ಕಾರವಾರ: ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುತ್ತಿಗೆ ವಹಿಸಿಕೊಂಡಿರುವ ಗುತ್ತಿಗೆದಾರರು ಮತ್ತು ಗುತ್ತಿಗೆ ಕಂಪನಿಗಳು ನಿಗದಿತ ಅವಧಿಯೊಳಗೆ ಕಾಮಗಾರಿಗಳನ್ನು ಮುಕ್ತಾಯಗೊಳಿಸದೇ ಇದ್ದಲ್ಲಿ ಅಂತಹವರನ್ನು ಕಪ್ಪುಪಟ್ಟಿಗೆ ಸೇರ್ಪಡೆ ಮಾಡುವಂತೆ ಎಲ್ಲ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ಎಸ್. ವೈದ್ಯ ಸೂಚಿಸಿದರು.
ಜಿಲ್ಲೆಯಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗಳಿಗೆ ಸರ್ಕಾರಿ ಕೋಟಾದಲ್ಲಿ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ್ದ 61 ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಅದರಲ್ಲಿ 24 ವೈದ್ಯರು ಹೇಳದೇ ಕೇಳದೇ ಕೆಲಸ ಬಿಟ್ಟು ಹೋಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನೀರಜ್ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಪದವಿ ಪಡೆಯುವ ವಿದ್ಯಾರ್ಥಿಗೆ ಸರ್ಕಾರವು ಸುಮಾರು ₹2 ಕೋಟಿ ಅಧಿಕ ಮೊತ್ತವನ್ನು ವೆಚ್ಚ ಮಾಡುತ್ತಿದ್ದು, ವೈದ್ಯಕೀಯ ಪದವಿ ಪಡೆದ ಇಂತಹ ವೈದ್ಯರು ಕಡ್ಡಾಯ ಸರ್ಕಾರಿ ಸೇವೆ ಸಲ್ಲಿಸಬೇಕು ಎಂಬ ನಿಯಮವಿದ್ದು, ಅದರಂತೆ ಕೆಲಸಕ್ಕೆ ಸೇರಿ, ಉತ್ತಮ ವೇತನ ನೀಡಿದರೂ ಯಾವುದೇ ಸೂಕ್ತ ಕಾರಣ ನೀಡದೇ ಕೆಲಸ ಬಿಟ್ಟು ಹೋಗಿರುವ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದ ಸಚಿವರು, ಅಂತಹ ವೈದ್ಯರ ವಿರುದ್ಧ ಕಾನೂನು ಸಲಹೆ ಪಡೆದು ಪ್ರಕರಣ ದಾಖಲಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಒಟ್ಟು 112 ಮಂಗನ ಕಾಯಿಲೆ ಪ್ರಕರಣಗಳು ವರದಿಯಾಗಿದ್ದು, 9 ಮಂದಿ ಮೃತಪಟ್ಟಿದ್ದಾರೆ ಎಂಬ ಆರೋಗ್ಯ ಇಲಾಖೆಯ ಮಾಹಿತಿಯ ಕುರಿತಂತೆ, ಮಂಗನ ಕಾಯಿಲೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಕಾಡುಪ್ರಾಣಿಯಿಂದ ಮರಣ ಹೊಂದಿದವರಿಗೆ ಅರಣ್ಯ ಕಾಯ್ದೆಯಡಿಯಲ್ಲಿ ₹15 ಲಕ್ಷ ಪರಿಹಾರ ನೀಡಲು ಅವಕಾಶವಿರುವುದರಿಂದ, ಮಂಗನ ಕಾಯಿಲೆಯಿಂದ ಮರಣ ಹೊಂದಿದವರನ್ನು ಮತ್ತು ಹಾವು ಕಡಿತದಿಂದ ಮರಣ ಹೊಂದಿದವರಿಗೆ ಈ ಕಾಯಿದೆಯಡಿಯಲ್ಲಿಯೇ ಪರಿಹಾರ ಒದಗಿಸುವ ಕುರಿತಂತೆ ಪ್ರಸ್ತಾವನೆ ಸಲ್ಲಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ, ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಕೆಡಿಪಿ ಅನುಷ್ಠಾನ ಸಮಿತಿಯ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಇದ್ದರು.