ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಸಚಿವ ಜಮೀರ್ ಅಹ್ಮದ್‌ ಖಾನ್‌ ವಿರುದ್ಧ ಕಾಂಗ್ರೆಸ್‌ ಪಕ್ಷದಲ್ಲೇ ತೀವ್ರ ಆಕ್ರೋಶ

KannadaprabhaNewsNetwork |  
Published : Nov 17, 2024, 01:20 AM ISTUpdated : Nov 17, 2024, 05:44 AM IST
DK Shivakumar, Zameer Ahmed Khan

ಸಾರಾಂಶ

ಆಗಾಗ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಸಚಿವ ಜಮೀರ್ ಅಹ್ಮದ್‌ ಖಾನ್‌ ವಿರುದ್ಧ ಕಾಂಗ್ರೆಸ್‌ ಪಕ್ಷದಲ್ಲೇ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಖುದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಬೆಂಗಳೂರು : ಆಗಾಗ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಸಚಿವ ಜಮೀರ್ ಅಹ್ಮದ್‌ ಖಾನ್‌ ವಿರುದ್ಧ ಕಾಂಗ್ರೆಸ್‌ ಪಕ್ಷದಲ್ಲೇ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಖುದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಕರಿಯ ಎಂದು ಕರೆದ ಜಮೀರ್‌ ಹೇಳಿಕೆ ತಪ್ಪು ಎಂದು ಡಿಕೆಶಿ ಒಪ್ಪಿದ್ದು, ಜಮೀರ್‌ ಅವರನ್ನು ತಿದ್ದುವ ಕೆಲಸ ಮಾಡುತ್ತೇವೆ ಎಂದು ಸೂಚ್ಯವಾಗಿ ಹೇಳಿದ್ದಾರೆ.

ಇದೇ ವೇಳೆ ಕಾಂಗ್ರೆಸ್‌ನ ಮುಸ್ಲಿಂ ನಾಯಕ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಎ.ಆರ್‌.ಎಂ.ಹುಸೇನ್‌ ಅವರು, ‘ನಿರ್ಣಾಯಕ ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕೆ ಮುಜುಗರ ಉಂಟುಮಾಡಿರುವ ಸಚಿವ ಜಮೀರ್‌ ಅಹಮದ್‌ ವಿರುದ್ಧ ಪಕ್ಷ ಶಿಸ್ತಿನ ಕ್ರಮ ಕೈಗೊಳ್ಳಬೇಕು’ ಎಂದು ಪತ್ರಿಕಾ ಹೇಳಿಕೆ ಮೂಲಕ ಬಹಿರಂಗವಾಗಿ ಆಗ್ರಹಿಸಿದ್ದಾರೆ.

ಜಮೀರ್‌ ಅವರನ್ನು ತಿದ್ದುತ್ತೇವೆ- ಡಿಕೆಶಿ:

ಜಮೀರ್‌ ಹೇಳಿಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ‘ಕೆಪಿಸಿಸಿ ಅಧ್ಯಕ್ಷನಾಗಿ ನಾನು ಅಧಿಕೃತವಾಗಿ ಹೇಳುತ್ತಿದ್ದೇನೆ. ಜಮೀರ್‌ ಹೇಳಿದ್ದು ತಪ್ಪು. ಯಾರೇ ಆಗಲಿ ಕಪ್ಪು, ಬಿಳುಪು ಎಂದೆಲ್ಲಾ ಮಾತನಾಡಬಾರದು. ಈ ಹೇಳಿಕೆ ಬಗ್ಗೆ ಪಕ್ಷದ ವೇದಿಕೆಯಲ್ಲಿ ಆಂತರಿಕವಾಗಿಯೂ ಜಮೀರ್‌ಗೆ ತಿಳಿಹೇಳಿದ್ದೇವೆ. ಅವರು ಕ್ಷಮೆಯನ್ನೂ ಯಾಚಿಸಿದ್ದಾರೆ. ನಾವು ಅವರನ್ನು ತಿದ್ದುತ್ತೇವೆ’ ಎಂದು ಸ್ಪಷ್ಟವಾಗಿ ತಿಳಿಸಿದರು.

‘ಇದು ಕುಮಾರಸ್ವಾಮಿ ಹಾಗೂ ಜಮೀರ್ ಅಹಮದ್‌ ಅವರ ನಡುವಿನ ಆಂತರಿಕ ವಿಚಾರ. ಆದರೂ ಜಮೀರ್ ಅವರು ಕಪ್ಪು, ಬಿಳುಪು ಹಾಗೂ ಆಸ್ತಿ ವಿಚಾರವನ್ನೆಲ್ಲ ಮಾತನಾಡಬಾರದಿತ್ತು. ಜಮೀರ್ ಅವರು ಪ್ರೀತಿಯಿಂದ, ಸಲುಗೆಯಿಂದ ಮಾತನಾಡಿದ್ದಾರೋ ಗೊತ್ತಿಲ್ಲ. ನಾನು ಪಕ್ಷದ ಅಧ್ಯಕ್ಷನಾಗಿ ಅದು ತಪ್ಪು ಎಂದು ಅಧಿಕೃತವಾಗಿಯೇ ಹೇಳುತ್ತಿದ್ದೇನೆ’ ಎಂದರು.

ಕೊಚ್ಚೆ ಎಂದಿದ್ದನ್ನೂ ಜನ ನೋಡಿದ್ದಾರೆ : ಜಮೀರ್ ಅವರನ್ನು ಕುಮಾರಸ್ವಾಮಿ ಅವರು ಕೊಚ್ಚೆ ಎಂದು ಕರೆದಿರುವ ಬಗ್ಗೆ ಕೇಳಿದಾಗ, ನಾನು ಮೊದಲೇ ಹೇಳಿದಂತೆ ಇದು ಅವರಿಬ್ಬರಿಗೆ ಬಿಟ್ಟ ವಿಚಾರ. ಅವರು ಕೊಚ್ಚೆ ಎಂದು, ಇವರು ಕರಿಯ ಎಂದು ಕರೆದಿದ್ದನ್ನು ಜನರು ನೋಡಿದ್ದಾರೆ. ಜನರೇ ಈ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

ಜಮೀರ್ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ:

ಇನ್ನು ಮುಸ್ಲಿಂ ನಾಯಕ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಎ.ಆರ್.ಎಂ. ಹುಸೇನ್‌ ಅವರು, ನಿರ್ಣಾಯಕ ರಾಜಕೀಯ ಸಂದರ್ಭಗಳಲ್ಲಿ ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಸಚಿವ ಜಮೀರ್‌ ಅಹಮದ್‌ ವಿರುದ್ಧ ಪಕ್ಷ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಸಚಿವ ಸ್ಥಾನದ ಘನತೆ ಮತ್ತು ಹಕ್ಕುಬದ್ಧತೆಯ ಜವಾಬ್ದಾರಿಯನ್ನು ಜಮೀರ್‌ ಅರಿತುಕೊಂಡಿಲ್ಲ. ಅವರಿಂದ ಪಕ್ಷಕ್ಕಾಗಲಿ, ಸರ್ಕಾರಕ್ಕಾಗಲಿ ಲಾಭವಾಗುವ ಬದಲು ಕೇವಲ ನಷ್ಟವಾಗುತ್ತಿದೆ. ಇವರ ನಡವಳಿಕೆಗೆ ಕೂಡಲೇ ಲಗಾಮು ಹಾಕಬೇಕು’ ಎಂದು ಒತ್ತಾಯ ಮಾಡಿದ್ದಾರೆ.

ಸಿದ್ದರಾಮಯ್ಯ ಅವರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಜೋಡೆತ್ತುಗಳಂತೆ ಶ್ರಮಿಸುತ್ತಾ ಪಕ್ಷ ಹಾಗೂ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ. ಜಾತ್ಯತೀತ ಮನೋಭಾವನೆಗಳಿಗೆ ಮತ್ತು ಮಾನವೀಯ ಧರ್ಮ ಸಂಹಿತೆಗೆ ಧಕ್ಕೆಯಾಗದಂತೆ ಸರ್ವರನ್ನು ಅಪ್ಪಿಕೊಂಡು ಮುನ್ನಡೆಸುತ್ತಿದ್ದಾರೆ. ಹೀಗಿರುವಾಗ ಸಚಿವ ಜಮೀರ್‌ ಅಹಮದ್ ಅವರು ಅಮಾನವೀಯ ಹೇಳಿಕೆ ನೀಡುತ್ತಾ ವಿವಾದ ಹುಟ್ಟು ಹಾಕಿ ಕೆಟ್ಟ ವಾತಾವರಣ ಸೃಷ್ಟಿಸುತ್ತಿದ್ದಾರೆ. ಉಪ ಚುನಾವಣೆಯ ಸಂದರ್ಭದಲ್ಲಿ ನೀಡಿದ ಹೇಳಿಕೆಗಳು ಮತ್ತು ಸೃಷ್ಟಿಸಿದ ವಿವಾದಗಳಿಂದ ಪಕ್ಷದ ಮೇಲೆ ದುಷ್ಪರಿಣಾಮ ಬೀರಿದೆ. ಇಂತಹವರನ್ನು ಮುಖ್ಯವಾಹಿನಿಯಲ್ಲಿ ಬಿಂಬಿಸಬಾರದು ಎಂದು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ