನಹಟ್ಟಿ ಪೋಲೀಸ್ ಠಾಣೆಯಲ್ಲಿ ಬಿಜೆಪಿ ನಗರಾಧ್ಯಕ್ಷ ಶ್ರೀಶೈಲ ಬೀಳಗಿ ದೂರು ನೀಡಿದ್ದ ಹಿನ್ನೆಲೆ ವಿಚಾರಣೆಗೆ ಆಗಮಿಸಿದ್ದ ಟಿರಕಿ ಮತ್ತವರ ಬೆಂಬಲಿಗರನ್ನು ಸುತ್ತುವರಿದ ಬಿಜೆಪಿ ಕಾರ್ಯಕರ್ತರು ಆರೋಪದ ಬಗ್ಗೆ ಸಾಕ್ಷಿ ಒದಗಿಸಲು ಪಟ್ಟು ಹಿಡಿದರು. ಅವ್ಯವಹಾರ ನಡೆದ ಬಗ್ಗೆ ಶಾಸಕರೇ ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದು ಮತ್ತು ಸದನದಲ್ಲಿ ಜವಳಿ ಸಚಿವರು ಅವ್ಯವಹಾರದ ತನಿಖೆ ನಡೆಸುವ ಹೇಳಿಕೆ ನೀಡಿರುವುದು ಮಾಧ್ಯಮಗಳಲ್ಲಿ ಬಿತ್ತರಗೊಂಡಿವೆ. ಅವ್ಯವಹಾರದ ಬಗ್ಗೆ ಜಿಲ್ಲಾಧಿಕಾರಿಗಳು ಸೇರಿ ಸಚಿವರು, ಸಿಎಂಗೆ ಮನವಿ ಸಲ್ಲಿಸಿ ನೇಕಾರ ಸಂಘಟನೆ ಆಗ್ರಹಿಸಿದೆ, ದಾಖಲೆಗಳು ನಮ್ಮ ಬಳಿ ಇವೆಯೆಂದು ಟಿರಕಿ ಸ್ಪಷ್ಟನೆ ನೀಡಿದರು.ಬಿಜೆಪಿ ಸದಸ್ಯರ ಮತ್ತು ನೇಕಾರ, ರೈತ ಸಂಘಟನೆಗಳ ಧುರೀಣರ ನಡುವೆ ವಾಗ್ಯುದ್ಧ ಬಿರುಸುಗೊಂಡಾಗ, ಪಿಎಸ್ಸೈ ಶಾಂತಾ ಹಳ್ಳಿ ಅವರು, ಉಭಯತರರಿಗೆ ದೂರು ಸ್ವೀಕರಿಸುವುದು ನಮ್ಮ ವ್ಯಾಪ್ತಿಯಲ್ಲಿ ಇಲ್ಲದಿದ್ದಾಗ್ಯೂ ಸಣ್ಣ ಕಿಡಿ ದಳ್ಳುರಿ ಆಗಬಾರದೆಂದು ಸ್ವೀಕರಿಸಿದ್ದು, ಸಂಯಮ ಮೀರಿದರೆ ಮುಲಾಜಿಲ್ಲದೆ ಒಳಗೆ ಹಾಕಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು. ಪರಸ್ಪರರು ಶಾಂತಿ ಕಾಯ್ದುಕೊಳ್ಳುವಂತೆ ಎಚ್ಚರಿಸಿ ಮತ್ತು ಭ್ರಷ್ಟಾಚಾರ ದಾಖಲೆಗಳಿದ್ದಲ್ಲಿ ಸಂಬಂಧಿಸಿದ ಇಲಾಖೆಯಲ್ಲಿ ಪ್ರಕರಣ ದಾಖಲಿಸಿ. ಸುಮ್ಮನೆ ಆರೋಪ ಮಾಡುತ್ತ ಶಾಂತಿ ಕದಡಬಾರದೆಂದು ಎಚ್ಚರಿಕೆ ನೀಡಿದರು. ಅಲ್ಲಿಗೆ ವಾಗ್ವಾದ ಕೊನೆಗೊಂಡು ಪರಿಸ್ಥಿತಿ ತಿಳಿಯಾಯಿತು.-----ನಾನು ಮಾಡಿರುವ ಆರೋಪದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಶಾಸಕ ಸಿದ್ದು ಸವದಿ ಅಧ್ಯಕ್ಷರಿದ್ದಾಗಲೇ ನಿಗಮದಲ್ಲಿ ₹೧೦೬ ಕೋಟಿಯ ಭ್ರಷ್ಟಾಚಾರ ಆಗಿದ್ದು, ಇದರಿಂದ ನೇಕಾರರಿಗೆ ಅನ್ಯಾಯವಾಗಿದೆ. ಇದಕ್ಕೆ ಮೂವರು ಅಧಿಕಾರಿಗಳ ತಲೆದಂಡ ಆಗಿದೆ. ನಮ್ಮ ಬಳಿ ಅಗತ್ಯ ದಾಖಲೆಗಳಿದ್ದು, ಮುಂದಿನ ಕ್ರಮಕ್ಕೆ ನೇಕಾರ ಸಂಘಟನೆ ಬದ್ಧವಾಗಿದೆ ಎಂದು
- ಶಿವಲಿಂಗ ಟಿರಕಿ ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘನೇಕಾರ ಸಂಘಟನೆ ರಾಜ್ಯಾಧ್ಯಕ್ಷ ಟಿರಕಿ ಗಾಳಿಯಲ್ಲಿ ಗುಂಡು ಹಾರಿಸುತ್ತ ಶಾಸಕ ಸಿದ್ದು ಸವದಿ ಹೆಸರಿಗೆ ಕಳಂಕ ತರುತ್ತಿದ್ದಾರೆ. ತಮ್ಮಲ್ಲಿ ದಾಖಲೆಗಳಿದ್ದರೆ ಲೋಕಾಯುಕ್ತ ಇಲ್ಲವೇ ಬೇರೆ ಸಂಸ್ಥೆಗಳಲ್ಲಿ ಪ್ರಕರಣ ದಾಖಲಿಸಲಿ ಸತ್ಯವಿದ್ದರೆ ನಾವೂ ಬೆಂಬಲಿಸುತ್ತೇವೆ. ದಾಖಲೆಗಳನ್ನು ಮುಂದಿಡದೇ ಸುಖಾಸುಮ್ಮನೇ ಆರೋಪ ಮಾಡುತ್ತ ಮಾನಹಾನಿ ಮಾಡುವುದು ನಮ್ಮ ಸಹನೆ ಕೆಣಕಿದಂತಾಗುತ್ತದೆ.
-ಶ್ರೀಶೈಲ ಬೀಳಗಿ. ಅಧ್ಯಕ್ಷರ ನಗರ ಬಿಜೆಪಿ