ಸಮಾಜಕ್ಕೆ ನ್ಯಾಯಯುತ ಮೀಸಲಾತಿ ಸಿಗುವವರೆಗೂ ಹೋರಾಟ ಅನಿವಾರ್ಯ
ಪಂಚಮಸಾಲಿ ಸಮಾಜದ ಬಡ ಮಕ್ಕಳ ಶೈಕ್ಷಣಿಕ ಹಾಗೂ ಸಾಮಾಜಿಕ ಉನ್ನತಿಗಾಗಿ 2ಎ ಮೀಸಲಾತಿ ದೊರೆಯುವುದು ಅತ್ಯಂತ ಅಗತ್ಯವಾಗಿದೆ. ಸಮಾಜಕ್ಕೆ ನ್ಯಾಯಯುತ ಮೀಸಲಾತಿ ಸಿಗುವ ವರೆಗೂ ಹೋರಾಟ ಅನಿವಾರ್ಯ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದ ಕುಮಾರೇಶ್ವರ ಪಾಠಶಾಲೆಯಲ್ಲಿ ಜರುಗಿದ ಸಭೆಯಲ್ಲಿ ಮಾತನಾಡಿದರು. ಲಿಂಗಾಯತ ಪಂಚಮಸಾಲಿ ಸಮಾಜದ ಹೋರಾಟಗಾರರ ಮೇಲೆ ರಾಜ್ಯ ಸರ್ಕಾರ ಲಾಠಿ ಚಾರ್ಜ್ ನಡೆಸಿರುವುದನ್ನು ತೀವ್ರವಾಗಿ ಖಂಡಿಸಿದರು. ಈ ಘಟನೆಯನ್ನು ಖಂಡಿಸಿ ಡಿ. 10ರಂದು ಬೆಳಗಾವಿ ಸುವರ್ಣ ಸೌಧದ ಮುಂದೆ ಕರಾಳ ದಿನವನ್ನಾಗಿ ಆಚರಿಸುವ ಮೂಲಕ ಸರ್ಕಾರದ ವಿರುದ್ಧ ಸಮಾಜದ ಆಕ್ರೋಶವನ್ನು ವ್ಯಕ್ತಪಡಿಸಬೇಕು ಎಂದರು.ಪಂಚಮಸಾಲಿ ಸಮಾಜದ ಬಡ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮಾನ ಅವಕಾಶಗಳು ದೊರೆಯಬೇಕಾದರೆ 2ಎ ಮೀಸಲಾತಿ ಅತ್ಯಗತ್ಯ. ಮೀಸಲಾತಿ ಎಂಬುದು ಸಮಾಜದ ಹಕ್ಕಿನ ಹೋರಾಟವಾಗಿದ್ದು, ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನ್ಯಾಯ ಸಿಗುವವರೆಗೂ ಸಂಘಟಿತವಾಗಿ ಹೋರಾಟ ಮುಂದುವರಿಸಬೇಕು. ಸಮಾಜದ ಪ್ರತಿಯೊಬ್ಬರೂ ಈ ಹೋರಾಟದಲ್ಲಿ ಕೈಜೋಡಿಸಬೇಕು ಎಂದು ಸ್ವಾಮೀಜಿ ಡಿ. 10ರಂದು ಕರಾಳ ದಿನ ಆಚರಣೆಯಲ್ಲಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.