ಕನ್ನಡಪ್ರಭ ವಾರ್ತೆ ಅಫಜಲ್ಪುರ
ಕಳೆದ 15 ದಿನಗಳಿಂದ ಮಹಾರಾಷ್ಟ್ರದ ಭೀಮಾ ನದಿ ಪಾತ್ರದಲ್ಲಿ ನಿರಂತರ ಮಳೆ ಆಗುತ್ತಿರುವುದರಿಂದ ತಾಲೂಕಿನ ಭೀಮಾ ನದಿಗೆ ನೀರು ಬಂದಿದ್ದು ಪಟ್ಟಣಕ್ಕೆ ನೀರು ಪೂರೈಕೆ ಸಮಸ್ಯೆ ಬಹುತೇಕ ಬಗೆಹರಿದಂತಾಗಿದೆ. ಇದರಿಂದ ಜಲಾಶಯದ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ತುಂಬಾ ಅನುಕೂಲವಾಗಿದೆ.ತಾಲೂಕಿನ ರೈತರ ಜೀವ ನಾಡಿ ಭೀಮಾ ನದಿ ಕಳೆದ ನಾಲ್ಕೈದು ತಿಂಗಳಿನಿಂದ ಸಂಪೂರ್ಣ ಬತ್ತಿ ಹೋಗಿತ್ತು. ನದಿ ನೀರನ್ನು ನಂಬಿ ನದಿ ತೀರದ ಗ್ರಾಮಗಳ ಸಾವಿರಾರು ಎಕರೆಯಲ್ಲಿ ರೈತರು ಬೆಳೆದಿದ್ದ ಕಬ್ಬು ಬಾಳೆ ಸೇರಿದಂತೆ ವಿವಿಧ ಬೆಳೆಗಳನ್ನು ಉಳಿಸಿಕೊಳ್ಳಲು ಅನ್ನದಾತರು ಬಹಳಷ್ಟು ಹರಸಾಹಸ ಪಟ್ಟಿದ್ದರು. ರೈತರು ಒಂದು ಕುಣಿಗೆ 10-15 ಸಾವಿರ ರು. ಖರ್ಚು ಮಾಡಿ ಕುಣಿ (ಗುಂಡಿ) ತೋಡಿ ಅಲ್ಲಿಂದ ನೀರು ಪಡೆಯಲು ಅನ್ನದಾತರು ಹಗಲಿರುಳು ಶ್ರಮಿಸಿದ್ದರು.ಇದರಿಂದ ಸಿಕ್ಕಷ್ಟು ನೀರು ಪಡೆದು ಹೊಲಗಳಿಗೆ ಪಂಪ್ ಸೆಟ್ ಮೂಲಕ ನೀರು ಹರಿಸಿದ್ದರು ಪ್ರತಿ ವರ್ಷ ಫೆಬ್ರವರಿ, ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಬೆಳೆ ಉಳಿಸಿಕೊಳ್ಳಲು ಇಲ್ಲಿನ ರೈತರು ಪಡುವ ಪಾಡು ಬಲು ಕಷ್ಟಕರವಾಗಿತ್ತು. ಭೀಮಾ ಜಲಾಶಯದಲ್ಲಿ ಸದ್ಯ 2.586 ಟಿಎಂಸಿ ಅಡಿ ಮಳೆ ನೀರು ಸಂಗ್ರಹವಾಗಿದೆ ಮತ್ತು 2,660 ಒಳಹರಿವು ಇದೆ. ಈವರೆಗೂ ಮಹಾರಾಷ್ಟ್ರದ ಯಾವ ಜಲಾಶಯದಿಂದಲೂ ಭೀಮಾ ನದಿಗೆ ನೀರು ಬಿಟ್ಟಿಲ್ಲ. ಪುರಸಭೆಯವರ ಬೇಡಿಕೆ ತಕ್ಕಂತೆ ಭೀಮಾ ನದಿಯ ಕೆಳಗಿನ ಭಾಗದವರಿಗೆ ಕುಡಿಯಲು ನೀರು ಬಿಡಲಾಗುತ್ತಿದೆ ಸದ್ಯಕ್ಕೆ ಕುಡಿಯಲು ಮಾತ್ರ ನೀರು ಬಳಕೆ ಮಾಡಲಾಗುತ್ತಿದೆ ಎಂದು ಭೀಮಾ ನದಿ ಉಪ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಸಂತೋಷ ಕುಮಾರ ಸಜ್ಜನ ಹೇಳಿದರು.
ತಾಲೂಕಿನ ಮಣ್ಣೂರ ಗ್ರಾಮದ ಭೀಮಾ ನದಿಯಲ್ಲಿ, ಕಳೆದ ಮೂರು ನಾಲ್ಕು ತಿಂಗಳಿಂದ ನೀರು ಇರಲಿಲ್ಲ. ಇದರಿಂದ ಗ್ರಾಮದೇವತೆ ಯಲ್ಲಮ್ಮ ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ತುಂಬಾ ತೊಂದರೆ ಆಗಿತ್ತು ಸದ್ಯಕ್ಕೆ ನದಿಗೆ ನೀರು ಬಂದಿದೆ. ಇದರಿಂದ ಭಕ್ತರಿಗೆ ತುಂಬಾ ಅನುಕೂಲವಾಗಿದೆ ಎಂದು ಯಲ್ಲಮ್ಮ ದೇವಿಯ ಅರ್ಚಕರು ಹೇಳಿದರು.