ಕಳಪೆ ಮೆಣಸಿನಕಾಯಿ ಬಿತ್ತನೆ ಬೀಜ ವಿತರಿಸಿದ ಕಂಪನಿ ಕಪ್ಪುಪಟ್ಟಿಗೆ ಸೇರಿಸಿ: ರೈತ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ

KannadaprabhaNewsNetwork | Published : May 10, 2025 1:09 AM

ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ರೈತ ಸಂಘದಿಂದ ಜಿಲ್ಲೆಯಲ್ಲಿರುವ ಎಲ್ಲ ಬೀಜ ವಿಸ್ತರಣಾ ಕಂಪನಿಗಳು, ಬೀಜ ಉತ್ಪಾದಕ ಕಂಪನಿಗಳು, ಆಗ್ರೋ ಕೇಂದ್ರಗಳು ಅದರ ಜತೆಗೆ ಸಂಬಂಧಿಸಿದ ಇಲಾಖೆಗಳಿಗೆ ಬೀಗ ಹಾಕಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಂದು ರೈತರು ಎಚ್ಚರಿಸಿದರು.

ಹಾವೇರಿ: ಕಳಪೆ ಮೆಣಸಿನಕಾಯಿ ಬೀಜ ವಿತರಣೆ ಮಾಡಿದ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿ ರೈತರಿಗೆ ಪರಿಹಾರ ಕೊಡಿಸಲು ಹಾಗೂ ಬ್ಯಾಡಗಿಯ ವಿನಾಯಕ ಆಗ್ರೋ ಸೆಂಟರ್‌ನ ಲೈಸೆನ್ಸ್ ರದ್ದು ಮಾಡಲು ಒತ್ತಾಯಿಸಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಬ್ಯಾಡಗಿ ತಾಲೂಕಿನ ಹಿರೇಹಳ್ಳಿ, ಚಿಕ್ಕಹಳ್ಳಿ, ಬಡಮಲ್ಲಿ, ಭಗತ್‌ಸಿಂಗ್ ನಗರ ಗ್ರಾಮಗಳ ರೈತರು ಕಳೆದ ಡಿಸೆಂಬರ್‌ನಲ್ಲಿ ಬ್ಯಾಡಗಿಯ ವಿನಾಯಕ ಆಗ್ರೋ ಸೆಂಟರ್‌ನಲ್ಲಿ ಹಾನಾ ಕ್ರಾಪ್ ಸೈನ್ಸ್ ಲಿಮಿಟೆಡ್ ಕಂಪನಿಯ ರಹಿಲಾ(ಡಿಸಿಎಚ್- 301) ಈ- 1 ಮೆಣಸಿನಕಾಯಿ ಸಂಕರಣ ತಳಿಯ ಬೀಜಗಳನ್ನು ಖರೀದಿಸಿ ಸುಮಾರು 8- 10 ಎಕರೆ ಜಮೀನಿಗೆ ನಾಟಿ ಮಾಡಲು ಸಸಿಗಳನ್ನು ಜಮೀನಿನಲ್ಲಿ ಬೆಳೆಸಿದ್ದರು. ಬಳಿಕ ಜನವರಿ ಎರಡನೇ ವಾರದಲ್ಲಿ ಸಸಿಗಳನ್ನು ರೈತರು ನಾಟಿ ಮಾಡಿದ್ದರು. ಆದರೆ ಕಂಪನಿಯವರ ಬಿತ್ತನೆ ಬೀಜ ಕಳಪೆಯಾದ ಕಾರಣ ರೈತರಿಗೆ ಲಕ್ಷಾಂತರ ರು. ನಷ್ಟ ಅನುಭವಿಸುವಂತಾಗಿದೆ ಎಂದು ದೂರಿದರು. ಬ್ಯಾಡಗಿ ತಾಲೂಕಿನಲ್ಲಿ ರೈತರು ಹಲವಾರು ವರ್ಷಗಳಿಂದ ಮೆಣಸಿನಕಾಯಿ ಬೆಳೆಗಳನ್ನು ಬೆಳೆದು ತಮ್ಮ ಆದಾಯವನ್ನು ದ್ವಿಗುಣಗೊಳಿಸಿಕೊಂಡಿದ್ದಾರೆ. ಆದರೆ ಈ ಕಂಪನಿಯವರ ಬಿತ್ತನೆ ಬೀಜಗಳು ಖರೀದಿ ಮಾಡಿ ಸಸಿ ಬೆಳೆಸಿ ನಾಟಿ ಮಾಡಿದ ನಂತರ ಮೆಣಸಿನಕಾಯಿ ಗಿಡಗಳಲ್ಲಿ ಬೆಳವಣಿಗೆ ಕುಂಠಿತಗೊಂಡಿದ್ದನ್ನು ಗಮನಿಸಿದ ರೈತರು ಬೀಜ ಖರೀದಿಸಿದ ಆಗ್ರೋ ಕೇಂದ್ರಕ್ಕೆ ಭೇಟಿ ನೀಡಿ ಕಂಪನಿಯವರಿಗೆ ವಿಷಯ ತಿಳಿಸಿದ್ದಾರೆ. ಆದರೆ ಯಾವುದೇ ಕ್ರಮ ಕೈಗೊಳ್ಳದೇ ಇದ್ದಾಗ ವಿನಾಯಕ ಆಗ್ರೋ ಸೆಂಟರ್ ಮತ್ತು ಹಾನಾ ಕ್ರಾಪ್ ಸೈನ್ಸ್ ಲಿಮಿಟೆಡ್ ಬೀಜದ ಕಂಪನಿ ವಿರುದ್ಧ ಸಹಾಯಕ ತೋಟಗಾರಿಕಾ ನಿರ್ದೇಶಕರಿಗೆ ದೂರು ನೀಡಿದ ನಂತರ ತೋಟಗಾರಿಕಾ ಅಧಿಕಾರಿಗಳು ಮತ್ತು ವಿಜ್ಞಾನಿಗಳ ತಂಡ ಮೇಲೆ ಸೂಚಿಸಿದ ರೈತರ ಜಮೀನಿಗೆ ಬಂದು ಪರಿಶೀಲನೆ ಮಾಡಿ ರಹಿಲಾ(ಡಿಸಿಎಚ್-301) ಈ- 1 ಶಂಕರನ ತಳಿಯ ಮೆಣಸಿನಕಾಯಿ ಬೀಜವು ಕಳಪೆ ಗುಣಮಟ್ಟದ್ದು ಎಂದು ವರದಿ ನೀಡಿದ್ದಾರೆ ಎಂದರು. ಕಳಪೆ ಮೆಣಸಿನ ಕಾಯಿ ಬೀಜ ವಿತರಣೆ ಮಾಡಿದ ಹಾನಾ ಕ್ರಾಪ್ ಸೈನ್ಸ್ ಲಿಮಿಟೆಡ್ ಕಂಪನಿಯನ್ನು ರಹಿಲಾ(ಡಿಸಿಎಚ್- 301) ಈ- 1 ತಳಿ) ಕಪ್ಪು ಪಟ್ಟಿಗೆ ಸೇರಿಸಬೇಕು ಮತ್ತು ಬ್ಯಾಡಗಿಯಲ್ಲಿ ಇರುವ ವಿನಾಯಕ ಆಗ್ರೋ ಸೆಂಟರ್‌ನ ಎಲ್ಲ ಲೈಸೆನ್ಸ್ ರದ್ದು ಮಾಡಬೇಕು. ಬೀಜದ ಕಂಪನಿ ಮತ್ತು ಅಂಗಡಿ ಮಾಲೀಕರಿಂದ ತಕ್ಷಣ ಪ್ರತಿ ಎಕರೆಗೆ ₹3 ಲಕ್ಷ ರೈತರಿಗೆ ಪರಿಹಾರ ಕೊಡಿಸಬೇಕೆಂದು ಒತ್ತಾಯಿಸಿದರು. ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ರೈತ ಸಂಘದಿಂದ ಜಿಲ್ಲೆಯಲ್ಲಿರುವ ಎಲ್ಲ ಬೀಜ ವಿಸ್ತರಣಾ ಕಂಪನಿಗಳು, ಬೀಜ ಉತ್ಪಾದಕ ಕಂಪನಿಗಳು, ಆಗ್ರೋ ಕೇಂದ್ರಗಳು ಅದರ ಜತೆಗೆ ಸಂಬಂಧಿಸಿದ ಇಲಾಖೆಗಳಿಗೆ ಬೀಗ ಹಾಕಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಂದು ಎಚ್ಚರಿಸಿ ಮನವಿ ಸಲ್ಲಿಸಿದರು. ಈ ವೇಳೆ ರೈತ ಮುಖಂಡರಾದ ಶಿವಬಸಪ್ಪ ಗೊವಿ, ಸುರೇಶ ಚಲವಾದಿ, ಶಿವಯೋಗಿ ಹೊಸಗೌಡ್ರ, ಜಾನ್ ಪುನೀತ್, ಚಂದ್ರಶೇಖರ ತೋಟದ, ವಿ.ಆರ್. ಅಂಗಡಿ, ನಾಗರಾಜ ಬನ್ನಿಹಳ್ಳಿ, ಕಾಂತೇಶ ಅಗಸಿಬಾಗಿಲ, ಮಾಲತೇಶ ಲಕ್ಕಮ್ಮನವರ, ಬಸವರಾಜ ಹೀರೆಮಠ, ಮಂಜುನಾಥ ದಿಡಗೂರ, ಮಂಜು ಗೌರಾಪುರ ಇತರರು ಇದ್ದರು.