ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರ ಆಡಳಿತ ನಿರ್ಲ್ಯಕ್ಷ ಖಂಡಿಸಿ ನ. ೧ರಂದು ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನಡೆಸುವ ಸಂದರ್ಭದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್. ರಾಜು ಹೇಳಿದರು.
ದಿ. ಬಂಗಾರಪ್ಪನವರಷ್ಟೇ ಕಾಗೋಡು ತಿಮ್ಮಪ್ಪ ಕೂಡ ಹೋರಾಟದ ರಾಜಕಾರಣಿಯಾಗಿದ್ದಾರೆ. ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಬಗ್ಗೆ ಮುಖ್ಯ ಮಂತ್ರಿ ಜೊತೆ ಒಮ್ಮೆಯೂ ಮಾತನಾಡಿಲ್ಲ. ಜನಸ್ಪಂದನ ಕಾರ್ಯಕ್ರಮಗಳಲ್ಲಿ ಕಾಟಾಚಾರಕ್ಕೆ ಅಹವಾಲು ಸ್ವೀಕರಿಸುತ್ತಾರೆ. ಯಾವ ಸಮಸ್ಯೆಯನ್ನೂ ಬಗೆಹರಿಸಿಲ್ಲ. ಮುಳುಗಡೆ ಸಂತ್ರಸ್ತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದನ್ನು ಬಿಟ್ಟರೆ ಒಮ್ಮೆಯೂ ವಿಧಾನಸಭೆಯಲ್ಲಿ ಮಾತನಾಡಿಲ್ಲ. ಇಂತಹ ಸಚಿವರ ನಡವಳಿಕೆ ನಾವು ಖಂಡಿಸುತ್ತೇವೆ. ಅಲ್ಲದೇ, ನ. 1ರಂದು ಅವರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ ಎಂದರು.
ಅ. 26ರಂದು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಜಯಂತಿ ಇದ್ದು ಸೊರಬದ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ನಮ್ಮ ಸಮಿತಿಯಿಂದ ಪುಷ್ಪಾರ್ಷನೆ ಸಲ್ಲಿಸಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಶ್ರೀನಿವಾಸ್, ಅಜಿತ್, ಕಾಂತೇಶ್, ವೀರೇಶ್, ಪತ್ರೇಶ್, ತಿಮ್ಮಣ್ಣ, ರಾಜ ಸ್ವಾಮಿ ಇದ್ದರು.