;Resize=(412,232))
ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ ಮಾಡುತ್ತಿದೆ. ಅದಕ್ಕಾಗಿ ಡಿ.ಕೆ. ಶಿವಕುಮಾರ್ ಅವರು ಸಂಚಾರ ದಟ್ಟಣೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುತ್ತೇವೆ ಎಂದು ಹೊರಟರೆ ಅದನ್ನು ವಿರೋಧಿಸುತ್ತಾ ಅಸೂಯೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಬೆಂಗಳೂರಿನ ಅಭಿವೃದ್ಧಿ ಬೇಡವಾಗಿದೆ. ಟನಲ್ ರಸ್ತೆ ಬದಲು ಸಮೂಹ ಸಾರಿಗೆ ಬಳಕೆಗೆ ಸಾರ್ವಜನಿಕರಿಗೆ ಕರೆ ನೀಡಬೇಕು ಎಂದು ಹೇಳುತ್ತಾರೆ. ಸಂಸದ ತೇಜಸ್ವಿ ಸೂರ್ಯ ಮೊದಲು ಅವರ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಕಾರು ಖರೀದಿ ಮಾಡಬೇಡಿ, ಸಂಚಾರ ದಟ್ಟಣೆ ನಿಯಂತ್ರಿಸಿ ಎಂದು ಕರೆ ನೀಡಲಿ ಎಂದು ಆಗ್ರಹಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಟನಲ್ ರಸ್ತೆ ಮಾಡಿದರೆ ಚಮತ್ಕಾರ ಎನ್ನುವವರು, ಕಾಂಗ್ರೆಸ್ ಸರ್ಕಾರ ಮಾಡಿದರೆ ಬಲತ್ಕಾರ ಎಂದು ಹೇಳುತ್ತಿದ್ದಾರೆ. ಮುಂಬೈನಲ್ಲಿ ಟನಲ್ ರಸ್ತೆ ಮಾಡಲಾಗಿದೆ. ಅದರ ಬಗ್ಗೆ ಮಾತನಾಡುವುದಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಷಡ್ಯಂತ್ರ ಮಾಡಲಾಗಗುತ್ತಿದೆ. ಸಿಎಂ-ಡಿಸಿಎಂ ಸಂಚಾರ ದಟ್ಟಣೆಗೆ ಪರಿಹಾರ ನೀಡಲು ಹೊರಟರೆ ಅಸೂಯೆಯಿಂದ ವಿರೋಧಿಸಲಾಗುತ್ತಿದೆ ಎಂದರು.