ಹಾನಗಲ್ಲದಲ್ಲಿ ಲೀಡ್ ಕೊಟ್ಟು ಅಸ್ತಿತ್ವ ಮರುಸ್ಥಾಪಿಸಿದ ಬಿಜೆಪಿ ಕಾರ್ಯಕರ್ತರು

KannadaprabhaNewsNetwork | Published : Jun 6, 2024 12:31 AM

ಸಾರಾಂಶ

ಹಾನಗಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರಿಗೆ ಲೀಡ್ ಸಿಕ್ಕಿದೆ. ಇಲ್ಲಿ ಕಾಂಗ್ರೆಸ್ ಶಾಸಕ ಶ್ರೀನಿವಾಸ ಮಾನೆ ಸತತ 2ನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಮತದಾರರ ಬಿಜೆಪಿ ಪರ ಒಲವು ತೋರಿದ್ದಾರೆ.

ಮಾರುತಿ ಶಿಡ್ಲಾಪುರ

ಹಾನಗಲ್ಲ: ಎರಡು ಬಾರಿ ವಿಧಾನಸಭಾ ಚುನಾವಣೆ ಸೋಲಿನಿಂದ ಕಳಾಹೀನವಾಗಿದ್ದ ಹಾನಗಲ್ಲ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಲೋಕಸಭೆ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗೆ ಲೀಡ್ ಕೊಡುವ ಮೂಲಕ ತಮ್ಮ ಅಸ್ತಿತ್ವ ಮರುಸ್ಥಾಪನೆ ಮಾಡಿದ್ದಾರೆ.

ಇನ್ನೊಂದೆಡೆ ಜಯದ ವಿಶ್ವಾಸದಲ್ಲಿದ್ದ ಕಾಂಗ್ರೆಸ್ ನಾಯಕರು ಅತಿ ಹೆಚ್ಚು ಮತ ಕಳೆದುಕೊಂಡಿದ್ದು, ಈಗ ಫಲಿತಾಂಶದ ಪರಾಮರ್ಶೆಯಲ್ಲಿದ್ದಾರೆ.

ವಿಧಾನಪರಿಷತ್ ಸದಸ್ಯರಾಗಿದ್ದು, ಹಾನಗಲ್ಲ ಕ್ಷೇತ್ರವನ್ನು ತಮ್ಮ ರಾಜಕೀಯ ಕರ್ಮಭೂಮಿ ಮಾಡಿಕೊಂಡ ಶಾಸಕ ಶ್ರೀನಿವಾಸ ಮಾನೆ ಅವರು, ಸಿ.ಎಂ. ಉದಾಸಿ ಅವರ ನಿಧನದಿಂದ ತೆರವಾಗಿ ನಡೆದ ಉಪ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿದ್ದರು. ಆಗ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಕಳೆದ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲೂ ೨೨ ಸಾವಿರ ಮತಗಳ ಅಂತರದ ಗೆಲುವು ಪಡೆದರು. ಇಂತಹ ಸನ್ನಿವೇಶದಲ್ಲಿ ಭಾರೀ ಮತದ ಹಿನ್ನಡೆ ಆಗಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಲೋಕಸಭೆ ಚುನಾವಣೆಯಲ್ಲಿ ೩೦ ಸಾವಿರ ಲೀಡ್ ಕೊಡುವ ವಿಶ್ವಾಸದಲ್ಲಿದ್ದ ನಾಯಕರಿಗೆ ಅತಿಯಾದ ಆತ್ಮವಿಶ್ವಾಸವೇ ಮುಳುವಾಯಿತು ಎಂಬ ಮಾತು ಕೇಳಿಬರುತ್ತಿವೆ.

ರಾಜ್ಯ ಸರ್ಕಾರದ ಗ್ಯಾರಂಟಿ ಫಲಾನುಭವಿಗಳು, ಶೈಕ್ಷಣಿಕ ಸಾಮಾಜಿಕ ಸೇವೆಯಲ್ಲಿ ಹೆಚ್ಚು ಕ್ರಿಯಾಶೀಲವಾಗಿ ಮಾಡಿದ ಸೇವೆಗಳು ಇನ್ನಷ್ಟು ಶಕ್ತಿ ತುಂಬುತ್ತವೆ ಎಂಬ ವಿಶ್ವಾಸ ಕಾಂಗ್ರೆಸ್ ಕಾರ್ಯಕರ್ತರಲ್ಲಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ೨೨ ಸಾವಿರ ಮತಗಳ ಅಂತರದಿಂದ ಗೆದ್ದ ಕಾಂಗ್ರೆಸ್‌ಗೆ ೮,೯೨೪ ಮತಗಳ ಹಿನ್ನಡೆಯೂ ಸೇರಿ ಲೆಕ್ಕಾಚಾರವೇ ತಲೆಕೆಳಗಾಗಿದೆ.

ಅಭ್ಯರ್ಥಿ ಘೋಷಣೆಯಾದ ಮೊದಲಲ್ಲಿಯೇ ಹಾನಗಲ್ಲ ಕ್ಷೇತ್ರಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದದೇವರಮಠ ಕೂಡ ಹಾಗನಲ್ಲನಿಂದ ಭಾರೀ ಲೀಡ್ ನಿರೀಕ್ಷಿಸಿದ್ದರು. ಅತ್ಯಂತ ಶಿಸ್ತುಬದ್ಧ ಚುನಾವಣೆಗೆ ಹೆಸರಾದ ಕಾಂಗ್ರೆಸ್ ಪಾಳಯದಲ್ಲಿ ಈ ಸೋಲು ವಿಮರ್ಶೆಗೂ ನಿಲುಕದಂತಾಗಿದೆ. ಹಿನ್ನಡೆ ವಿಚಾರ ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರನ್ನು ಕಾಡುತ್ತಿದೆ.

ಬಿಜೆಪಿ ಪಾಳಯದಲ್ಲಿ ಜಯದ ಖುಷಿ ಇದೆ. ಸಿ.ಎಂ. ಉದಾಸಿ ಅವರು ನಿಧನಾನಂತರ, ಶಿವಕುಮಾರ ಉದಾಸಿ ಚುನಾವಣಾ ರಾಜಕೀಯದಿಂದ ಹೊರಗುಳಿಯುವ ಘೋಷಣೆ ಮಾಡಿದಾಗಿನಿಂದ ಇಲ್ಲಿ ನಾಯಕತ್ವದ ಕೊರತೆ ಕಾರ್ಯಕರ್ತರಿಗೆ ಕಾಡಿತ್ತು. ಇದನ್ನು ಘಟಾನುಘಟಿ ನಾಯಕರು ಸಾರ್ವಜನಿಕರ ಸಭೆಯಲ್ಲಿಯೇ ಪ್ರಕಟಿಸಿದ್ದರು. ಮತ್ತೆ ಬಿಜೆಪಿ ಕೊಡವಿ ಏಳುವುದು ಯಾವಾಗ ಎಂಬ ಪ್ರಶ್ನೆ ಕಾರ್ಯಕರ್ತರನ್ನು ಕಾಡುತ್ತಿತ್ತು. ಸಾಮೂಹಿಕ ನಾಯಕತ್ವವನ್ನೆ ಮುಂದಿಟ್ಟುಕೊಂಡು ಮುನ್ನಡೆದ ಬಿಜೆಪಿಗೆ ೮೯೨೪ ಮತಗಳನ್ನು ಹೆಚ್ಚುವರಿ ನೀಡಿರುವುದು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಹಾನಗಲ್ಲ ತಾಲೂಕಿನಲ್ಲಿ ಬಿಜೆಪಿ ಕಾರ್ಯಕರ್ತರು, ಮತದಾರರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ನಾಯಕತ್ವದ ಕೊರತೆ ಇದೆ ಎಂದು ಚುನಾವಣಾ ಪೂರ್ವದಲ್ಲೇ ಹೇಳಿದ್ದ ಬಸವರಾಜ ಬೊಮ್ಮಾಯಿ, ಈ ಕೊರತೆ ತುಂಬುವ ಭರವಸೆ ನೀಡಿದ್ದರು.

ಕಟ್ಟಾ ಕಾಂಗ್ರೆಸಿಗ, ೪ ಬಾರಿ ಕಾಂಗ್ರೆಸ್‌ನಿಂದಲೇ ಶಾಸಕರಾಗಿ, ಮಂತ್ರಿಯಾಗಿ, ಸಿ.ಎಂ. ಉದಾಸಿ ಅವರ ಸಾಂಪ್ರದಾಯಕ ಚುನಾವಣಾ ಪ್ರತಿಸ್ಪರ್ಧಿಯಾಗಿದ್ದ ಮನೋಹರ ತಹಶೀಲ್ದಾರ ಅವರನ್ನು ಬಿಜೆಪಿಗೆ ಬರಮಾಡಿಕೊಂಡ ಬಸವರಾಜ ಬೊಮ್ಮಾಯಿ ಅವರಿಗೆ ಹಾನಗಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಶಕ್ತಿಯೇ ಜತೆಯಾಗಿ ಲಾಭವಾಯಿತು. ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸಿ ತಮ್ಮ ಬೆಂಬಲಿಗರನ್ನು ಬಿಜೆಪಿಗೆ ಸೇರಿಸಿ ಉತ್ಸಾಹದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ಬಿಜೆಪಿಗೆ ಶಕ್ತಿಯಾಗಿ ಬೊಮ್ಮಾಯಿ ಅವರಿಗೆ ಬಹುಮತ ನೀಡುವಲ್ಲಿ ಯಶಸ್ವಿಯಾಗಿದೆ ಎಂಬ ಮಾತು ಕೇಳಿ ಬರುತ್ತಿವೆ.

ಹಾನಗಲ್ಲ ವಿಧಾನಸಭಾ ಕ್ಷೇತ್ರ ಮುಂಬರುವ ಚುನಾವಣೆಗಳಿಗಾಗಿ ಲೆಕ್ಕಾಚಾರಕ್ಕೆ ಈ ಫಲಿತಾಂಶ ಇಂಬು ನೀಡಿದೆ. ತಾಪಂ, ಜಿಪಂ ಚುನಾವಣೆಗಳು ಶೀಘ್ರ ಬರಲಿದೆ. ಕಾಂಗ್ರೆಸ್, ಬಿಜೆಪಿ ನಾಯಕರಲ್ಲಿ ಹಾಗೂ ಅಭ್ಯರ್ಥಿಯಾಗುವ ಆಕಾಂಕ್ಷಿತರಲ್ಲಿ ಲೆಕ್ಕಾಚಾರ ನಡೆದಿದೆ. ಈಗಿನ ಕಾಂಗ್ರೆಸ್ ಹಿನ್ನಡೆ ಹಾಗೂ ಬಿಜೆಪಿ ಮುನ್ನಡೆಯ ಮುಂದಿನ ಪರಿಣಾಮ ಕಾದು ನೋಡಬೇಕು.

Share this article