ನಿವೃತ್ತ ನೌಕರರಿಂದ ಕಪ್ಪು ಪಟ್ಟಿ ಧರಿಸಿ ಧರಣಿ

KannadaprabhaNewsNetwork |  
Published : Oct 02, 2024, 01:04 AM IST
ಚಿತ್ರ 1ಬಿಡಿಆರ್8ಬೀದರ್‌ನಲ್ಲಿ ನಿವೃತ್ತ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಪ್ಪು ಪಟ್ಟಿ ಧರಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮಂಗಳವಾರ ಧರಣಿ ಸತ್ಯಾಗ್ರಹ ನಡೆಸಿದರು. | Kannada Prabha

ಸಾರಾಂಶ

7ನೇ ವೇತನ ಆಯೋಗದ ಶಿಫಾರಸ್ಸಿನಂತೆ ನಿವೃತ್ತಿ ಆರ್ಥಿಕ ಸೌಲಭ್ಯ ಕಲ್ಪಿಸಲು ಆಗ್ರಹ

ಕನ್ನಡಪ್ರಭ ವಾರ್ತೆ ಬೀದರ್‌

2022ರ ಜುಲೈ1ರಿಂದ 2024ರ ಜುಲೈ 31ರ ಅವಧಿಯೊಳಗೆ ನಿವೃತ್ತರಾಗಿರುವ ರಾಜ್ಯ ಸರ್ಕಾರಿ ನೌಕರರಿಗೆ, 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ನಿವೃತ್ತಿ ಆರ್ಥಿಕ ಸೌಲಭ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕಪ್ಪು ಪಟ್ಟಿ ಕಟ್ಟಿಕೊಂಡು ಧರಣಿ ನಡೆಸಲಾಯಿತು.

ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ರಾಜ್ಯದಾದ್ಯಂತ ಡಿಸಿ ಕಚೇರಿ ಎದುರು ಏಕಕಾಲದಲ್ಲಿ ನಿವೃತ್ತ ನೌಕರರು ಕಪ್ಪುಪಟ್ಟಿ ಧರಿಸಿ ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ನಿರ್ಧಾರ ಕೈಗೊಂಡ ಹಿನ್ನಲೆಯಲ್ಲಿ ಧರಣಿ ಆಯೋಜಿಸಲಾಗಿತ್ತು.

2022ರ ಜು.1ರಿಂದ 2024ರ ಜು.31ರ ಅವಧಿಯಲ್ಲಿ ನಿವೃತ್ತಿಯಾದ ನೌಕರರಿಗೆ 6ನೇ ವೇತನ ಆಯೋಗದ ಲೆಕ್ಕಾಚಾರದ ಅನುಸಾರ ಡಿಸಿಆರ್‌ಜಿ ಕಮ್ಯುಟೇಶನ್‌, ರಜೆ ನಗದೀಕರಣಗಳ ನಿವೃತ್ತಿ ಆರ್ಥಿಕ ಸೌಲಭ್ಯವನ್ನು ನೀಡಿದ್ದಾರೆ. ನಮಗೆ ಆರ್ಥಿಕ ನಷ್ಟವುಂಟಾಗಿ ಅನ್ಯಾಯವಾಗಿದೆ.

ಈ ನಿಟ್ಟಿನಲ್ಲಿ ಈಗಾಗಲೇ ರಾಜ್ಯದ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರರ ಮೂಲಕ ನೂರಾರು ನಿವೃತ್ತ ನೌಕರರು ಮನವಿಯನ್ನು ಸಲ್ಲಿಸಿದ್ದಾರೆ.

ಅಲ್ಲದೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸುಮಾರು 12 ಸಾವಿರ ನಿವೃತ್ತ ನೌಕರರು ವಿಶ್ರಾಂತ ನ್ಯಾಯಮೂರ್ತಿ ಸಂತೋಷ ಹೆಗಡೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯಾಧ್ಯಕ್ಷ ಸಿ.ಎಸ್‌. ಷಡಕ್ಷರಿ, ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ರಾಜ್ಯಾಧ್ಯಕ್ಷ ಡಾ.ಎಲ್‌.ಭೈರಪ್ಪ ಅವರ ಸಮ್ಮುಖದಲ್ಲಿ ಆಗಿರುವ ಅನ್ಯಾಯದ ಕುರಿತು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತಿಗಳಿಗೆ ಮನವಿ ನೀಡಿದರೂ ಕೂಡ ಸ್ಪಂದಿಸುತ್ತಿಲ್ಲ. ಹೀಗಾಗಿ ಮತ್ತೊಮ್ಮೆ ಧರಣಿ ನಡೆಸುವ ಪ್ರಸಂಗ ಬಂದಿದೆ ಎಂದು ಸಂಘದ ಜಿಲ್ಲಾ ಸಂಚಾಲಕರಾದ ಜಗನ್ನಾಥ ಪತಂಗೆ ತಿಳಿಸಿ, ಬೇಡಿಕೆ ನ್ಯಾಯ ಸಮ್ಮತವಾಗಿದ್ದು, ಈಡೇರುವವರೆಗೆ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕರಾದ ಅಂಬಾರಾಯ ಶಾಂತಯ್ಯ, ಜಿಲ್ಲಾ ಸಂಚಾಲರಾದ ಜಗನ್ನಾಥ ಪತಂಗೆ, ವೆಂಕಟರೆಡ್ಡಿ, ಬಾಬುರಾವ್‌ ಬಿರಾದಾರ, ಗೋವಿಂದ ಟಿಳೆ, ಸರಸ್ವತಿ, ಚುಕ್ಕಮ್ಮ, ಸುರೇಖಾ ಶೀಲವಂತ, ನೀಲಕಂಠಯ್ಯ, ಕಲ್ಲಪ್ಪ ಪುಜಾರಿ, ಚಂದ್ರಕಾಂತ ಬಿರಾದಾರ, ಗೋಪಾಳರಾವ್‌ ಪಾಂಚಾಳ, ರಘುನಾಥ ರೊಟ್ಟಿ, ಶಿವಾಜಿ ಕಾವಳೆ ಸೇರಿ ಅನೇಕ ನಿವೃತ ಸರ್ಕಾರಿ ನೌಕರರು ಭಾಗವಹಿಸಿದ್ದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ