ಹಿಂದಿನ ಸಭೆಗಳಿಗೆ ಹೋಲಿಸಿದರೆ 21 ದಿನದೊಳಗಿನ ಜನನ-ಮರಣ ನೋಂದಣಿ ಪ್ರಗತಿಯಲ್ಲಿ ಸುಧಾರಣೆಯಾಗಿದೆ

ಕೊಪ್ಪಳ:

ಜಿಲ್ಲೆಯಲ್ಲಿ ಸಂಭವಿಸುವ ಪ್ರತಿಯೊಂದು ಜನನ ಮತ್ತು ಮರಣ ಘಟನೆಯನ್ನು ನಿಗದಿತ 21 ದಿನಗಳೊಳಗೆ ಶೇ.100ರಷ್ಟು ನೋಂದಣಿ ಮಾಡಬೇಕು. ಈ ಪ್ರಕ್ರಿಯೆಯಲ್ಲಿ ಯಾವುದೇ ವಿಳಂಬ ಅಥವಾ ನಿರ್ಲಕ್ಷ್ಯ ತೋರಬಾರದು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ನಾಗರಿಕ ನೋಂದಣಿ ಪದ್ಧತಿಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಿಂದಿನ ಸಭೆಗಳಿಗೆ ಹೋಲಿಸಿದರೆ 21 ದಿನದೊಳಗಿನ ಜನನ-ಮರಣ ನೋಂದಣಿ ಪ್ರಗತಿಯಲ್ಲಿ ಸುಧಾರಣೆಯಾಗಿದೆ. ಆದರೆ ಶೇ.100ರಷ್ಟು ಗುರಿ ಸಾಧಿಸುವುದು ಆದ್ಯತೆಯಾಗಬೇಕು. ಪ್ರಮಾಣಪತ್ರ ಪಡೆಯಲು ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸಬಾರದು ಎಂದು ಸೂಚಿಸಿದರು.

ವೈದ್ಯಕೀಯ ಸಂಸ್ಥೆಗಳಲ್ಲಿ ಸಂಭವಿಸುವ ಮರಣಗಳಿಗೆ ಮರಣದ ಕಾರಣ ವೈದ್ಯಕೀಯ ಪ್ರಮಾಣಪತ್ರ (ಎಂಸಿಸಿಡಿ) ನಮೂನೆ-4 ಹಾಗೂ ಮನೆಗಳಲ್ಲಿ ಸಂಭವಿಸುವ ಮರಣಗಳಿಗೆ ನಮೂನೆ-4ಎ ಅನ್ನು ನಿಖರವಾಗಿ ಭರ್ತಿ ಮಾಡಬೇಕು. ವಿಷಪ್ರಾಶನ, ನಾಯಿ ಕಡಿತ ಹಾಗೂ ಅಸ್ವಾಭಾವಿಕ ಸಾವುಗಳ ಪ್ರಕರಣಗಳಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ವಿಳಂಬವಾದರೂ ಲಭ್ಯವಿರುವ ಪ್ರಾಥಮಿಕ ವೈದ್ಯಕೀಯ ಸಾಕ್ಷ್ಯಗಳ ಆಧಾರದ ಮೇಲೆ ನಿಯಮಾನುಸಾರ ಪ್ರಮಾಣಪತ್ರ ವಿತರಿಸಲು ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಗೆ ತರುವಷ್ಟರಲ್ಲೇ ಮೃತಪಟ್ಟ ಪ್ರಕರಣಗಳಲ್ಲಿಯೂ ನಿಯಮ ಪಾಲಿಸಬೇಕು ಎಂದರು.

ಜನನ ಮತ್ತು ಮರಣ ನೋಂದಣಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸಂಭವಿಸಿದ ಘಟನೆಗಳನ್ನು ಮಾತ್ರ ನೋಂದಾಯಿಸಬೇಕು. ವ್ಯಾಪ್ತಿ ಮೀರಿ ಬೇರೆ ಪ್ರದೇಶಗಳ ಘಟನೆಗಳನ್ನು ನೋಂದಾಯಿಸುವುದು ಕಾನೂನುಬಾಹಿರವಾಗಿದ್ದು, ಇಂತಹ ಪ್ರಕರಣಗಳು ಕಂಡುಬಂದರೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ನಿರ್ವಹಿಸಲಾಗುತ್ತಿದ್ದ ಹಳೆಯ ಜನನ-ಮರಣ ನೋಂದಣಿ ವಹಿಗಳನ್ನು ಡಿ.15ರೊಳಗೆ ಆಯಾ ತಾಲೂಕು ತಹಶೀಲ್ದಾರ್ ಕಚೇರಿಗಳಿಗೆ ಹಸ್ತಾಂತರಿಸಬೇಕು ಎಂದು ಗಡುವು ವಿಧಿಸಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಆರ್.ಎಚ್. ನದಾಫ್ ಮಾಹಿತಿ ನೀಡಿ, 2026ರ ಜನವರಿಯಿಂದ ಅಕ್ಟೋಬರ್‌ವರೆಗೆ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದ 6,766 ಹಾಗೂ ನಗರ ಪ್ರದೇಶದ 20,682 ಸೇರಿದಂತೆ ಒಟ್ಟು 27,448 ಜನನಗಳು ನೋಂದಣಿಯಾಗಿವೆ. ಇದೇ ಅವಧಿಯಲ್ಲಿ ಗ್ರಾಮೀಣ ಪ್ರದೇಶದ 6,020 ಹಾಗೂ ನಗರ ಪ್ರದೇಶದ 3,008 ಸೇರಿದಂತೆ ಒಟ್ಟು 9,028 ಮರಣಗಳು ದಾಖಲಾಗಿವೆ. ಯಾವುದೇ ನಿರ್ಜೀವ ಜನನ ಪ್ರಕರಣ ದಾಖಲಾಗಿಲ್ಲ. 2025ರಲ್ಲಿ ಜಿಲ್ಲೆಯ ಜನನ ದರ 19.99 ಹಾಗೂ ಮರಣ ದರ 6.76 ದಾಖಲಾಗಿದೆ ಎಂದು ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕ ಜೆ.ಡಿ. ಕೃಷ್ಣಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಈಶ್ವರ ಸವಡಿ, ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶ್ರೀನಿವಾಸ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.