ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ, ವಿಜಯೋತ್ಸವ

KannadaprabhaNewsNetwork | Published : Feb 9, 2025 1:32 AM

ಸಾರಾಂಶ

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕನಕಗಿರಿ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಪಕ್ಷದ ಕಾರ್ಯಕರ್ತರು ಸಿಹಿ ಹಂಚಿ, ವಿಜಯೋತ್ಸವ ಆಚರಿಸಿದರು.

ಕನಕಗಿರಿ: ದೆಹಲಿಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಪಕ್ಷದ ಕಾರ್ಯಕರ್ತರು ಸಿಹಿ ಹಂಚಿ, ವಿಜಯೋತ್ಸವ ಆಚರಿಸಿದರು.

ಮುಖಂಡ ಮಹಾಂತೇಶ ಸಜ್ಜನ ಮಾತನಾಡಿ, ಭ್ರಷ್ಟ ಆಪ್ ಸರ್ಕಾರಕ್ಕೆ ತಕ್ಕಪಾಠ ಕಲಿಸಿದ ದೆಹಲಿ ಮತದಾರರು ಬಿಜೆಪಿಯ ಅಭೂತಪೂರ್ವ ಗೆಲುವಿಗೆ ಕಾರಣರಾಗಿದ್ದಾರೆ. ಅಣ್ಣಾ ಹಜಾರೆ ಹೆಸರಿನಲ್ಲಿ ರಾಜಕೀಯಕ್ಕೆ ಬಂದಿದ್ದ ಅರವಿಂದ ಕೇಜ್ರಿವಾಲ್ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಾಡಿದ್ದಕ್ಕೆ ದೆಹಲಿ ಜನತೆ ಬಿಜೆಪಿ ಬೆಂಬಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ರಾಷ್ಟ್ರದ ರಾಜಧಾನಿಯಲ್ಲೂ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಎನ್‌ಡಿಎ ಮತ್ತು ನಮ್ಮ ಪಕ್ಷದ ನಾಯಕರು ಮಾಡಲಿದ್ದಾರೆ ಎಂದರು.

ನಂತರ ಯುವ ಮುಖಂಡ ಶಿವಯ್ಯಸ್ವಾಮಿ ನವಲಿ ಮಾತನಾಡಿ, ಭ್ರಷ್ಟ ಕೇಜ್ರಿವಾಲ್ ಬೆಂಬಲಿಸಿದ್ದ ಕಾಂಗ್ರೆಸ್ ದೆಹಲಿಯಲ್ಲಿ ನೆಲಕಚ್ಚಿದೆ. ದೆಹಲಿ ಅಭಿವೃದ್ಧಿಗೆ ಬಿಜೆಪಿ ಸನ್ನದ್ಧವಾಗಿದೆ. ಕೇಂದ್ರ ಹಾಗೂ ರಾಜ್ಯ ಡಬಲ್ ಇಂಜಿನ್ ಸರ್ಕಾರದಿಂದ ದೇಶದ ಜನತೆ ತಿರುಗಿ ನೋಡುವಂತೆ ಅಭಿವೃದ್ಧಿ ಮಾಡಿ ತೋರಿಸುವುದೇ ನಮ್ಮ ಗುರಿಯಾಗಿದೆ ಎಂದರು.

ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ, ಪ್ರಮುಖರಾದ ವಾಗೀಶ ಹಿರೇಮಠ, ಶಿವಾನಂದ ಬೆನಕನಾಳ, ಪ್ರಕಾಶ ಹಾದಿಮನಿ, ನಿಂಗಪ್ಪ ನಾಯಕ ನವಲಿ, ಭೀಮನಗೌಡ ಹರ್ಲಾಪುರ, ಶರಣಪ್ಪ ಭಾವಿಕಟ್ಟಿ, ವೆಂಕಟೇಶ ಕುಂಬಾರ, ಹನುಮಂತರೆಡ್ಡಿ, ನರಸಿಂಹರೆಡ್ಡಿ ಓಣಿಮನಿ, ಶಿವಕುಮಾರ ಕೋರಿ, ರಾಚಪ್ಪ ಬ್ಯಾಳಿ, ನಾಗರಾಜ ಗಂಗಾಮತ, ಪೃಥ್ವಿ ಮ್ಯಾಗೇರಿ, ಹರೀಶ ಪೂಜಾರ ಇತರರಿದ್ದರು.

ಕಾರಟಗಿಯಲ್ಲಿ ವಿಜಯೋತ್ಸವ:

ತೀವ್ರ ಕುತೂಹಲ ಕೆರಳಿಸಿದ್ದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಗಳಿಸಿದ ಹಿನ್ನೆಲೆಯಲ್ಲಿ ಕಾರಟಗಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಶನಿವಾರ ಸಂಜೆ ವಿಜಯೋತ್ಸವ ಆಚರಿಸಿದರು.

ಇಲ್ಲಿನ ಕನಕದಾಸ ವೃತ್ತದ ಬಳಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಜಮಾಯಿಸಿ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದರು.ಶಕ್ತಿ ಕೇಂದ್ರದ ಅಧ್ಯಕ್ಷ ಬಸವರಾಜ ಎತ್ತಿನಮನಿ ಮತ್ತು ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ ಮಾತನಾಡಿ, ಕಳೆದ ೧೦ ವರ್ಷದ ಆಡಳಿತಾವಧಿಯಲ್ಲಿ ಪ್ರಧಾನ ನರೇಂದ್ರ ಮೋದಿ ಮಾಡಿರುವ ಉತ್ತಮ ಕಾರ್ಯ ನೋಡಿ ದೆಹಲಿ ಮತದಾರರು ಬಿಜೆಪಿಗೆ ಗೆಲುವಿನ ಮಾಲೆ ಹಾಕಿದ್ದಾರೆ. ಇದರಿಂದ ನಮ್ಮ ಪಕ್ಷದ ಮೇಲೆ ದೆಹಲಿ ಜನರು ಇಟ್ಟಿರುವ ನಂಬಿಕೆ ಉಳಿಸಿಕೊಳ್ಳಲು ಉತ್ತಮ ಆಡಳಿತ ನೀಡುವ ಮೂಲಕ ಮತದಾರರ ಋಣ ತೀರಿಸಲಿದ್ದಾರೆ ಎಂದರು.

ಮಂಡಲ ಮಾಜಿ ಅಧ್ಯಕ್ಷ ಶಿವಶರಣೇಗೌಡ ಯರಡೋಣಾ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ರತ್ನಕುಮಾರಿ, ಪುರಸಭೆ ಸದಸ್ಯರಾದ ಸೋಮಶೇಖರ್ ಬೇರಗಿ, ಬಸವರಾಜ ಕೊಪ್ಪದ್, ಪ್ರಮುಖರಾದ ಪ್ರಭುರಾಜ ಬೂದಿ, ಪಂಪನಗೌಡ ಜಂತಕಲ್, ಟಿ.ವಿ. ಉಮೇಶ ಸಜ್ಜನ್, ಬಸವರಾಜ ಶೆಟ್ಟರ್, ಸುರೇಶ ರಾಥೋಡ್, ಧನಂಜಯ್, ಹನುಮಂತಪ್ಪ ಬೇವಿನಾಳ, ವಿರೂಪಾಕ್ಷಿ ತಿಮ್ಮಾಪುರ, ಶಿವಶರಣಪ್ಪ ಶಿವಪೂಜಿ, ವಸಂತಸಿಂಗ್, ಶಶಿ ಮ್ಯಾದಾರ್, ಆನಂದ ಕುಲಕರ್ಣಿ, ವೀರೇಂದ್ರ ದಿವಟರ್, ಸೋಮನಾಥ್ ಉಡಮಕಲ್, ಭದ್ರಿ ಚನ್ನಳ್ಳಿ ಇನ್ನಿತರರು ಇದ್ದರು.

ಕುಕನೂರಲ್ಲಿ ಕಾರ್ಯಕರ್ತರಿಂದ ವಿಜಯೋತ್ಸವ:

ಕುಕನೂರು ಪಟ್ಟಣದ ವೀರಭದ್ರಪ್ಪ ವೃತ್ತದಲ್ಲಿ ದೆಹಲಿಯ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿ ಪಕ್ಷ ೪೭ ಸ್ಥಾನ ಪಡೆದಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ಶನಿವಾರ ವಿಜಯೋತ್ಸ ಆಚರಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಗಾವರಾಳ ಮಾತನಾಡಿ, ಕಾಂಗ್ರೆಸ್ ಇನ್ನು ಮುಳುಗುವ ಹಡಗು, ದೆಹಲಿಯ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಾರ್ಟಿ ವ್ಯಾಪಕ ಭ್ರಷ್ಟಾಚಾರದಿಂದ ಚುನಾವಣೆಯಲ್ಲಿ ಸೋಲು ಕಂಡಿದೆ ಎಂದು ಹೇಳಿದರು.ಮುಖಂಡ ಮಂಜುನಾಥ ನಾಡಗೌಡ ಮಾತನಾಡಿ, ಲೋಕಪಾಲ್ ಜಾರಿಗೆ ಆಗ್ರಹಿಸಿ ಅಣ್ಣಾ ಹಜಾರಿಯ ಗರಡಿಯಲ್ಲಿದ್ದ ಅರವಿಂದ ಕೇಜ್ರಿವಾಲ್ ಅವರು ತಮ್ಮ ಸ್ವಂತ ಪಕ್ಷ ಆಮ್ ಆದ್ಮಿ ಪಾರ್ಟಿ ಕಟ್ಟಿ ಮುಖ್ಯಮಂತ್ರಿಯಾದರು. ಅವರ ವ್ಯಾಪಕ ಭ್ರಷ್ಟಾಚಾರದಿಂದ ದೆಹಲಿ ಜನರು ಸೋಲಿಸಿದರು. ದೆಹಲಿಯ ಮದ್ಯದ ಹಗರಣದಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಭಾಗಿಯಾಗಿದ್ದರು ಎಂದರು.

ಪಪಂ ಮಾಜಿ ಅಧ್ಯಕ್ಷ ಶಂಭು ಜೋಳದ, ತಾಪಂ ಮಾಜಿ ಉಪಾಧ್ಯಕ್ಷ ಶಿವಕುಮಾರ ನಾಗಲಾಪುರಮಠ, ಮುಖಂಡರಾದ ಬಸವನಗೌಡ ತೊಂಡಿಹಾಳ, ಪಪಂ ಸದಸ್ಯ ಸಿದ್ದು ಉಳ್ಳಾಗಡ್ಡಿ, ಬಾಲರಾಜ ಗಾಳಿ, ಮಲ್ಲು ಚೌಧರಿ, ಮಾಜಿ ಸದಸ್ಯ ಕನಕಪ್ಪ ಬ್ಯಾಡರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಕಾಶ ತಹಸೀಲ್ದಾರ್, ಮುಖಂಡರಾದ ಮಧು ಕಲ್ಮನಿ, ಬಸವರಾಜ ಬಡಗೇರ, ಮಹಾಂತೇಶ ಹೂಗಾರ, ಮಂಜುನಾಥ ಮಾಲಗಿತ್ತಿ, ವೀರೇಶ ಸಬರದ್, ಲಕ್ಷ್ಮಣ ಕಾಳಿ, ಶರಣಪ್ಪ ಕಾಳಿ, ಚಂದ್ರು ಬಗನಾಳ, ಮಂಜುನಾಥ ಚನಪನಹಳ್ಳಿ, ನಾಗಪ್ಪ ಕಲ್ಮನಿ, ಶೇಖಪ್ಪ ಕಂಬಳಿ, ಬಸವರಾಜ ಪೂಜಾರ, ಸುಭಾಸ್ ಪೂಜಾರ್ ಅನೇಕರಿದ್ದರು.

Share this article