ಮಾರುತಿ ಶಿಡ್ಲಾಪೂರ
ಸೈನ್ಯಕ್ಕೆ ಸೇರುವ ಯುವ ಉತ್ಸಾಹಿ ಯುವಕರನ್ನು ಸಿದ್ಧಗೊಳಿಸುವ ಉಚಿತ ತರಬೇತಿ ಶಿಬಿರವೊಂದು ಬೆಳಗಾಲಪೇಟೆಯಲ್ಲಿ ಅರ್ಥಪೂರ್ಣವಾಗಿ ನಡೆಯುತ್ತಿದೆ.
ಹಾನಗಲ್ಲ ತಾಲೂಕಿನ ಬೆಳಗಾಲಪೇಟೆಯಲ್ಲಿ ಶ್ರೀವೀರಭದ್ರೇಶ್ವರ ದೇವಸ್ಥಾನ ಸೇವಾ ಸಮಿತಿ, ಶ್ರೀಗುರು ಕುಮಾರೇಶ್ವರಮಠ ಜೀರ್ಣೋದ್ಧಾರ ಸೇವಾ ಸಮಿತಿ, ಮಾತೋಶ್ರೀ ಲಿಂ.ರುದ್ರಮ್ಮ ಗುರುಪಾದಪ್ಪ ಕಮಡೊಳ್ಳಿ ಸ್ಮಾರಕ ಟ್ರಸ್ಟ್ ಸಂಯುಕ್ತವಾಗಿ ಒಂದು ತಿಂಗಳ ಸೈನ್ಯ ತರಬೇತಿ ನಡೆಸುತ್ತಿದ್ದು, ರಾಜ್ಯದ ೧೨ ಜಿಲ್ಲೆಗಳ ೯೨ ಸೇನಾ ಸೇವಾಪೇಕ್ಷಿತ ಯುವಕರು ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ.ಪ್ರತಿದಿನ ಬೆಳಗಿನ ೪.೩೦ಕ್ಕೆ ಆರಂಭವಾಗುವ ತರಬೇತಿ ಚಟುವಟಿಕೆಗಳು ರಾತ್ರಿ ೧೦ ಗಂಟೆಯವರೆಗೆ ನಿರಂತರವಾಗಿರುತ್ತವೆ. ಧ್ಯಾನ ಪ್ರಾತಃಸ್ಮರಣೆ, ಶಾರೀರಿಕ ತರಬೇತಿ ಮೊದಲಾಗಿ, ಕ್ರೀಡಾ ಚಟುವಟಿಕಗಳ ಮೂಲಕ ಶಾರೀರಿಕ ಸಶಕ್ತೀಕರಣಕ್ಕೆ ತರಬೇತಿ ನೀಡಲಾಗುತ್ತಿದೆ. ಸಮಾಜ ಸೇವೆಯ ತರಬೇತಿಗಾಗಿ ದೇವಸ್ಥಾನಗಳ ಸ್ವಚ್ಛತೆ, ರುದ್ರಭೂಮಿಯಲ್ಲಿನ ಕಂಟಿ ಕಸ ತೆಗೆದು, ಅಲ್ಲಿ ಒಳ್ಳೆಯ ಗಿಡ ನೆಡುವುದು ಸೇರಿದಂತೆ ಊರಿನಲ್ಲಿ ಸ್ವಚ್ಛತೆ ಕೈಗೊಂಡು ಊರಲ್ಲಿ ಜಾಗೃತಿ ಮೂಡಿಸುವ ತರಬೇತಿಯನ್ನು ನೀಡಲಾಗುತ್ತಿದೆ. ದೇಶ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ಪ್ರೀತಿ ವಿಶ್ವಾಸವನ್ನು ಬೆಳೆಸಲಾಗುತ್ತಿದೆ. ಸ್ವಾಧ್ಯಾಯ, ಕಡ್ಡಾಯ ವಿಶ್ರಾಂತಿ, ಶಿಸ್ತು ಸಂಯಮದ ತರಬೇತಿ, ಆಟಗಳ ಮೂಲಕ ಶಾರೀರಿಕ ಸದೃಢತೆಗೆ ಅವಕಾಶ ಮಾಡಿಕೊಡಲಾಗುತ್ತಿದೆ.
ಈ ತರಬೇತಿಗೆ ಹಿರಿಯ ಕೆಎಎಸ್ ಅಧಿಕಾರಿ ವಿಶ್ವನಾಥ ಹಿರೇಮಠ ಸೌಹಾರ್ದದಯುತ ಸಾಥ್ ನೀಡಿದ್ದಾರೆ. ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಶಾಂತವೀರೇಶ ನೆಲೋಗಲ್ಲ, ಶ್ರೀಗುರು ಕುಮಾರೇಶ್ವರ ಮಠ ಜೀರ್ಣೋದ್ಧಾರ ಸೇವಾ ಸಮತಿ ಅಧ್ಯಕ್ಷ ಜಯಲಿಂಗಪ್ಪ ಹಳಕೊಪ್ಪ ತಮ್ಮ ಕಮಿಟಿಯೊಂದಿಗೆ ಸಹಕಾರ ನೀಡಿದ್ದಾರೆ. ಅತ್ಯಂತ ಪರಿಣಾಮಕಾರಿಯಾದ ತರಬೇತಿ ಇದಾಗಿದ್ದು, ಬಹುತೇಕ ಶಿಬಿರಾರ್ಥಿಗಳು ರೈತರು ಹಾಗೂ ರೈತ ಕಾರ್ಮಿಕರ ಮಕ್ಕಳು ಇಲ್ಲಿದ್ದಾರೆ.
ದೇಶ ಕಟ್ಟುವ ಸೈನಿಕರಾಗುವವರಿಗೆ ತರಬೇತಿ ನೀಡುವ ಕಾರ್ಯಕ್ಕೆ ಹಿರಿಯ ಕೆಎಎಸ್ ಅಧಿಕಾರಿ ವಿಶ್ವನಾಥ ಹಿರೇಮಠ ಪ್ರೇರಣೆ ಆದರು. ಎಲ್ಲ ಸಹಕಾರ ನೀಡಿದರು. ಎಲ್ಲರ ಶುಭಾಶಯದಿಂದ ಯಶಸ್ವಿ ತರಬೇತಿ ನಡೆಯುತ್ತಿರುವುದೇ ಸಂತೋಷ. ಇದಕ್ಕೆ ನನ್ನ ತಾಯಿ ದೊಡ್ಡ ಪ್ರೇರಣೆ.
ಅತ್ಯುತ್ತಮ ಶಿಬಿರ
ರಾಘವೇಂದ್ರ ಕೆ., ತರಬೇತುದಾರ