ಬಿಜೆಪಿಯ ಸುಳ್ಳು ಇನ್ಮುಂದೆ ನಡೆಯಲ್ಲ: ಶಾಸಕ ರಾಘವೇಂದ್ರ ಹಿಟ್ನಾಳ

KannadaprabhaNewsNetwork | Published : May 6, 2024 12:36 AM

ಸಾರಾಂಶ

ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರ ಸುಳ್ಳುಗಳನ್ನು ಜನ ಅರಿತಿದ್ದು, ಈ ಸಲ ಸರಿಯಾಗಿ ಪಾಠ ಕಲಿಸಲಿದ್ದಾರೆ.

- ಹಿಟ್ನಾಳ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ

- ಬಿಜೆಪಿ ಸುಳ್ಳಿನ ಗ್ಯಾರಂಟಿಗೆ ತಕ್ಕಪಾಠ ಕಲಿಸಿಕನ್ನಡಪ್ರಭ ವಾರ್ತೆ ಕೊಪ್ಪಳ

ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರ ಸುಳ್ಳುಗಳನ್ನು ಜನ ಅರಿತಿದ್ದು, ಈ ಸಲ ಸರಿಯಾಗಿ ಪಾಠ ಕಲಿಸಲಿದ್ದಾರೆ. ಕಳೆದ ಹತ್ತು ವರ್ಷದಿಂದ ಹೇಳಿದ ಸುಳ್ಳು ಇನ್ಮುಂದೆ ನಡೆಯಲ್ಲ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.

ಲೋಕಸಭಾ ಚುನಾವಣೆ ನಿಮಿತ್ತ ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಿಜೆಪಿಯವರು ಸುಳ್ಳಿನ ಮೇಲೆ ಸಾಮ್ರಾಜ್ಯ ಕಟ್ಟುತ್ತಾರೆ. ಇಲ್ಲದ್ದನ್ನು ಅಚ್ಚುಕಟ್ಟಾಗಿ ಸೃಷ್ಟಿಸುತ್ತಾರೆ. ಭ್ರಮೆಗಳನ್ನು ಬಿತ್ತಿ ಮುಗ್ಧ ಜನರ ಮತ ಕೇಳುತ್ತಾರೆ. ಉದ್ಯೋಗ ನೀಡುತ್ತೇನೆ ಎಂದವರು ಈವರೆಗೆ ಒಂದು ಉದ್ಯೋಗ ಸೃಷ್ಟಿಸಿಲ್ಲ. ಇಡೀ ದೇಶದಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಳಗೊಂಡಿದೆ. ಧರ್ಮ ಮತ್ತು ಜಾತಿ ಹೆಸರಲ್ಲಿ ಯುವಕರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಮೊದಲಿಂದ ದೇಶ ಪ್ರೇಮ ಮೆರೆಯುತ್ತಾ ಬಂದಿದೆ, ಈ ದೇಶವನ್ನು ಕಟ್ಟಿದೆ. ರಾಜ್ಯದ ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿಗಳ ಮೂಲಕ ಜನಮನ ಗೆದ್ದಿದೆ. ಬಡವರ ನಿತ್ಯ ಜೀವನಕ್ಕೆ ಸಹಾಯವಾಗಲಿ ಎಂದು ಭಾಗ್ಯಗಳನ್ನು ಕೊಟ್ಟಿದೆ. ಕೇಂದ್ರ ಸರ್ಕಾರದ ಕೆಟ್ಟ ಆಡಳಿತದಿಂದ ಬೆಲೆ ಏರಿಕೆ, ಹಣದುಬ್ಬರ, ಜಿಎಸ್‌ಟಿ, ನೋಟ್ ಬಂದಿಯಿಂದ ಆರ್ಥಿಕ ಸ್ಥಿತಿ ಹದಗೆಟ್ಟು ಹೋಗಿತ್ತು. ಇದರಿಂದ ಸಾಮಾನ್ಯ ಜನ ತತ್ತರಿಸಿದ್ದರು. ಅವರೆಲ್ಲ ಈಗ ಗ್ಯಾರಂಟಿಗಳಿಂದ ಉಸಿರಾಡುವಂತಾಗಿದೆ. ಐದು ಗ್ಯಾರಂಟಿಗಳು ಬಡ ಜನರ ಬದುಕಿಗೆ ಹೊಸ ಚೈತನ್ಯ ತುಂಬಿವೆ. ರಾಜ್ಯದ ಉದ್ದಗಲಕ್ಕೂ ಮಹಿಳೆಯರು ಗ್ಯಾರಂಟಿ ಸ್ಮರಿಸುತ್ತಿದ್ದಾರೆ ಎಂದರು.

ಪ್ರಜಾಪ್ರಭುತ್ವದ ಉಳಿವಿಗಾಗಿ ಕಾಂಗ್ರೆಸ್ ಬೆಂಬಲಿಸಬೇಕು. ದೇಶ ಸಂಕಷ್ಟದಲ್ಲಿದೆ, ದುರಾಡಳಿತ ಹೆಚ್ಚಿದೆ. ಬಿಜೆಪಿ ಅಭ್ಯರ್ಥಿ ಹತಾಶರಾಗಿದ್ದಾರೆ. ಮಾಜಿ ಸಂಸದ ಸಂಗಣ್ಣ ಕರಡಿ ಕಾಂಗ್ರೆಸ್ ಸೇರ್ಪಡೆಗೊಂಡ ನಂತರ ಪಕ್ಷ ಬಲಿಷ್ಠಗೊಂಡಿದೆ. ನಮ್ಮ ಅಭ್ಯರ್ಥಿ ಪರ ಎಲ್ಲೆಡೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಒಂದೂವರೆ ಲಕ್ಷ ಮತಗಳ ಅಂತರದಿಂದ ಕೆ.ರಾಜಶೇಖರ ಹಿಟ್ನಾಳ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವಿ.ಆರ್. ಪಾಟೀಲ್, ಜಿಪಂ ಮಾಜಿ ಸದಸ್ಯ ರಮೇಶ ಹಿಟ್ನಾಳ, ಪ್ರಶಾಂತಗೌಡ್ರು, ನಾಗರಾಜ ಪಟವಾರಿ, ರಾಜಶೇಖರ್ ಬಂಡಿಹಾಳ, ನಾರಯಣಪ್ಪ ಬೀಲಮ್ಕರ್, ಶ್ರೀಧರ್ ಭೀಲಮ್ಕರ್, ಶ್ರೀನಿವಾಸ ವಕೀಲರು, ಅಸ್ಗರ್ ಅಲಿ, ಆನಂದ ರವದಿ, ರಾಮಣ್ಣ ದ್ಯಾಮರಾಯ, ಮಹಾದೇವಪ್ಪ, ಲಕ್ಷ್ಮಣ ದೇವರಮನಿ, ಸುಂಕಪ್ಪ, ಗಣೇಶ ಟಿ., ಬುಡನ್ ಸಾಬ್, ಚಂದ್ರಪ್ಪ ನಾಗಲಿಕರ್, ಚಂದ್ರಪ್ಪ ಮಂಡಳಬಟ್ಟಿ, ಫಕೀರಪ್ಪ ಗುನ್ನಾಳ ಸೇರಿದಂತೆ ಹಲವರಿದ್ದರು.

Share this article