ಶಿಗ್ಗಾಂವಿ: ಕಳೆದ ಹತ್ತು ವರ್ಷಗಳಲ್ಲಿ ಪೆಟ್ರೋಲ್ ಬೆಲೆಯನ್ನು ಎರಡರಿಂದ ಮೂರು ಪಟ್ಟು ಮತ್ತು ಡೀಸೆಲ್ ಬೆಲೆಯನ್ನು ಐದರಿಂದ ಹತ್ತು ಪಟ್ಟು ಹೆಚ್ಚಿಸುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಾಡುಹಗಲೇ ಜನರನ್ನು ಸುಲಿಗೆ ಮಾಡಿದರೂ ಬಾಯಿ ಮುಚ್ಚಿಕೊಂಡಿದ್ದ ಬಿಜೆಪಿಗರು ಈಗ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಮೂರು ರುಪಾಯಿ ಹೆಚ್ಚಿಸಿದ್ದಕ್ಕೆ ಎದೆ ಬಡಿದುಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಕುನ್ನೂರ ಪ್ರತಿಕ್ರಿಯಿಸಿದ್ದಾರೆ.
೨೦೨೧ರಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರುತ್ತಿದ್ದ ಸಂದರ್ಭದಲ್ಲಿ ರಾಜ್ಯದ ಜನತೆ ಸಿಡಿದೆದ್ದಾಗ ಬೆಲೆ ಕಡಿಮೆ ಮಾಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದ್ದ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ಪೆಟ್ರೋಲ್ ಶೇ. ೩೫ರಿಂದ ಶೇ.೨೫.೯೨ಕ್ಕೆ ಹಾಗೂ ಡೀಸೆಲ್ ಮೇಲಿನ ಶೇ.೨೪ರಿಂದ ೧೪.೩೪ಕ್ಕೆ ಮೌಲ್ಯ ವರ್ಧಿತ ತೆರಿಗೆಯನ್ನು ಇಳಿಸಿದ ಪರಿಣಾಮ ರಾಜ್ಯದ ಸರ್ಕಾರದ ಬೊಕ್ಕಸಕ್ಕೆ ಅಂದಾಜು ೧೫.೦೦೦ ಕೋಟಿ ನಷ್ಟ ಆಗಿದೆ. ಕೇಂದ್ರ ಸರ್ಕಾರದ ಸುಲಿಗೆಯನ್ನು ಪ್ರಶ್ನಿಸಿ ರಾಜ್ಯಕ್ಕೆ ಆಗುತ್ತಿದ್ದ ಅನ್ಯಾಯವನ್ನು ತಡೆಯಬೇಕಿದ್ದ ಬೊಮ್ಮಾಯಿ ಸರ್ಕಾರ ಕೇಂದ್ರದ ಜೊತೆ ಕೈಜೋಡಿಸಿ ಕನ್ನಡಿಗರಿಗೆ ದ್ರೋಹ ಬಗೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಜಿಎಸ್‌ಟಿ ಜಾರಿಗೊಳಿಸುವ ಮೂಲಕ ಸಂಪನ್ಮೂಲ ಸಂಗ್ರಹದ ಎಲ್ಲ ಅವಕಾಶಗಳನ್ನು ರಾಜ್ಯಗಳಿಂದ ಕಿತ್ತುಕೊಂಡಿದೆ. ಜನಪರ ಗ್ಯಾರಂಟಿ ಯೋಜನೆಗಳಿಂದ ಜನಪ್ರಿಯವಾಗುತ್ತಿರುವ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ನಮ್ಮ ಸಂಪನ್ಮೂಲವನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರ ಹುನ್ನಾರ ನಡೆಸಿದೆ. ಆದರೆ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ ಎಂದರು.ರಾಜ್ಯ ಸರ್ಕಾರದ ಮೌಲ್ಯವರ್ಧಿತ ತೆರಿಗೆಯಲ್ಲಾದ ಬದಲಾವಣೆಯಿಂದ ಸಂಗ್ರಹವಾಗುವ ಹಣ ನಾಡಿನ ಜನರ ಮೂಲಭೂತ ಸೇವೆಗಳು ಹಾಗೂ ಅಭಿವೃದ್ಧಿ ಯೋಜನೆಗಳಿಗೆ ವಿನಿಯೋಗವಾಗುತ್ತದೆ. ಸರ್ವರ ಹಿತ ಕಾಯಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸದಾ ಬದ್ಧವಾಗಿದೆ ಎಂದರು.